ಬೆಂಗಳೂರು: ಕೋವಿಡ್-19 ಪ್ರಕರಣಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಅರೆವೈದ್ಯರಿಗೆ ಹೆಚ್ಚುವರಿ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಭರವಸೆ ನೀಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿನ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್ಐ) ಕೊರೊನಾ ವೈರಸ್, ಎಚ್1ಎನ್ 1 ಸೇರಿದಂತೆ ಇತರ ರೋಗಗಳ ಪರೀಕ್ಷಾ ಪ್ರಯೋಗಾಲಯ ಕೇಂದ್ರ ಉದ್ಘಾಟಿಸಿ ಸಚಿವ ಸುಧಾಕರ್ ಮಾತನಾಡಿದರು.
'ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಲ್ಲದೆ ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವವರಿಗೂ ವಿಮಾ ಸೌಲಭ್ಯವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವೈದ್ಯರ ಸುರಕ್ಷತೆಯೂ ನಮಗೆ ಮುಖ್ಯ' ಎಂದು ಹೇಳಿದರು.
ಈ ವಿಷಯ ಚರ್ಚೆಯ ಹಂತದಲ್ಲಿದ್ದು, ಶೀಘ್ರವೇ ಅಧಿಕೃತ ಪ್ರಕಟಣೆ ಹೊರಬರಲಿದೆ. ವೈದ್ಯರು, ಅರೆವೈದ್ಯರು ಮತ್ತು ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವವರಿಗೆ ಇದು ಹೆಚ್ಚು ಅಗತ್ಯವಾಗಿದೆ. ನೀವು ಮೊದಲು ನಿಮ್ಮನ್ನು ರಕ್ಷಿಸಿಕೊಳ್ಳಬೇಕು. ವೃತ್ತಿಪರ ನಿರ್ಲಕ್ಷ್ಯಕ್ಕೆ ಯಾವುದೇ ಅವಕಾಶ ಇರಬಾರದು ಎಂದರು.