ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಉಲ್ಭಣಗೊಂಡಿರುವ ಹಿನ್ನೆಲೆ ಸೋಂಕು ನಿಯಂತ್ರಣ ಹಾಗೂ ಸಮರ್ಪಕ ನಿರ್ವಹಣೆಯಲ್ಲಿ ಆಡಳಿತ ವ್ಯವಸ್ಥೆಗೆ ಅಗತ್ಯ ನೆರವು ಹಾಗೂ ಮಾರ್ಗದರ್ಶನ ನೀಡಲು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮುಂದಾಗಿದೆ.
ಪ್ರಮುಖವಾಗಿ ಸ್ಥಳೀಯ ಮಟ್ಟದಲ್ಲಿ ಕೊರೊನಾ ಸೋಂಕಿತರು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ಒದಗಿಸಲು ಹಾಗೂ ಕೋವಿಡ್ಗೆ ಸಂಬಂಧಿಸಿದ ವಿಚಾರಗಳಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಮತ್ತು ಸಹಕಾರ ನೀಡಲು ರಾಜ್ಯದ ಎಲ್ಲ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ರಾಜ್ಯಮಟ್ಟದ ಮೇಲ್ವಿಚಾರಣಾ ಸಮಿತಿ ನಿರ್ದೇಶನ ನೀಡಿದೆ.
ಈ ವಿಚಾರದಲ್ಲಿ ಏಪ್ರಿಲ್ ಕೊನೆಯ ವಾರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿ ನಿರ್ದಿಷ್ಟ ನಿರ್ದೇಶನಗಳನ್ನು ನೀಡಿ, ತಕ್ಷಣ ಕಾರ್ಯೋನ್ಮುಖರಾಗುವಂತೆ ಸೂಚಿಸಿತ್ತು. ಅದರಂತೆ ಬಹುತೇಕ ಎಲ್ಲ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಈಗಾಗಲೇ ಕಾರ್ಯಪ್ರವೃತ್ತರಾಗಿವೆ.
ಕಾನೂನು ಸೇವಾ ಪ್ರಾಧಿಕಾರಗಳು ಮಾಡುತ್ತಿರುವುದೇನು :
ಕೋವಿಡ್ ವಿರುದ್ಧದ ಹೋರಾಟದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಲಸಿಕಾ ಅಭಿಯಾನಕ್ಕೆ ಸಹಾಯ ಮಾಡಬೇಕು. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಕೋವಿಡ್ ಸೋಂಕಿತರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ನೆರವು ನೀಡಲು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು. ಕಾನೂನು ನೆರವು, ಹೆಲ್ಪ್ ಲೈನ್ ಹಾಗೂ ಜೈಲು ಕ್ಲಿನಿಕ್ ಗಳ ಸಮರ್ಪಕ ಕಾರ್ಯ ನಿರ್ವಹಣೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಖಚಿತಪಡಿಸಿಕೊಳ್ಳಬೇಕು.
ಮೇಲ್ವಿಚಾರಣಾ ಸಮಿತಿ :
ಕಾನೂನು ಸೇವಾ ಪ್ರಾಧಿಕಾರ ಕಾಯ್ದೆ-1987ರ ಪ್ರಕಾರ ವಿಕೋಪಗಳ ಸಂತ್ರಸ್ತರು ಉಚಿತ ಕಾನೂನು ಸೇವೆ ಸೇರಿ ಇತರೆ ನೆರವು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಕೋವಿಡ್ ಕೂಡ ಒಂದು ವಿಕೋಪವಾಗಿದೆ. ಕೋವಿಡ್ ಗೆ ಸಂಬಂಧಿಸಿದ ವಿಚಾರಗಳ ಮೇಲ್ವಿಚಾರಣೆಗೆಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್ ವೇಣುಗೋಪಾಲಗೌಡ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಮೇಲ್ವಿಚಾರಣಾ ಸಮಿತಿ ರಚಿಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಪಿ ಬಳಿಗಾರ, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಟಿ ರಮೇಶ್ ಅವರು ಸಮಿತಿಯ ಸದಸ್ಯರಾಗಿದ್ದಾರೆ. ಕೋವಿಡ್ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಅದರ ನಿಯಂತ್ರಣ ಹಾಗೂ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತಗಳಿಗೆ ಅಗತ್ಯ ಸಹಾಯ ಹಾಗೂ ಮಾರ್ಗದರ್ಶನ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ ಎನ್ನುತ್ತಾರೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ್ ಶೆಟ್ಟಿ.