ಬೆಂಗಳೂರು : "ಕಾನೂನು ಪದವಿ ಪಡೆದವರು ವೃತ್ತಿ ಆರಂಭಿಸುವ ಮುನ್ನ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡೇ ಮುಂದುವರೆಯಬೇಕು. ಇಂತಹ ಮಾತೃ ಸಂಸ್ಥೆಗೆ ಈವರೆಗೂ ಒಂದು ಸ್ವಂತ ಕಟ್ಟಡ ಇಲ್ಲದಿರುವುದು ನಿಜಕ್ಕೂ ವಕೀಲ ಸಮುದಾಯಕ್ಕಾಗಿರುವ ಅನ್ಯಾಯ." ಇದು ಕರ್ನಾಟಕ ರಾಜ್ಯ ವಕೀಲರ ಪರಿಷತ್(ಕೆ.ಎಸ್.ಬಿ.ಸಿ) ಅಧ್ಯಕ್ಷ ಜೆ.ಎಂ ಅನಿಲ್ ಕುಮಾರ್ ಅವರ ಬೇಸರದ ನುಡಿಗಳು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆರಂಭವಾಗಿ 7 ದಶಕಳೇ ಕಳೆದಿವೆ. ಆದರೆ, ಸರ್ಕಾರ ಈವರೆಗೂ ಶಾಸನಾತ್ಮಕ ಸಂಸ್ಥೆಗೆ ಒಂದು ಸ್ವಂತ ಕಟ್ಟಡ ನಿರ್ಮಿಸಿಕೊಡುವಷ್ಟು ಉದಾರತೆ ತೋರಿಲ್ಲ. ಪ್ರಸ್ತುತ ಕೆಎಸ್ಬಿಸಿ ಹೈಕೋರ್ಟ್ ಆವರಣದಲ್ಲಿರುವ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಇತ್ತೀಚೆಗೆ ಹೈಕೋರ್ಟ್ ತಮಗೇ ಈ ಜಾಗದ ಅವಶ್ಯಕತೆ ಇದ್ದು, ಆದಷ್ಟು ಬೇಗ ಖಾಲಿ ಮಾಡಿಕೊಡಿ ಎನ್ನುತ್ತಿದೆ. ಹೀಗಾಗಿ ವಕೀಲರ ಪರಿಷತ್ತು ಮುಂದೆಲ್ಲಿಗೆ ಎಂಬ ಆತಂಕದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಹಾಗೆಂದು ವಕೀಲರ ಪರಿಷತ್ತು ಬಲಹೀನ ಸಂಸ್ಥೆಯೇನಲ್ಲ. ಇದೇ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ವಕೀಲಿ ವೃತ್ತಿ ಆರಂಭಿಸಿದವರು ಇಂದು ಹೈಕೋರ್ಟ್, ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾಗಿದ್ದಾರೆ. ಇಲ್ಲಿಂದಲೇ ಘಟಾನುಘಟಿ ಕಾನೂನು ತಜ್ಞರು ಹೊರಹೊಮ್ಮಿದ್ದಾರೆ. ಸರ್ಕಾರದಲ್ಲಿನ ಆಗು-ಹೋಗುಗಳನ್ನು ನಿಯಂತ್ರಿಸುವಷ್ಟು ಪ್ರಭಾವಿ ವಕೀಲರು ಇದರ ಅಧ್ಯಕ್ಷರಾಗಿ, ಸದಸ್ಯರಾಗಿ ನಿರ್ಗಮಿಸಿದ್ದಾರೆ.
ಆದರೆ, ಯಾರೊಬ್ಬರೂ ಹಿಂದಿನ ಸರ್ಕಾರಗಳಿಗೆ ಸಂಸ್ಥೆಗೊಂದು ಸ್ವಂತ ಕಟ್ಟಡ ನಿರ್ಮಿಸಿಕೊಡಿ ಎಂದು ಗಟ್ಟಿಯಾಗಿ ಕೇಳಿದಂತೆ ಕಾಣುವುದಿಲ್ಲ. ಹೀಗಾಗಿ, ಇಂದು ಲಕ್ಷಕ್ಕೂ ಅಧಿಕ ವಕೀಲರನ್ನು ತನ್ನಲ್ಲಿ ನೋಂದಾಯಿಸಿಕೊಂಡಿರುವ ಪರಿಷತ್ತು ಅನಾಥ ಪ್ರಜ್ಞೆ ಎದುರಿಸುತ್ತಿದೆ. ಈ ಕುರಿತು ಪರಿಷತ್ತಿನ ಹಾಲಿ ಅಧ್ಯಕ್ಷರನ್ನು ಕೇಳಿದರೆ, "ಕೆಎಸ್ಬಿಸಿ ಆರಂಭವಾಗಿ 70 ವರ್ಷ ಕಳೆದಿದ್ದರೂ ಸಂಸ್ಥೆಗೆ ಒಂದು ಸ್ವಂತ ಕಟ್ಟಡವಿಲ್ಲದಿರುವುದು ನಿಜಕ್ಕೂ ನಮ್ಮ ದೌರ್ಭಾಗ್ಯ.
ಇಂದು ತಾಲೂಕು ಅಥವಾ ಜಿಲ್ಲಾ ಕೋರ್ಟ್ಗಳ ಬಳಿ ಹೋದರೂ, ಅಲ್ಲೆಲ್ಲ ಅತ್ಯುತ್ತಮವಾದ ವಕೀಲರ ಸಂಘದ ಕಟ್ಟಡಗಳಿವೆ. ನಮ್ಮವರು ಹಿಂದಿನಿಂದಲೂ ಪ್ರಯತ್ನ ಮಾಡಿದ್ದಾರೆ. ಆದರೆ, ಈವರೆಗೂ ಯಾಕೆ ಸಿಕ್ಕಿಲ್ಲ, ಎಲ್ಲಿ ತಪ್ಪಾಗಿದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಇದೀಗ ಹೈಕೋರ್ಟ್, ಕಟ್ಟಡ ಖಾಲಿ ಮಾಡಿಕೊಡುವಂತೆ ಕೇಳುತ್ತಿದೆ." "ವೈದ್ಯಕೀಯ ಮಂಡಳಿಗಳಿಗೆ, ಎಂಜಿನಿಯರ್ಸ್ ಅಸೋಸಿಯೇಷನ್ಗೆ ಅವುಗಳದ್ದೇ ಆದ ಕಟ್ಟಡವಿದೆ. ಸರ್ಕಾರಿ ನೌಕರರ ಸಂಘಗಳಿಗೂ ಸ್ವಂತ ಕಟ್ಟಡಗಳಿವೆ. ಆದರೆ, ನ್ಯಾಯಾದಾನ ಪ್ರಕ್ರಿಯೆಯಲ್ಲಿ ತೊಡಗಿರುವ ವಕೀಲರ ಪರಿಷತ್ತಿಗೆ ಒಂದು ಸ್ವಂತ ಕಟ್ಟಡವಿಲ್ಲದಿರುವುದು ನಿಜಕ್ಕೂ ಅನ್ಯಾಯ. ಹೊಸ ಕಟ್ಟಡದ ವ್ಯವಸ್ಥೆ ಮಾಡಿಕೊಡುವವರೆಗೂ ಇದೇ ಸ್ಥಳದಲ್ಲಿ ಕಾರ್ಯ ಮುಂದುವರೆಸಲು ಪರಿಷತ್ತು ನಿರ್ಣಯ ಕೈಗೊಂಡಿದ್ದು, ಈ ವಿಚಾರವನ್ನು ಸರ್ಕಾರದ ಗಮನಕ್ಕೂ ತಂದಿದ್ದೇವೆ" ಎನ್ನುತ್ತಾರೆ.
"ಯಾವುದೇ ರಾಜ್ಯದಲ್ಲಿ ಗಮನಿಸಿದರೂ, ಹೈಕೋರ್ಟ್ ಅಕ್ಕಪಕ್ಕದಲ್ಲೇ ರಾಜ್ಯ ವಕೀಲರ ಪರಿಷತ್ತಿಗೆ ಸುಸಜ್ಜಿತ ಕಟ್ಟಡವಿದೆ. ಹೀಗಾಗಿ ನಮಗೂ ಸೂಕ್ತ ಜಾಗದಲ್ಲಿ ಒಂದು ಸ್ವಂತ ಕಟ್ಟಡ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಅಡ್ವೋಕೇಟ್ ಜನರಲ್, ಸರ್ಕಾರ ಸದ್ಯ ಕೊರೊನಾ ನಿರ್ವಹಣೆಯಲ್ಲಿ ಬ್ಯುಸಿಯಾಗಿದೆ. ಸ್ವಲ್ಪ ಕಾಲಾವಕಾಶ ಕೊಡಿ. ಸೂಕ್ತ ಜಾಗದಲ್ಲಿ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ" ಎನ್ನುತ್ತಾರೆ ಅಧ್ಯಕ್ಷ ಅನಿಲ್ ಕುಮಾರ್.
ಸರ್ಕಾರದ ನಿರ್ಲಕ್ಷ್ಯ : ಪರಿಷತ್ತಿಗೆ ಸ್ವಂತ ಕಟ್ಟಡ ಏಕಿಲ್ಲ ಎಂದು ಕೆಎಸ್ಬಿಸಿ ಮಾಜಿ ಅಧ್ಯಕ್ಷ ಪಿಪಿ ಹೆಗ್ಡೆ ಅವರಲ್ಲಿ ವಿಚಾರಿಸಿದರೆ, "ಯಾವುದೇ ಸರ್ಕಾರ ವಕೀಲರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಯಾಕೆಂದರೆ, ವಕೀಲರು ವೋಟ್ ಬ್ಯಾಂಕ್ ಅಲ್ಲ. ಹೀಗಾಗಿ ಸರ್ಕಾರ ಹಿಂದಿನಿಂದಲೂ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ. ಕೆಲ ವಕೀಲರು ಸಾಕಷ್ಟು ಪ್ರಭಾವಿಗಳಾಗಿದ್ದಾರೆ. ಆದರೆ, ಅವರಿಂದ ಒಟ್ಟಾರೆ ವಕೀಲ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿಯೇ ಮಾತೃ ಸಂಸ್ಥೆಯಾದ ವಕೀಲರ ಪರಿಷತ್ತಿಗೆ ಇಂದಿಗೂ ಸ್ವಂತ ಕಟ್ಟಡವಿಲ್ಲ" ಎನ್ನುತ್ತಾರೆ.
ಜಾಗದ್ದೇ ಸಮಸ್ಯೆ : ಪರಿಷತ್ತಿನ ಮಾಜಿ ಅಧ್ಯಕ್ಷರಾದ ಜಯಕುಮಾರ್ ಎಸ್ ಪಾಟೀಲ್ ಅವರು ವಿವರಿಸಿ "ಪರಿಷತ್ತಿಗೆ ಜಾಗ ನೀಡುವಂತೆ ಹಿಂದಿನಿಂದಲೂ ಸರ್ಕಾರದ ಜೊತೆ ಚರ್ಚಿಸುತ್ತಲೇ ಬಂದಿದ್ದೇವೆ. ಆದರೆ, ಜಾಗದ್ದೇ ಸಮಸ್ಯೆಯಾಗಿದೆ. ಸಿಟಿ ಸಿವಿಲ್ ಕೋರ್ಟ್ ಸಮೀಪ, ಫ್ರೀಡಂ ಪಾರ್ಕ್ ಸಮೀಪ, ಅಗ್ನಿಶಾಮಕ ದಳ ಕಚೇರಿ ಸಮೀಪ, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಸೇರಿದಂತೆ ಯಾವುದಾದರೊಂದು ಕಡೆ ಜಾಗ ನೀಡುವಂತೆ ಕೇಳಿದ್ದೆವು. ಆದರೆ, ಕಾರಣಾಂತರಗಳಿಂದ ಜಾಗ ಇಂದಿಗೂ ಸಿಕ್ಕಿಲ್ಲ. ಇದೀಗ ಸರ್ಕಾರ ಹೈಕೋರ್ಟ್ ಅಕ್ಕಪಕ್ಕದಲ್ಲಿ ಜಾಗವಿಲ್ಲ. ಹೊಸ ನಿವೇಶಗಳಲ್ಲಿ ಎಲ್ಲಾದರೊಂದು ಕಡೆ ಕೊಡುತ್ತೇವೆ ಎನ್ನುತ್ತಿದೆ. ನಾವು ಹೈಕೋರ್ಟ್ ಸಮೀಪದಲ್ಲಿಯೇ ಕೊಡುವಂತೆ ಒತ್ತಾಯಿಸಿದ್ದೇವೆ" ಎನ್ನುತ್ತಾರೆ ಅವರು.