ಬೆಂಗಳೂರು : ಮೃತ ವೈದ್ಯರನ್ನೂ ಮತದಾರರ ಪಟ್ಟಿಗೆ ಸೇರಿಸಿ ಕಳೆದ ಜನವರಿಯಲ್ಲಿ ಕರ್ನಾಟಕ ಮೆಡಿಕಲ್ ಕೌನ್ಸಿಲ್(ಕೆಎಂಸಿ) ಗೆ ನಡೆಸಿದ್ದ ಚುನಾವಣೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಮುಂದಿನ 6 ತಿಂಗಳಲ್ಲಿ ಹೊಸದಾಗಿ ಚುನಾವಣೆ ನಡೆಸುವಂತೆ ಕೆಎಂಸಿ ಹಾಗೂ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಕೆಎಂಸಿ ಮತದಾರರ ಪಟ್ಟಿ ಆಕ್ಷೇಪಿಸಿ ಕಲಬುರ್ಗಿಯ 70 ವರ್ಷದ ವೈದ್ಯ ಗಚ್ಚಿನಮನಿ ನಾಗನಾಥ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶಿಸಿದೆ. ಹಾಗೆಯೇ, ರಿಟರ್ನಿಂಗ್ ಆಫೀಸರ್(ಆರ್ ಒ) ಆಗಿ ಕಾರ್ಯ ನಿರ್ವಹಿಸಿದ್ದ ಸಹಕಾರಿ ಸಂಘಗಳ ಇಲಾಖೆಯ ಜಂಟಿ ರಿಜಿಸ್ಟ್ರಾರ್ ಡಿ. ಪಾಂಡುರಂಗ ಗರಗ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಲೋಕಾಯುಕ್ತಕ್ಕೆ ನಿರ್ದೇಶಿಸಿದೆ.
ಪೀಠ ತನ್ನ ಆದೇಶದಲ್ಲಿ, ಚುನಾವಣಾಧಿಕಾರಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕೆಎಂಸಿ ಮತದಾರರ ಪಟ್ಟಿಯಲ್ಲಿ 37,298 ವೈದ್ಯರಿದ್ದು, ಇವರಲ್ಲಿ ಸಾಕಷ್ಟು ಮೃತ ವೈದ್ಯರ ಹೆಸರಿವೆ. ಜತೆಗೆ ತಮ್ಮ ನೋಂದಣಿಯನ್ನು ಹಿಂದಿರುಗಿಸಿ ದೇಶ ತೊರೆದು ಹೋದ ವೈದ್ಯರ ಹೆಸರನ್ನೂ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಈ ಬಗ್ಗೆ ವಿವರಣೆ ನೀಡಿರುವ ಚುನಾವಣಾಧಿಕಾರಿ ತೀರಾ ಸಾಮಾನ್ಯ ರೀತಿಯಲ್ಲಿ ಪಟ್ಟಿಯಲ್ಲಿ ಒಂದೋ, ಎರಡೋ ಮೃತ ವೈದ್ಯರ ಹೆಸರಿರಬಹುದು. ಕೆಲವು ದೇಶ ತೊರೆದ ವೈದ್ಯರ ಹೆಸರಿರಬಹುದು ಎಂದು ಹೇಳಿಕೆ ನೀಡಿದ್ದಾರೆ.
ಮತದಾರರ ಪಟ್ಟಿಯನ್ನು ಸಿದ್ದಪಡಿಸಿದ ಬಳಿಕ ಅದನ್ನು ನಿಯಮಾನುಸಾರ ಕೆಎಂಸಿ ವೆಬ್ಸೈಟ್ನಲ್ಲಿ ಪ್ರಕಟಿಸುವ ಬದಲಿಗೆ ಪ್ರತ್ಯೇಕ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದಾರೆ. ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವುದಾಗಿ ಹೇಳಿದರೂ ಅವುಗಳನ್ನು ಪಾಲಿಸಿಲ್ಲ. ಇವೆಲ್ಲವನ್ನು ಗಮನಿಸಿದರೆ ಅಧಿಕಾರಿ ವಂಚನೆ ಎಸಗಿರುವುದು ಮೇಲ್ನೋಟಕ್ಕೆ ಸಾಭೀತಾಗಿದ್ದು, ಲೋಕಾಯುಕ್ತ ಶಿಸ್ತು ಕ್ರಮ ಜರುಗಿಸಬೇಕು ಎಂದು ಆದೇಶಿಸಿದೆ.
ಕರ್ನಾಟಕ ಮೆಡಿಕಲ್ ಕೌನ್ಸಿಲ್ಗೆ ಕಳೆದ ಜನವರಿ 23 ರಂದು ಚುನಾವಣೆ ನಡೆದು, ಜನವರಿ 25 ರಂದು ಫಲಿತಾಂಶ ಪ್ರಕಟವಾಗಿತ್ತು.