ಬೆಂಗಳೂರು : ನೈಋತ್ಯ ಮುಂಗಾರು ದಕ್ಷಿಣ ಒಳನಾಡಿನಲ್ಲಿ ಚುರುಕುಗೊಂಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಸೋಮವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ 2-3 ದಿನ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಹಾಗು ಉತ್ತರ ಒಳನಾಡಿನಲ್ಲಿ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಇಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ ಸುರಿದಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇದೆ ಎಂದು ಹೇಳಿದೆ.
ಇಂದು ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿ 5, ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮತ್ತು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ 4, ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 2, ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 1 ಸೆ.ಮೀ ಮಳೆಯಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚಿನ ಗರಿಷ್ಠ ಉಷ್ಣಾಂಶ 35.8 ಡಿಗ್ರಿ ಸೆಲ್ಸಿಯಸ್ ಶಿರಾಳಿಯಲ್ಲಿ ದಾಖಲಾಗಿದೆ. ಅತಿ ಕಡಿಮೆ ಉಷ್ಣಾಂಶ 16.2 ಡಿ.ಸೆ ವಿಜಯಪುರ ಮತ್ತು ಚಿಕ್ಕನಹಳ್ಳಿಯಲ್ಲಿ ದಾಖಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಮಳೆ: ಬೆಂಗಳೂರು ನಗರದಲ್ಲಿ ಮುಂದಿನ 48 ಗಂಟೆ ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣವಿರಲಿದೆ. ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳ ಸಾಧ್ಯತೆಗಳಿವೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ; ಜನಜೀವನ ಸಂಪೂರ್ಣ ಅಸ್ತವ್ಯಸ್ತ