ಬೆಂಗಳೂರು : ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ರಾಜ್ಯದ ವಿವಿಧೆಡೆ 3 ಲಕ್ಷ ಉಚಿತ ಮಾಸ್ಕ್ ವಿತರಣಾ ಅಭಿಯಾನ ಆರಂಭವಾಗಿದೆ.
ಕೋವಿಡ್-19 ವಿರುದ್ಧ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಸಲಹೆಯಂತೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ 3 ಲಕ್ಷ ಉಚಿತ ಮಾಸ್ಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಹಿಳಾ ಕಾಂಗ್ರೆಸ್‌ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಾವೇ ಮಾಸ್ಕ್‌ಗಳನ್ನು ತಯಾರಿಸಿ ವಿತರಿಸುವುದರ ಮೂಲಕ ಕೈ ಜೋಡಿಸಿದ್ದಾರೆ. ರಾಜ್ಯಾದ್ಯಂತ ಈಗಾಗಲೇ 37,000 ಮಾಸ್ಕ್ ವಿತರಿಸಲಾಗಿದೆ.
ಮಹಿಳಾ ಕಾಂಗ್ರೆಸ್‌ನ ಜಿಲ್ಲಾಧಿಕಾರಿಗಳು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಮತ್ತು ಬ್ಲಾಕ್ ಅಧ್ಯಕ್ಷರುಗಳು ಆಯಾ ಜಿಲ್ಲೆಗಳಲ್ಲಿ ತಮ್ಮ ಕೈಲಾದಷ್ಟು ಸಹಾಯ ಊಟ, ದಿನಸಿ, ತರಕಾರಿಗಳ ನೆರವು ಜೊತೆಗೆ ಮಾಸ್ಕ್‌ಗಳನ್ನೂ ಕೂಡ ವಿತರಣೆ ಮಾಡುತ್ತಿದ್ದಾರೆ. ರಾಜ್ಯ ಮಹಿಳಾ ಕಾಂಗ್ರೆಸ್ ಕೂಡ ಕೋವಿಡ್-19 ಸಂಕಷ್ಟದ ಕಾಲದಲ್ಲಿ 3 ಲಕ್ಷ ಮಾಸ್ಕ್ ವಿತರಣೆ ಮಾಡುವ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ನನ್ನ ಸಹೋದರಿಯರು ಕೈ ಜೋಡಿಸಿದ್ದಾರೆ. ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ರಾಜ್ಯ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಬಿ ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.
ಮಾಸ್ಕ್‌ಗಳನ್ನು ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿರುವ ನಮ್ಮ ಶಾಖೆಗಳಿಗೆ ಕಳುಹಿಸಿಕೊಡಲಾಗಿದೆ. ಆಯಾ ಮಹಿಳಾ ವಿಭಾಗದವರು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಮಾಸ್ಕ್ ವಿತರಿಸುವ ಕಾರ್ಯ ಮಾಡಲಿದ್ದಾರೆ. ಅವರಿಗೆ ಈಗಾಗಲೇ ಹಂಚಿಕೆ ಕುರಿತು ಮಾರ್ಗದರ್ಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.