ಬೆಂಗಳೂರು: ದೇಶದ ಸ್ಟಾರ್ಟ್ ಅಪ್ ವಲಯಕ್ಕೆ ಕರ್ನಾಟಕ ಮಹತ್ವದ ಕೊಡುಗೆ ನೀಡುತ್ತಿದೆ. ಡಬಲ್ ಇಂಜಿನ್ ತಾಕತ್ತಿನೊಂದಿಗೆ ರಾಜ್ಯದಲ್ಲಿ ಬಿಜೆಪಿ ಮುನ್ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬೊಮ್ಮಾಯಿ ಸರ್ಕಾರವನ್ನು ಹಾಡಿ ಹೊಗಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ಕರ್ನಾಟಕದ ಸಮಸ್ತ ಜನತೆಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು. ಇದು ನನ್ನ ಸೌಭಾಗ್ಯ. ಇಂದು ಬೆಂಗಳೂರಿನಲ್ಲಿ ವಿಶೇಷ ದಿನದಲ್ಲಿ ಭಾಗಿಯಾದೆ' ಎಂದು ಕನ್ನಡದಲ್ಲಿ ಮಾತು ಆರಂಭಿಸಿದರು.
ಮೇಡ್ ಇನ್ ಇಂಡಿಯಾ ಟ್ರೈನ್: ರಾಜ್ಯಕ್ಕೆ ಮೊದಲ ಮೇಡ್ ಇನ್ ಇಂಡಿಯಾ ಟ್ರೈನ್ ಸಿಕ್ಕಿದೆ. ಚೆನ್ನೈ, ಬೆಂಗಳೂರು ಹಾಗೂ ಮೈಸೂರನ್ನು ಸೇರಿಸುತ್ತದೆ. ಅಯೋಧ್ಯೆ ಪ್ರಯಾಣ ಹಾಗೂ ಕಾಶಿಯ ದರ್ಶನ ಮಾಡುವ ಭಾರತ್ ಗೌರವ ಕಾಶಿ ರೈಲು ಆರಂಭವಾಗಿದೆ. ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟನೆಯಾಗಿದೆ. ನಾನು ಸಾಮಾಜಿಕ ಜಾಲತಾಣದಲ್ಲಿ ಏರ್ಪೋರ್ಟ್ ಎರಡನೇ ಟರ್ಮಿನಲ್ ಬಗ್ಗೆ ಒಂದಿಷ್ಟು ಚಿತ್ರಗಳನ್ನು ಹಾಕಿದ್ದೆ. ಇಂದು ಅದನ್ನು ನೋಡಿದಾಗ ಚಿತ್ರದಲ್ಲಿ ಕಂಡಿದ್ದಕ್ಕಿಂತ ಭವ್ಯವಾಗಿದೆ ಮತ್ತು ಆಧುನಿಕವಾಗಿದೆ. ಆ ಮೂಲಕ ಬೆಂಗಳೂರು ಜನರ ಬಹು ಹಿಂದಿನ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ ಎಂದರು.
ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣ ಹಾಗೂ ಜಲಾಭಿಷೇಕದ ಅವಕಾಶ ನನಗೆ ಲಭಿಸಿತು. ನಮಗೆ ಭವಿಷ್ಯದ ಬೆಂಗಳೂರು ಹಾಗೂ ಭವಿಷ್ಯದ ಭಾರತಕ್ಕಾಗಿ ನಿರಂತರ ಸಮರ್ಪಿತ ಭಾವದಿಂದ ಕಾರ್ಯನಿರ್ವಹಿಸುವ ಪ್ರೇರಣೆಯನ್ನು ಕೆಂಪೇಗೌಡರು ನೀಡುತ್ತಾರೆ. ಸ್ವಾಮೀಜಿಗಳು ಆಶೀರ್ವಚನ ನೀಡುವಾಗಲೂ ಇದನ್ನೇ ಹೇಳಿದ್ದಾರೆ ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
ಬೆಂಗಳೂರು ಸ್ಟಾರ್ಟ್ ಅಪ್ನ ಆರಂಭದ ತಾಣ: ಇಂದು ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ಸ್ಟಾರ್ಟ್ ಅಪ್ ಮೂಲಕ ಇದು ಸಾಧ್ಯವಾಗಿದೆ. ಈ ಕ್ಷೇತ್ರದಲ್ಲಿ ದೇಶಕ್ಕೆ ಉತ್ತಮ ಹೆಸರು ಬಂದಿದ್ದರೆ ಅದಕ್ಕೆ ಬೆಂಗಳೂರಿನ ಕೊಡುಗೆ ಅತ್ಯಂತ ಪ್ರಮುಖವಾಗಿದೆ. ಸ್ಟಾರ್ಟ್ ಅಪ್ ಒಂದು ವಿಶ್ವಾಸವಾಗಿದೆ. ಬೆಂಗಳೂರು ಇಂದು ಸ್ಟಾರ್ಟ್ ಅಪ್ನ ಆರಂಭದ ತಾಣವಾಗಿದೆ. ಇಡೀ ಜಗತ್ತಿಗೆ ಇದೊಂದು ಉತ್ತಮ ಗುರುತಾಗಿ ಲಭಿಸಿದೆ ಎಂದರು.
ದೇಶದ ಹೊಸ ಗುರುತು: ವಂದೇ ಭಾರತ್ ಕೇವಲ ಒಂದು ರೈಲು ಮಾತ್ರವಲ್ಲ. ದೇಶದ ಹೊಸ ಗುರುತು ಸಹ ಆಗಿದೆ. ಭಾರತದ ರೈಲಿನ ಮುಂದಿನ ಭವಿಷ್ಯ ಹೇಗಿದೆ ಎಂಬುದರ ಒಂದು ಸಣ್ಣ ಝಲಕ್ ಇದಾಗಿದೆ. ಭಾರತ ವೇಗವಾಗಿ ಓಡುವ ಪ್ರಯತ್ನ ಮಾಡುತ್ತಿದೆ. ಮುಂದಿನ ಎಂಟು ವರ್ಷದಲ್ಲಿ ನಾವು ಭಾರತೀಯ ರೈಲಿಗೆ ಹೊಸ ಕಾಯ ಕಲ್ಪ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಸಾಗಿದ್ದೇವೆ. ನಮ್ಮ ಪ್ರಯತ್ನ ಮುಂದಿನ ದಿನಗಳಲ್ಲಿ ಭಾರತ ರೈಲಿಗೆ ಹೊಸ ಚಾಪನ್ನು ನೀಡಲಿದೆ.
ಸಂಚಾರ ಕ್ಷೇತ್ರದ ವೇಗವನ್ನು ಇದು ಹೆಚ್ಚಿಸಲಿದೆ. ಅತ್ಯಂತ ವೇಗವಾಗಿ ಸಾಗಿರುವ ಬ್ರಾಡ್ ಗೇಜ್ ಬದಲಾವಣೆ ಕಾರ್ಯ ರೈಲ್ವೆ ವ್ಯವಸ್ಥೆಯನ್ನು ಉತ್ತಮ ಸ್ಥಿತಿಗೆ ತರುವ ಕಾರ್ಯ ಮಾಡುತ್ತಿದೆ. ಕೇಂದ್ರ ಸರ್ಕಾರ ರೈಲು ಮಾರ್ಗದ ಜೊತೆ ರೈಲು ನಿಲ್ದಾಣವನ್ನು ಅತ್ಯಾಧುನಿಕಗೊಳಿಸುವ ಪ್ರಯತ್ನ ಮಾಡುತ್ತಿದೆ. ಇಂದು ಬೆಂಗಳೂರು ರೈಲು ನಿಲ್ದಾಣಕ್ಕೆ ಬಂದರೆ ಹೊಸ ಪ್ರಪಂಚಕ್ಕೆ ಬಂದ ಅನುಭವ ಆಗುತ್ತದೆ. ಇದೇ ರೀತಿ ದೇಶದ ಎಲ್ಲಾ ರೈಲು ನಿಲ್ದಾಣವನ್ನು ಆಧುನಿಕರಣ ಗೊಳಿಸುವುದು ಕೇಂದ್ರದ ಸರ್ಕಾರದ ಉದ್ದೇಶವಾಗಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ಖಡ್ಗದ ತೂಕವೇ 4 ಸಾವಿರ ಕೆಜಿ! ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ವಿಶೇಷತೆಗಳೇನು?
ವ್ಯಾಪಾರ ಉನ್ನತೀಕರಣಕ್ಕೆ ಸಹಕಾರಿ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಹ ಉತ್ತಮ ಕೊಡುಗೆಗಳು ಹಾಗೂ ಹೊಸ ಟರ್ಮಿನಲ್ ಜನರಿಗೆ ಕೊಡುಗೆಯಾಗಿ ಲಭಿಸಿದೆ. ಯಾವ ರೀತಿಯಲ್ಲಿ ದೇಶ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆಯೋ ಅದೇ ರೀತಿ ಏರ್ಪೋರ್ಟ್ ನಲ್ಲಿ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗುತ್ತದೆ. ಇದರಿಂದಾಗಿ ಕೇಂದ್ರ ಸರ್ಕಾರ ದೇಶದ ವಿವಿಧ ಭಾಗಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ 70ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು ಮುಂದಾಗಿತ್ತು. ಆದರೆ ಈಗ ಆ ಸಂಖ್ಯೆ 140ನ್ನ ದಾಟಿದೆ. ಈ ಹೊಸ ನಿಲ್ದಾಣಗಳು ಆಯಾ ನಗರದ ವ್ಯಾಪಾರ ಉನ್ನತೀಕರಣಕ್ಕೆ ಸಹಕಾರಿಯಾಗಿದೆ ಎಂದರು.
ಹಲವು ಕ್ಷೇತ್ರಗಳ ಪ್ರಗತಿ: ಭಾರತದ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಮಹತ್ವಪೂರ್ಣ ಲಾಭ ಕರ್ನಾಟಕಕ್ಕೂ ಸಿಗುತ್ತದೆ. ಮೂರು ವರ್ಷದ ಹಿಂದೆ ದೇಶ ಕೋವಿಡ್ ನಿಂದಾಗಿ ಬಳಲುತ್ತಿತ್ತು. ಆ ಸಂದರ್ಭದಲ್ಲಿ ಕರ್ನಾಟಕಕ್ಕೆ ನಾಲ್ಕು ಲಕ್ಷ ಕೋಟಿ ಬಂಡವಾಳ ಹರಿದುಬಂದಿದೆ. ಇದು ಕೇವಲ ಐಟಿ ಕ್ಷೇತ್ರವನ್ನು ಮಾತ್ರ ಒಳಗೊಂಡಿಲ್ಲ. ಜೈವಿಕ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳ ಪ್ರಗತಿ ಆಗಿದೆ. ದೇಶದಲ್ಲಿ ನಿರ್ಮಾಣವಾಗುವ ಏರ್ಕ್ರಾಫ್ಟ್ ಗಳಲ್ಲಿ ಶೇ.70 ರಷ್ಟು ಕರ್ನಾಟಕದಲ್ಲಿ ಆಗುತ್ತಿದೆ. ಪ್ರಗತಿಯ ವಿಚಾರದಲ್ಲಿ ಕರ್ನಾಟಕ ಮುಂದಿದೆ. ಫಾರ್ಚುನ್ 500 ಕಂಪನಿಗಳಲ್ಲಿ 400ಕ್ಕೂ ಹೆಚ್ಚು ಕಂಪನಿಗಳು ಕರ್ನಾಟಕದಲ್ಲಿವೆ. ಕರ್ನಾಟಕ ಅಭಿವೃದ್ಧಿಯತ್ತ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇಂದು ಕರ್ನಾಟಕ ಡಬಲ್ ಇಂಜಿನ್ ತಾಕತ್ತಿನೊಂದಿಗೆ ಬೆಳೆಯುತ್ತಿದೆ ಎಂದರು.
ಮೂಲ ಸೌಕರ್ಯವನ್ನು ಅಭಿವೃದ್ಧಿ: ಆಡಳಿತ ಹಾಗೂ ಡಿಜಿಟಲ್ ಕ್ಷೇತ್ರದ ಬೆಳವಣಿಗೆಯಲ್ಲಿ ಭಾರತ ಒಂದು ಪ್ರತ್ಯೇಕ ಹಂತದನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದೇಶದ ಬೆಳವಣಿಗೆ ಇಡೀ ಜಗತ್ತನ್ನ ನಿಬ್ಬರಗಾಗಿಸಿದೆ. 5ಜಿ ಟೆಕ್ನಾಲಜಿ ಹಾಗೂ ಡಿಜಿಟಲ್ ಪೇಮೆಂಟ್ ಅನ್ನು ಯಾರಾದರೂ ಕಲ್ಪಿಸಿಕೊಳ್ಳಲು ಸಾಧ್ಯವಿತ್ತೆ?. 2014 ಮುಂಚಿನ ಭಾರತದಲ್ಲಿ ಈ ರೀತಿಯ ಯಾವ ಕಲ್ಪನೆಗಳು ಇರಲಿಲ್ಲ. ಹಿಂದೆ ದೇಶವನ್ನು ಆಳಿದ ಸರ್ಕಾರಗಳ ಯೋಚನೆ ಹಳೆಯದಾಗಿತ್ತು. ಯಾವುದೇ ಹೊಸ ಪ್ರಯೋಗವನ್ನು ಮಾಡಲು ಹೆದರುತ್ತಿದ್ದವು. ಆದರೆ ವೇಗವನ್ನ ನಾವು ಭಾರತದ ಆಕಾಂಕ್ಷೆಯನ್ನಾಗಿಸಿದ್ದೇವೆ. ಇದರಿಂದಾಗಿ ಹಿಂದಿನ ಸರ್ಕಾರಕ್ಕಿಂತ ನಮ್ಮ ಸರ್ಕಾರದಿಂದ ಅಭಿವೃದ್ಧಿ ಹೆಚ್ಚಾಗಿದೆ. ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವ ಶಕ್ತಿಯನ್ನು ನಾವು ಸಂಪಾದಿಸಿದ್ದೇವೆ ಎಂದರು.
3,500 ಕೋಟಿ ಮನೆ ನಿರ್ಮಾಣ: ಎಲ್ಲ ಕ್ಷೇತ್ರವನ್ನು ಒಂದು ವೇದಿಕೆ ಅಡಿ ತರಬೇಕೆಂಬ ಆಶಯ ನಮ್ಮದು. 1500ಕ್ಕೂ ಹೆಚ್ಚು ಏಜೆನ್ಸಿಗಳನ್ನು ಒಂದೇ ವೇದಿಕೆ ಅಡಿ ನಾವು ತಂದಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಏಜೆನ್ಸಿಗಳು ಇಂದು ಒಂದಾಗಿದೆ. 110 ಲಕ್ಷ ಕೋಟಿ ಹೂಡಿಕೆ ಇಲ್ಲಾಗುತ್ತಿದೆ. ಬಹು ಮಾದರಿ ಮೂಲಭೂತ ಸೌಕರ್ಯ ಮಾಡಲಾಗುತ್ತಿದೆ ಇದರಿಂದಾಗಿ ದೇಶಾದ್ಯಂತ ಸಾರಿಗೆ ವ್ಯವಸ್ಥೆಯ ವೆಚ್ಚ ಕಡಿಮೆಯಾಗಲಿದೆ.
ಡಿಜಿಟಲ್ ಮೂಲಸೌಕರ್ಯದ ಮೂಲಕ ದೇಶದ ಪೂರ್ಣ ಮೂಲಭೂತ ಸೌಕರ್ಯವನ್ನು ಬಲಗೊಳಿಸುವ ಪ್ರಯತ್ನ ನಡೆದಿದೆ. ಈ ವಿಚಾರದಲ್ಲಿ ಕರ್ನಾಟಕದ ಡಬಲ್ ಇಂಜಿನ್ ಸರ್ಕಾರ ಹೆಚ್ಚಿನ ಆಧ್ಯತೆ ನೀಡಿದೆ. ಈ ಕ್ಷೇತ್ರದ ಪ್ರಗತಿಗೆ ಗಮನ ಹರಿಸಿದೆ. ಕಳೆದ ಎಂಟು ವರ್ಷದಲ್ಲಿ ಬಡವರಿಗಾಗಿ 3500 ಕೋಟಿ ಮನೆ ನಿರ್ಮಿಸಲಾಗಿದೆ. ಆಯುಷ್ಮಾನ್ ಭಾರತ ಅಡಿ ದೇಶದ ನಾಲ್ಕು ಕೋಟಿ ಜನರಿಗೆ ಅನುಕೂಲ ಕಲ್ಪಿಸಲಾಗಿದ್ದು ಕರ್ನಾಟಕದಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಇದರ ಲಾಭ ಪಡೆದಿದ್ದಾರೆ.
ದೇಶದ ತಾಯಂದಿರು ಹಾಗೂ ಸಹೋದರಿಯರು ಇದರ ಹೆಚ್ಚಿನ ಲಾಭ ಪಡೆದಿದ್ದಾರೆ. ಬಡ ರೈತ ಬಡ ವ್ಯಾಪಾರಿ ಮೀನುಗಾರ ಸೇರಿದಂತೆ ಕೋಟ್ಯಂತರ ಮಂದಿ ಇದೇ ಮೊದಲ ಬಾರಿಗೆ ದೇಶದ ವಿಕಾಸದ ಮುಖ್ಯ ದಾರಿಯಲ್ಲಿ ಸೇರ್ಪಡೆ ಆಗಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಅಡಿ ಆರ್ಥಿಕ ಸಹಕಾರ ಲಭಿಸಿದೆ. ರಾಜ್ಯದ ಎರಡು ಲಕ್ಷಕ್ಕೂ ಅಧಿಕ ಪೌರಕಾರ್ಮಿಕರಿಗೆ ಕೇಂದ್ರ ಸರ್ಕಾರ ಯೋಜನೆಗಳ ಲಾಭ ಲಭಿಸಿದೆ ಎಂದರು.
9 ರೈಲುಗಳ ಯಾತ್ರೆ ಪೂರ್ಣ: ಈಗಾಗಲೇ ಒಂಬತ್ತು ರೈಲುಗಳ ಯಾತ್ರೆ ಪೂರ್ಣವಾಗಿದೆ. ರಾಮಾಯಣ, ಕಾಶಿ ಸೇರಿದಂತೆ ಹಲವು ವಿಧದ ಯಾತ್ರೆಯ ಅನುಕೂಲ ಸಾರ್ವಜನಿಕರಿಗೆ ಲಭಿಸಿದೆ. ಇಂದು ರಾಜ್ಯದಿಂದಲೂ ಕಾಶಿ,ಅಯೋಧ್ಯೆ, ಪ್ರಯಾಗ ಯಾತ್ರೆಗೆ ಚಾಲನೆ ದೊರಕಿದೆ. ಕಾಶಿ ವಿಶ್ವನಾಥನ ದರ್ಶನಕ್ಕೆ ಜನರಿಗೆ ಹೆಚ್ಚಿನ ಅವಕಾಶ ಸಿಗಲಿ ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ. ಯಾವ ರೀತಿ ಸಮಾಜವನ್ನು ಒಗ್ಗೂಡಿಸಬಹುದು ಎಂಬುದಕ್ಕೆ ಇದು ಪ್ರೇರಣೆಯಾಗಿದೆ. ದೇಶಾದ್ಯಂತ ಸಿರಿಧಾನ್ಯದ ಅನುಕೂಲದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಸಂತ ಕನಕದಾಸರು ತಮ್ಮ ಕಾಲದಲ್ಲಿಯೇ ಈ ವಿಚಾರವನ್ನು ವಿವರಿಸಿದ್ದರು. ಕುಲ ಕುಲವೆಂದು ಹೊಡೆದಾಡದಿರಿ ಎನ್ನುತ್ತಾ ರಾಗಿಯ ಉದಾಹರಣೆಯೊಂದಿಗೆ ಅವರು ಸಾಮಾಜಿಕ ಸಂದೇಶವನ್ನು ಸಾರಿದ್ದರು ಎಂದರು.
ಬೆಂಗಳೂರು ನಗರದ ವಿಕಾಸ ನಾಡಪ್ರಭು ಕೆಂಪೇಗೌಡರು ಕಲ್ಪನೆ ಮಾಡಿಕೊಂಡಿದ್ದ ರೀತಿಯಲ್ಲಿ ಆಗಲಿ ಎಂಬುದು ನಮ್ಮ ಆಶಯವಾಗಿದೆ. ಇಲ್ಲಿನ ಜನರಿಗೆ ಕೆಂಪೇಗೌಡರ ಮೇಲೆ ಗೌರವ ಇದೆ,ಕೆಂಪೇಗೌಡರು ಅದ್ಭುತ ಹಾಗೂ ಅದ್ವಿತೀಯ ಕಲ್ಪನೆ ವಾಣಿಜ್ಯ, ಕಲ್ಚರ್ ಅಂಡ್ ಕನ್ವಿನೆಂಟ್ ಕಲ್ಪನೆ ಮಾಡಿದ್ದರು. ಬೆಂಗಳೂರಿನ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸುವ ಕಲ್ಪನೆ ಕೆಂಪೇಗೌಡರದಾಗಿತ್ತು. ಬೆಂಗಳೂರು ನಗರದ ವಿವಿಧ ದೇವಾಲಯಗಳ ಅಭಿವೃದ್ಧಿಯ ಕನಸು ಕಂಡಿದ್ದರು. ಇಲ್ಲಿನ ಜನ ಕೆಂಪೇಗೌಡರ ಕೊಡುಗೆಗೆ ಆಭಾರಿಯಾಗಿದ್ದಾರೆ ಎಂದರು.
ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್, ಕಾಶಿ ದರ್ಶನ ವಿಶೇಷ ರೈಲಿಗೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಚಾಲನೆ