ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಘಟಾನುಘಟಿ ನಾಯಕರು ಚುನಾವಣಾ ಕ್ಷೇತ್ರಗಳಿಂದ ಹೊರಬಂದಿದ್ದು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಂತ್ರ, ಪ್ರತಿತಂತ್ರ ರೂಪಿಸುತ್ತಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಚುನಾವಣಾ ಪ್ರಚಾರ ನಡೆಸಿದ್ದು, ರಾಷ್ಟ್ರೀಯ ಪಕ್ಷಗಳ ಪಾಲಿಗೆ ಇದು ಅತ್ಯಂತ ಪ್ರಮುಖ ಚುನಾವಣೆಯಾಗಿಯೂ ಪರಿಣಮಿಸಿದೆ.
ವಿಧಾನ ಪರಿಷತ್ನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಪೂರ್ಣಪ್ರಮಾಣದ ಅಧಿಕಾರಕ್ಕೆ ಬರಲು ಒಟ್ಟು 39 ಸ್ಥಾನಗಳ ಅಗತ್ಯವನ್ನು ಎದುರಿಸುತ್ತಿದೆ. ಸದ್ಯ 32 ಸದಸ್ಯರ ಹೊಂದಿರುವ ಬಿಜೆಪಿಗೆ ಒಬ್ಬ ಪಕ್ಷೇತರರ ಬೆಂಬಲ ಲಭಿಸಿತ್ತು. ಇದೀಗ ಆ ಪಕ್ಷೇತರ ಅಭ್ಯರ್ಥಿ ಸೇರಿದಂತೆ 6 ಮಂದಿ ಸ್ಥಾನ ತೆರವಾಗುತ್ತದೆ. ಈ ಆರು ಸ್ಥಾನಗಳ ಜೊತೆ ಇನ್ನೂ ಐದಾರು ಸ್ಥಾನಗಳನ್ನು ಗೆದ್ದುಕೊಳ್ಳುವ ಅಗತ್ಯ ಬಿಜೆಪಿಗೆ ಇದೆ.
ಒಟ್ಟು 25 ಸ್ಥಾನಗಳಲ್ಲಿ 5 ಸ್ಥಾನಗಳು ದ್ವಿ ಸದಸ್ಯತ್ವ ಕ್ಷೇತ್ರ ವ್ಯಾಪ್ತಿಗೆ ಬರುತ್ತಿರುವ ಹಿನ್ನೆಲೆ, ಅಧಿಕೃತವಾಗಿ 20 ಅಭ್ಯರ್ಥಿಗಳನ್ನು ಮಾತ್ರ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕಣಕ್ಕಿಳಿಸಿವೆ. ದ್ವಿ ಸದಸ್ಯತ್ವ ಇರುವ ಐದು ಕ್ಷೇತ್ರಗಳಲ್ಲಿ ಪಕ್ಷೇತರರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, ಇವರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರತಿ ಪಕ್ಷವಾಗಿರುವ ಕಾಂಗ್ರೆಸ್ ಒಟ್ಟು 29 ಸದಸ್ಯರ ಬಲ ಹೊಂದಿದ್ದು, ಈ ಚುನಾವಣೆಯಲ್ಲಿ 25ರ ಪೈಕಿ 13 ಸದಸ್ಯರ ಅವಧಿ ಮುಕ್ತಾಯವಾಗುತ್ತಿದೆ. ಹಾಲಿ 13ರ ಪೈಕಿ ಕೇವಲ ಮೂವರು ಸದಸ್ಯರು ಮಾತ್ರ ಮರು ಆಯ್ಕೆಗಾಗಿ ಕಣದಲ್ಲಿದ್ದು, ಉಳಿದಂತೆ ಪಕ್ಷ ಹೊಸಬರಿಗೆ ಮಣೆ ಹಾಕಿದೆ. ಚುನಾವಣೆಯನ್ನು ಒಂದೆಡೆ ಪ್ರತಿಷ್ಠೆಯಾಗಿ ಪರಿಗಣಿಸಿರುವ ಎಲ್ಲ ಪಕ್ಷಗಳು ಹೆಚ್ಚಿನ ಕಡೆಗಳಲ್ಲಿ ತಮ್ಮ ನಾಯಕರ ಕುಟುಂಬ ಸದಸ್ಯರು, ಸಂಬಂಧಿಕರನ್ನು ಕಣಕ್ಕಿಳಿಸಿದ್ದಾರೆ. ಇವರನ್ನು ಗೆಲ್ಲಿಸಿ ಕೊಳ್ಳುವುದು ಸಹ ಈಗ ಸವಾಲಾಗಿ ಪರಿಣಮಿಸಿದೆ.
ಕಣದಲ್ಲಿರುವ ಅಭ್ಯರ್ಥಿಗಳೆಷ್ಟು? :
25 ಕ್ಷೇತ್ರಗಳಲ್ಲಿ ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 89 ಮಂದಿ ಪುರುಷ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಚಿಕ್ಕಮಗಳೂರು ಕ್ಷೇತ್ರದಿಂದ ಒಬ್ಬ ಮಹಿಳಾ ಅಭ್ಯರ್ಥಿ ಮಾತ್ರ ಕಣದಲ್ಲಿರುವುದು ಈ ಬಾರಿಯ ಚುನಾವಣೆಯ ವಿಶೇಷ. ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿ ಶಾಂತೇಗೌಡ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಜೆಡಿಎಸ್ 6 ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಆಮ್ ಆದ್ಮಿ ಪಕ್ಷ 3 ಕ್ಷೇತ್ರಗಳಲ್ಲಿ, ಕನ್ನಡ ಚಳವಳಿ ವಾಟಾಳ್ ಪಕ್ಷ 1, ಕರ್ನಾಟಕ ರಾಷ್ಟ್ರ ಸಮಿತಿ 1, ಜನಹಿತ ಪಕ್ಷ 1, ಜೆಡಿಯು 1, ಜನತಾ ಪಾರ್ಟಿ 2, ಎಸ್ಡಿಪಿಐ 1, ಪಕ್ಷೇತರರು 33 ಅಭ್ಯರ್ಥಿಗಳು ಸೇರಿ ಒಟ್ಟು 90 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಮತಗಟ್ಟೆ ಸ್ಥಾಪನೆ:
25 ಕ್ಷೇತ್ರಗಳ ಚುನಾವಣೆಗೆ 6,073 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಪುರುಷರು 47,368 ಹಾಗೂ 51,474 ಮಹಿಳೆಯರು ಮತ್ತು ಇತರ 3 ಮಂದಿ ಸೇರಿದಂತೆ ಒಟ್ಟು 98,846 ಸದಸ್ಯರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಚುನಾವಣೆಗೆ 7073 ಪಿಆರ್‌ಒಗಳು, 9344 ಪಿಒಗಳು ಹಾಗೂ 6648 ಮೈಕ್ರೋ ಅಬ್ಸರ್ವರ್ಗಳನ್ನು ನಿಯೋಜಿಸಲಾಗಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳು ಪರಿಷತ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶತಾಯ - ಗತಾಯ ಪ್ರಯತ್ನ ನಡೆಸುತ್ತಿವೆ. ಗೆಲುವಿಗಾಗಿ ಸಾಧ್ಯವಿರುವ ಎಲ್ಲ ತಂತ್ರ-ಪ್ರತಿತಂತ್ರ ರೂಪಿಸುತ್ತಿವೆ. ಹೀಗಾಗಿ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ರಾಜ್ಯದ ರಾಜಕೀಯ ದಿಕ್ಸೂಚಿಯಾದರೂ ಅಚ್ಚರಿ ಪಡಬೇಕಿಲ್ಲ.
ಮತ ಎಣಿಕೆ:
ಡಿಸೆಂಬರ್ 14ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ. 20 ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಡಿಸೆಂಬರ್ 16ಕ್ಕೆ ಪರಿಷತ್ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ: ಮಂಗಳೂರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ನ್ಯಾಯವಾದಿಯ ಪತ್ನಿ ಸಹಿತ ಮತ್ತೋರ್ವನ ಬಂಧನ, ಜಾಮೀನು