ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ಸಭಾತ್ಯಾಗದ ನಡುವೆಯೂ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಲೇವಾದೇವಿದಾರರ ತಿದ್ದುಪಡಿ ವಿಧೇಯಕ 2020-21ಕ್ಕೆ ವಿಧಾನ ಪರಿಷತ್ನಲ್ಲಿ ಅಂಗೀಕಾರ ನೀಡಲಾಯಿತು.
ವಿಧಾನ ಪರಿಷತ್ನ ಶಾಸನ ರಚನೆ ಕಲಾಪದಲ್ಲಿ ಕರ್ನಾಟಕ ಲೇವಾದೇವಿದಾರರ ತಿದ್ದುಪಡಿ ವಿಧೇಯಕ 2020-21ನ್ನು ಸಹಾಕಾರಿ ಸಚಿವ ಎಸ್.ಟಿ.ಸೋಮಶೇಖರ್ ಮಂಡಿಸಿದರು. ವಿಧೇಯಕದ ಮೇಲೆ ಜೆಡಿಎಸ್ ಸದಸ್ಯರು ಮಾತನಾಡಿ ಕೆಲ ಸಲಹೆ ನೀಡಿದರು.
ನಂತರ ಪ್ರತಿಪಕ್ಷ ಕಾಂಗ್ರೆಸ್ ಪರವಾಗಿ ವಿಧೇಯಕದ ಮೇಲೆ ಮಾತನಾಡಲು ಉಪಸಭಾಪತಿಗಳ ಅನುಮತಿ ಪಡೆದುಕೊಂಡ ಸದಸ್ಯ ಬಿ.ಕೆ.ಹರಿಪ್ರಸಾದ್, ಬಿಲ್ ಮೇಲಿನ ಚರ್ಚೆಯಲ್ಲಿ ಭಾಗವಹಿಸದೇ ಇರುವ ನಿರ್ಧಾರ ಪ್ರಕಟಿಸಿದರು. ಕೋರ್ಟ್ಗೆ ಹೋಗಿರುವ ಸಚಿವರಿಗೆ ಪ್ರಶ್ನೆ ಕೇಳದೇ ಇರಲು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ಸಚಿವರಿಗೆ ನಾವು ಪ್ರಶ್ನೆ ಕೇಳಲ್ಲ ಎನ್ನುತ್ತಾ ಕಾಂಗ್ರೆಸ್ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದರು.
ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ವಿಧೇಯಕವನ್ನು ಅಂಗೀಕರಿಸುವಂತೆ ಸಚಿವ ಸೋಮಶೇಖರ್ ಸೂಚನೆ ನೀಡಿದರು. ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ವಿಧೇಯಕವನ್ನು ಮತಕ್ಕೆ ಹಾಕಿದರು. ಧ್ವನಿಮತದ ಮೂಲಕ ಕರ್ನಾಟಕ ಲೇವಾದೇವಿದಾರರ ತಿದ್ದುಪಡಿ ವಿಧೇಯಕ 2020-21ಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.