ಬೆಂಗಳೂರು: ಆರು ದಿನಗಳ ಕಾಲ ಕೋರಮಂಗಲ ಕೆಎಸ್ಆರ್ಪಿ ಮೈದಾನದಲ್ಲಿ ನಡೆಯಲಿರುವ 2023ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಮರಿಸ್ವಾಮಿ ಇಂದು ಚಾಲನೆ ನೀಡಿದರು.
ಕ್ರೀಡಾಕೂಟದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಸುಮಾರು 40 ಪೊಲೀಸ್ ತಂಡಗಳು ಪಾಲ್ಗೊಂಡಿವೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಡಿಜಿಪಿ ಕಮಲ್ ಪಂತ್, ಸಿ.ಎಚ್.ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ನಿವೃತ್ತ ಡಿಜಿಪಿ ಮರಿಸ್ವಾಮಿ, "ಬಹಳ ಸಂತೋಷದಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇನೆ. ನಾನು ನಿವೃತ್ತಿಯಾಗುವುದಕ್ಕೂ ಮುಂಚೆ ವಾರ್ಷಿಕ ಕ್ರೀಡಾಕೂಟ ನಡೆಸುತ್ತಿದ್ದೆವು. ಅದು ಸತತವಾಗಿ ನಡೆದುಕೊಂಡು ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಕ್ರೀಡಾಕೂಟದಲ್ಲಿ ಭಾಗವಹಿಸುವವರ ಸಂಖ್ಯೆ, ಹಾಗೂ ಅವರೊಳಗಿನ ಸ್ಪರ್ಧೆ ಹೆಚ್ಚಾಗುತ್ತಿದೆ. ಇದು ರಾಜ್ಯ ಪೊಲೀಸ್ ಇಲಾಖೆಗೆ ಹೆಮ್ಮೆಯ ವಿಚಾರ" ಎಂದರು.
ಬಳಿಕ ಮಾತನಾಡಿದ ಡಿಜಿ ಹಾಗೂ ಐಜಿಪಿ ಅಲೋಕ್ ಮೋಹನ್, "ಪೊಲೀಸರಿಗೆ ಕ್ರೀಡಾಸ್ಫೂರ್ತಿ ಬೇಕು. ತನಿಖಾ ಕಾಲದಲ್ಲಿ ಇದೆಲ್ಲವೂ ನೆರವಾಗುತ್ತದೆ'' ಎಂದರು. ನೈತಿಕ ಪೊಲೀಸ್ಗಿರಿ ಹಾಗೂ ಇತ್ತೀಚಿಗಿನ ಕರವೇ ಹೋರಾಟದ ವಿಚಾರವಾಗಿ ಮಾತನಾಡಿದ ಅವರು, "ಕರ್ನಾಟಕ ತುಂಬಾ ಶಾಂತಿಯುತ ರಾಜ್ಯ. ಇಲ್ಲಿ ಕಾನೂನು ಕೈಗೆತ್ತಿಕೊಳ್ಳುವ, ಕಾನೂನು ಸುವ್ಯವಸ್ಥೆಗೆ ತೊಡಕು ಮಾಡುವವರು ಯಾರೇ ಆದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು. ಅದೇ ರೀತಿ, ಸೈಬರ್ ಕ್ರೈಂ ವಿಚಾರವಾಗಿಯೂ ಮಾತನಾಡಿದ ಅವರು "ಸಮಾಜ ವಿರೋಧಿ ಕೆಲಸ ಯಾರು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
ಜನವರಿ 16ರಂದು ಸಂಜೆ ಕೋರಮಂಗಲದ ಕೆಎಸ್ಆರ್ಪಿ ಮೈದಾನದಲ್ಲಿ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ವಿಜೇತ ಕ್ರೀಡಾಪಟುಗಳು, ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಇದನ್ನೂ ಓದಿ: ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ: ಆಯೋಜಕರಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಸಂತೋಷ್ ಲಾಡ್