ಬೆಂಗಳೂರು: ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್‌ಗೆ ರಾಜ್ಯ ಸಹಕಾರಿ ಇಲಾಖೆಯ ರಿಜಿಸ್ಟ್ರಾರ್ ವಿತರಿಸಿದ್ದ ನೋಂದಣಿ ಪ್ರಮಾಣ ಪತ್ರವನ್ನು ಹೈಕೋರ್ಟ್ ರದ್ದುಪಡಿಸಿದೆ. ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್ನ ನೋಂದಣಿ ಪ್ರಮಾಣ ಪತ್ರವನ್ನು ಪ್ರಶ್ನಿಸಿ ಕರ್ನಾಟಕ ಕಲರಿಪಯಟ್ಟು ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಕರ್ನಾಟಕ ಕಲರಿಪಯಟ್ಟು ಅಸೋಸಿಯೇಷನ್ ಹೆಸರನ್ನು ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್ ನಕಲಿ ಮಾಡಲಾಗಿದೆ. ಕರ್ನಾಟಕ ಕಲರಿಪಟ್ಟು ಸಂಘದ ಹೆಸರಿಗೆ ಎಂಬ ಪಿ(p) ಅಕ್ಷರವನ್ನು ಹೆಚ್ಚುವರಿಯಾಗಿ ಸೇರಿಸಿಕೊಂಡು ಈ ಸಂಘವನ್ನು ರಚಿಸಲಾಗಿದೆ. ಇಂತಹ ನಕಲನ್ನು ಅನುಮತಿಸಲಾಗದು ಎಂದು ಅಭಿಪ್ರಾಯಪಟ್ಟು ಹೈಕೋರ್ಟ್, ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್‌ಗೆ ರಾಜ್ಯ ಸಹಕಾರ ಇಲಾಖೆ ರಿಜಿಸ್ಟ್ರಾರ್ ಅವರು 2022ರ ಫೆ.8ರಂದು ವಿತರಿಸಿದ್ದ ನೋಂದಣಿ ಪ್ರಮಾಣ ಪತ್ರವನ್ನು ರದ್ದುಪಡಿಸಿತು. ಆ ನೋಂದಣಿ ಪ್ರಮಾಣ ಪತ್ರವನ್ನು ಆಧರಿಸಿ ಆ ಸಂಸ್ಥೆಗೆ ನೀಡಲಾಗಿದ್ದ ಎಲ್ಲಾ ಸಂಯೋಜನೆಗಳು, ಅನುದಾನ ಹಾಗೂ ಇತ್ಯಾದಿಗಳನ್ನು ಸಹ ರದ್ದುಪಡಿಸಿದೆ.
ಕರ್ನಾಟಕ ಕಲರಿಪ್ಪಯಟ್ಟು ಸಂಘಕ್ಕೆ ರಾಜ್ಯ ಸಹಕಾರ ಇಲಾಖೆ ರಿಜಿಸ್ಟ್ರಾರ್ ನೋಂದಣಿ ಪತ್ರ ವಿತರಿಸಿದ್ದಾರೆ. ತರುವಾಯ ಇತರೆ ಸರ್ಕಾರಿ ಪ್ರಾಧಿಕಾರಗಳು ಸಹ ಮಾನ್ಯತೆ ಪ್ರಮಾಣ ಪತ್ರ ವಿತರಿಸಿವೆ. ಆದರೆ, ಕರ್ನಾಟಕ ಸಹಕಾರ ಇಲಾಖೆಗಳ ನೋಂದಣಿ ಕಾಯ್ದೆಯ ಸೆಕ್ಷನ್ 7 ಅಡಿಯಲ್ಲಿ ನಕಲಿ ಹೆಸರು ಬಳಕೆಗೆ ನಿರ್ಬಂಧವಿದೆ. ಯಾವುದೇ ಸಂಸ್ಥೆಯ ಹೆಸರು ಗುರುತರವಾಗಿರುತ್ತದೆ. ಹಾಗಾಗಿ, ಸಹಕಾರ ಸಂಘಗಳು ಅನಪೇಕ್ಷಿತ ಮತ್ತು ಬಹುತೇಕ ಹೋಲುವ ಹೆಸರುಗಳೊಂದಿಗೆ ನೋಂದಣಿಯಾಗಬಾರದು. ನಕಲನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಪೀಠ ನುಡಿದಿದೆ ಎಂದು ಆದೇಶದಲ್ಲಿ ಪೀಠ ಹೇಳಿದೆ.
ಅಲ್ಲದೆ, ಅರ್ಜಿಯಲ್ಲಿ ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್ ಅನ್ನು ಪ್ರತಿವಾದಿ ಮಾಡಲಾಗಿತ್ತು. ಹಲವು ಬಾರಿ ಕಾಲಾವಕಾಶ ನೀಡಿದ ಹೊರತಾಗಿಯೂ ಈ ಅಸೋಸಿಯೇಷನ್ ಪ್ರತಿನಿಧಿ ಕೋರ್ಟ್‌ಗೆ ಹಾಜರಾಗಿ ತಮ್ಮ ಮನವಿ/ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಪೀಠ ಆದೇಶದಲ್ಲಿ ಬೇಸರ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್ ತನ್ನ ಹೆಸರಿಗೆ ಹೋಲುವಂತಹ ಹೆಸರಿನೊಂದಿಗೆ ನೋಂದಣಿಯಾಗಿದೆ. ಕೇವಲ ಪಿ (ಪ) ಎಂಬ ಹೆಚ್ಚುವರಿ ಅಕ್ಷರ ಇಟ್ಟುಕೊಂಡು ಸಂಘ ನೋಂದಣಿ ಮಾಡಲಾಗಿದೆ. ಇದಕ್ಕೆ ಕರ್ನಾಟಕ ಸಹಕಾರ ಸಂಘಗಳ ನೋಂದಣಿ ಕಾಯ್ದೆಯಡಿ ನಿರ್ಬಂಧವಿದೆ. ಆದ್ದರಿಂದ ಅದರ ನೋಂದಣಿಯನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ಕಲರಿಪಯಟ್ಟು ಅಸೋಸಿಯೇಷನ್ ಹೈಕೋರ್ಟ್‌ಗೆ ಮನವಿ ಮಾಡಿತ್ತು.
ಇದನ್ನೂ ಓದಿ: ನೀರು ಹರಿಯಲು ಅಡ್ಡಿಯಾಗದಂತೆ ರಾಜಕಾಲುವೆ ಮೇಲೆ ಸೇತುವೆ ನಿರ್ಮಿಸಿದರೆ ಒತ್ತುವರಿಯಲ್ಲ: ಹೈಕೋರ್ಟ್