ಬೆಂಗಳೂರು: ರಾಜ್ಯಪಾಲರು ಸರ್ವಪಕ್ಷ ಸಭೆ ನಡೆಸಿದರು, ಸುಮಾರು ಎರಡು ಗಂಟೆಗಳ ಕಾಲ ವಿಸ್ತೃತವಾದ ಚರ್ಚೆ ಆಗಿದೆ, ಬಹಳ ವಿಚಾರವನ್ನು ಕುಮಾರಸ್ವಾಮಿ ಹೇಳಿದ್ದಾರೆ. ಅವರು ಲಾಕ್ ಡೌನ್ ಪರ ಮಾತನಾಡಿದ್ದಾರೆ. ಔಷಧ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತಜ್ಞರ ಸಮಿತಿ ಹೇಳಿದ್ದನ್ನು ಯೋಚಿಸಿ ಕ್ರಮ ಕೈಗೊಳ್ಳಿ ಎಂದಿದ್ದಾರೆ ಎಂದು ಆರ್. ಅಶೋಕ್ ತಿಳಿಸಿದರು.
ಸರ್ವಪಕ್ಷ ಸಭೆ ಮುಕ್ತಾಯದ ಬಳಿಕ ಮಾತನಾಡಿದ ಕಂದಾಯ ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸರ್ಕಾರದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ಕೂಡಲೇ ಕ್ರಮ ಕೈಗೊಳ್ಳಿ, ತಜ್ಞರ ಸಮಿತಿ ವರದಿ ಅನುಷ್ಠಾನ ಮಾಡಿ ಎಂದು ಸೂಚನೆ ನೀಡಿದ್ದಾರೆ ಎಂದರು.
ಒಂದು ಕಡೆ ಬಡವರನ್ನು ಕಾಪಾಡಬೇಕು, ಮತ್ತೊಂದು ಕಡೆ, ಕೊರೊನಾದಿಂದಲೂ ಅವರನ್ನು ಕಾಪಾಡಬೇಕು. ಕೊರೊನಾದಿಂದಾಗಿ ತೊಂದರೆಗೆ ಸಿಲುಕಬಾರದು. ಆ ದೃಷ್ಟಿಯಿಂದ ಕಠಿಣ ನಿಲುವು ತೆಗೆದುಕೊಳ್ಳಬೇಕಿದೆ. ಸಿಎಂ ಅನುಮೋದನೆ ಪಡೆದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೂತನ ಕ್ರಮದ ಮಾರ್ಗಸೂಚಿಯ ಆದೇಶ ಹೊರೆಡಿಸಲಿದ್ದಾರೆ ಎಂದರು. ಕೊರೊನಾದ ಈ ಕಷ್ಟದ ಸಂದರ್ಭದಲ್ಲಿ ಜನ ಸಹಕಾರ ನೀಡಬೇಕು, ಸರ್ವಪಕ್ಷ ನಾಯಕರು, ಆಡಳಿತ ಪಕ್ಷದ ಸದಸ್ಯರು ಸರ್ಕಾರ ಕೈಗೊಳ್ಳುವ ಕ್ರಮದ ಜೊತೆ ಇರಲಿದ್ದೇವೆ ಎನ್ನುವ ಅಭಯ ನೀಡಿದ್ದಾರೆ. ಹಾಗಾಗಿ ಎಲ್ಲರ ಸಹಕಾರವನ್ನೂ ನಾನು ಮತ್ತೊಮ್ಮೆ ಕೇಳುತ್ತಿದ್ದೇನೆ. ಇಂದಿನ ಸಭೆ, ನಿನ್ನೆಯ ಸಭೆಯ ನಿಲುವಿಗೆ ಪೂರಕ ಸಲಹೆಗಳನ್ನು ಎಲ್ಲ ಪಕ್ಷದ ನಾಯಕರು ಕೊಟ್ಟಿದ್ದಾರೆ, ಅವರ ಸಲಹೆ ಸ್ವಾಗತಿಸುತ್ತೇನೆ, ತಜ್ಞರ ಜೊತೆ ಸಭೆ ಮಾಡಿ ಅವನ್ನೆಲ್ಲಾ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದರು.