ಬೆಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿಯ ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ ಸೇರಿದಂತೆ ಮತ್ತಿತರ ಆರೋಪಿಗಳ ವಿರುದ್ಧದ ತನಿಖೆಯ ಪ್ರಗತಿ ಬಗ್ಗೆ ಈ ತಿಂಗಳ 21ರ ಒಳಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಉಪನ್ಯಾಸಕರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ತನಿಖಾ ಪ್ರಗತಿ ವಿವರ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಈ ತಿಂಗಳ 21ಕ್ಕೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಿವಿಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರ, ನೇಮಕಾತಿ ಹಗರಣ, ಅಂಕಪಟ್ಟಿ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಭಕ್ತವತ್ಸಲಂ ಸಮಿತಿ ರಾಜ್ಯಪಾಲರಿಗೆ ಈಗಾಗಲೇ ವರದಿಯನ್ನು ಸಲ್ಲಿಸಿದೆ. ನಿಯಮಗಳನ್ನು ಉಲ್ಲಂಘಿಸಿ ನೇಮಕ ಹಾಗೂ ಹಣಕಾಸು ಅವ್ಯವಹಾರದ ಆರೋಪವನ್ನು ವಿವಿಯ ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ, ಎಂ.ಜಿ.ಕಷ್ಣನ್ ಎದುರಿಸುತ್ತಿದ್ದಾರೆ.
ಭಕ್ತವತ್ಸಲಂ ಸಮಿತಿ ನೀಡಿರುವ ವರದಿ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೋರ್ಟ್‌ಗೆ ಅರ್ಜಿದಾರರು ಪಿ.ಐ.ಎಲ್ ಸಲ್ಲಿಸಿದ್ದಾರೆಂದು ಕೋರ್ಟ್ ಗಮನಕ್ಕೆ ತಂದರು. ನ್ಯಾಯಪೀಠವು ವಕೀಲರ ವಾದ ಆಲಿಸಿ ತನಿಖೆಯ ಪ್ರಗತಿ ಏನಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವರದಿ ನೀಡಬೇಕೆಂದು ಸರಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.