ಬೆಂಗಳೂರು: ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ. ವಿಶೇಷ ಅಂದರೆ ಬೆಂಗಳೂರಿನಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಆದ್ರೆ ಅಲ್ಲಿಗೆ ನಾವು ಸೇಫ್ ಅಂತ ಅಂದುಕೊಳ್ಳಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಕೂಡ ಕಳೆದ 4 ದಿನದಿಂದ ಕೋವಿಡ್-19 ಪಾಸಿಟಿವ್ ಪ್ರಕರಣ ಕಡಿಮೆಯಾಗುತ್ತಾ ಬಂದಿದೆ. ಏ. 18ರಂದು 25, 19ರಂದು 6, 20ರಂದು 18 ಹಾಗೂ ಇಂದು 10 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಸಾಕಷ್ಟು ಆತಂಕದ ಸ್ಥಿತಿ ಇದ್ದರೂ 3 ದಿನದಿಂದ ಯಾವುದೇ ಪಾಸಿಟಿವ್ ಬಾರದಿರುವುದು ಕೊಂಚ ಸಮಾಧಾನ ತಂದಿದೆ. ಆದರೆ ಇದು ಶಾಶ್ವತವಲ್ಲ. ನಾಳೆಯಿಂದ ಹೆಚ್ಚಾದರೂ ಅಚ್ಚರಿಯಿಲ್ಲ ಎನ್ನುವ ಮಾತು ಸರ್ಕಾರ ಕಡೆಯಿಂದಲೇ ಕೇಳಿ ಬರುತ್ತಿದೆ.
ಸುರಕ್ಷಿತವೆನಿಸಲು ಇನ್ನೆಷ್ಟು ದಿನ ಬೇಕು?: ಅಂದಹಾಗೆ ಪಾದರಾಯನಪುರ ಗದ್ದಲ ಪ್ರಕರಣದ ನಂತರ ಇನ್ನಷ್ಟು ಆತಂಕ ಶುರುವಾಗಿದೆ. ಅಲ್ಲಿಂದ ಎಷ್ಟು ಜನರಿಗೆ ಕೊರೊನಾ ವ್ಯಾಪಿಸುವುದೋ ಎಂಬ ಆತಂಕ ಇದ್ದೇ ಇದೆ. ಬೆಳಗಾವಿಯಲ್ಲಿ ಇಂದು ಯಾವುದೇ ಪ್ರಕರಣ ಇಲ್ಲ. ಆದರೂ ಅದು ಗಡಿ ಜಿಲ್ಲೆಯಾಗಿರುವುದರಿಂದ ಆತಂಕ ಇದ್ದೇ ಇದೆ. ಇನ್ನು ಕಲಬುರುಗಿ, ವಿಜಯಪುರ ಸಾಕಷ್ಟು ಆತಂಕ ಎದುರಿಸುತ್ತಿವೆ. ಮೈಸೂರಿನ ಜುಬಿಲಂಟ್ ಕಾರ್ಖಾನೆ ಪ್ರಕರಣ ಒಂದೊಂದೇ ಹೊರ ಬರುತ್ತಿವೆ. ತಬ್ಲಿಘಿಗಳು ಇನ್ನೆಷ್ಟು ಮಂದಿ ಇದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಎಲ್ಲಾ ಆತಂಕಗಳ ನಡುವೆ ಮುಂದಿನ 10 ದಿನ ರಾಜ್ಯಕ್ಕೆ ನಿರ್ಣಾಯಕ ಎಂದು ಹೇಳಲಾಗುತ್ತಿದೆ.
ನಾಳೆಯಿಂದ ಮುಂದಿನ 10 ದಿನಗಳು ರಾಜ್ಯದ ಪಾಲಿಗೆ ಮಾಡು ಇಲ್ಲವೇ ಮಡಿ ದಿನವಾಗಲಿದೆ. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ರಾಜ್ಯ ಮೂರು ಹಾಗೂ ನಾಲ್ಕನೇ ಹಂತಕ್ಕೆ ತಲುಪಿದರೂ ಅಚ್ಚರಿಯಿಲ್ಲ ಎನ್ನುವ ಮಾತು ಕೇಳಿ ಬರುತ್ತಿದ್ದು, ಮುಂದಿನ 10 ದಿನ ರಾಜ್ಯದ ಪಾಲಿಗೆ ನಿರ್ಣಾಯಕ ಎನಿಸಿಕೊಳ್ಳಲಿದೆ. ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂರ್ಪಕದಲ್ಲಿದ್ದವರ ವರದಿ ಬರುವುದಕ್ಕೆ ಇನ್ನಷ್ಟು ಸಮಸ್ಯೆ ಇರಲಿದೆ. ಇಂದು ಮೈಸೂರಿನಲ್ಲಿ ಪತ್ತೆಯಾದ ಎರಡು ಪ್ರಕರಣಗಳು ದ್ವಿತೀಯ ಸಂಪರ್ಕದಿಂದ ಪಾಸಿಟಿವ್ ಬಂದವರಾಗಿದ್ದಾರೆ. ಹೀಗಾಗಿ ರಾಜ್ಯ ಯಾವ ಹಂತದಲ್ಲಿದೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಇದರಿಂದ ರಾಜ್ಯದ ಸ್ಥಿತಿ ಇನ್ನು 10 ದಿನದ ಒಳಗೆ ತಿಳಿಯವುದಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯದ ಕೊರೊನಾ ಪೀಡಿತರಿಗೆ ಒಟ್ಟು 3,873 ಮಂದಿಯ ಪ್ರಾಥಮಿಕ ಸಂಪರ್ಕ ಹಾಗೂ 9,673 ಮಂದಿಯ ದ್ವಿತೀಯ ಸಂಪರ್ಕ ಇದೆ. ಒಟ್ಟಾರೆ 13,546 ಮಂದಿ ಸರಣಿ ಪರೀಕ್ಷೆಯ ನಂತರವಷ್ಟೇ ಒಂದು ಹಂತಕ್ಕೆ ರಾಜ್ಯದ ಕೊರೊನಾ ಸ್ಥಿತಿ ಹೇಗಿದೆ ಎಂದು ನಿರ್ಧರಿಸಬಹುದಾಗಿದೆ. ಆದರೆ ಇದಲ್ಲದೇ ಪೀಡಿತರು ಸಂಪರ್ಕಿಸಿದ ಮಾಹಿತಿ ಇಲ್ಲದವರಿಗೆ ಕೊರೊನಾ ಬಂದಿದ್ದರೆ ಅದು ಬೇರೆ ವಿಚಾರ. ಇದರಿಂದ ಮೇ 4ರಿಂದ ರಾಜ್ಯದಲ್ಲಿ ಜನಜೀವನ ಸಹಜ ಸ್ಥಿತಿಗೆ ಬರಲಿದೆ ಎಂದು ಭಾವಿಸುವುದು ಸರಿಯಲ್ಲ.
ದಿನದಿಂದ ದಿನಕ್ಕೆ ಯಾವುದೇ ಸಂಪರ್ಕ ಪತ್ತೆಯಾಗದ ಪ್ರಕರಣಗಳು ಅಲ್ಲೊಂದು ಇಲ್ಲೊಂದು ಬರುತ್ತಿವೆ. ಅದರಿಂದ ರಾಜ್ಯದಲ್ಲಿ ಕೊರೊನಾ ಯಾವ ಹಂತದಲ್ಲಿ ಇದೆ ಎನ್ನುವುದನ್ನು ಅರಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ವೈದ್ಯರು ರಾಜ್ಯದ ಪಾಲಿಗೆ ಮುಂದಿನ 10 ದಿನ ಅತ್ಯಂತ ನಿರ್ಣಾಯಕ ಎನಿಸಲಿದ್ದು, ಸದ್ಯ ಮೂರು ದಿನದ ಸ್ಥಿತಿ ಹೀಗೆಯೇ ಮುಂದುವರೆಯಲಿದೆ. ಪೀಡಿತರ ಸಂಖ್ಯೆ ಗಣನೀಯವಾಗಿ ಇಳಿಯುತ್ತಾ ಸಾಗಿದರೆ ರಾಜ್ಯ ಹಾಗೂ ದೇಶ ಸುರಕ್ಷಿತ ಎಂದು ಭಾವಿಸಬಹುದು.