ಬೆಂಗಳೂರು: ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಹ ಸಂಸ್ಥಾಪಕರಾದ ಬೋಮನ್ ಇರಾನಿ ಅವರು ಯೆಜ್ಡಿ ಪದ ಮತ್ತು ಟ್ರೇಡ್ ಮಾರ್ಕ್ ಬಳಸದಂತೆ ಹೈಕೊರ್ಟ್ ನಿರ್ಬಂಧ ಹೇರಿದೆ. ಅಲ್ಲದೇ ಬೋಮನ್ ಇರಾನಿ ಅವರು ಐಡಿಯಲ್ ಜಾವಾ ಕಂಪೆನಿ(ಯೆಜ್ಡಿ)ಗೆ ತಲಾ 10 ಲಕ್ಷ ರೂಗಳ ಪರಿಹಾರ ನೀಡಬೇಕು ಎಂದು ತಿಳಿಸಿದೆ.
ಬೋಮನ್ ಇರಾನಿ ಅವರಿಗೆ ಯೆಜ್ಡಿ ಹೆಸರನ್ನು ಬಳಸುವುದಕ್ಕೆ ಅನುಮತಿ ನೀಡಿರುವ ಟ್ರೇಡ್ ಮಾರ್ಕ್ ನೋಂದಣಿ ಪ್ರಾಧಿಕಾರದ ಕ್ರಮ ಪ್ರಶ್ನಿಸಿ, ಯೆಜ್ಡಿ ಸಂಸ್ಥೆಯ ಅಧಿಕೃತ ಬರ್ಕಾಸ್ತುದಾರರ ಮತ್ತು ಐಡಿಯಲ್ ಜಾವಾ ನೌಕರರ ಸಂಘ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅಲ್ಲದೇ ಯೆಜ್ಡಿ ಸಂಸ್ಥೆ ಸುಸ್ತಿದಾರ ಸಂಸ್ಥೆಯಾಗಿರುವ ಸಂದರ್ಭದಲ್ಲಿ ಅದರ ಹೆಸರಿನಲ್ಲಿ ಮತ್ತೊಂದು ಸಂಸ್ಥೆ ನೋಂದಣಿ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.
ಯೆಜ್ಡಿ ಎಂಬ ಹೆಸರನ್ನು ಬಳಸಿಕೊಳ್ಳುವುದಕ್ಕಾಗಿ ಬೋಮನ್ ಇರಾನಿ ಪರವಾಗಿ ಮುಂಬೈ, ದೆಹಲಿ ಮತ್ತು ಅಹಮದಾಬಾದ್‌ನಲ್ಲಿ ಟ್ರೇಡ್ ಮಾರ್ಕ್‌ಗಳ ನೋಂದಣಿ ಪ್ರಮಾಣ ಪತ್ರಗಳನ್ನು ಅನೂರ್ಜಿತ ಎಂದು ಘೋಷಣೆ ಮಾಡಿದೆ. ಅಂತಹ ನೋಂದಣಿಗಳನ್ನು ಐಡಿಯಲ್ ಜಾವಾಗೆ ವರ್ಗಾಯಿಸಲು ಟ್ರೇಡ್ ಮಾರ್ಕ್ ನೋಂದಣಿ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ. ಅಲ್ಲದೇ ಯಜ್ಡಿ ಎಂಬ ಪದವು ಐಡಿಯಲ್ ಜಾವಾ(ಇಂಡಿಯಾ)ಲಿಮಿಟೆಡ್‌ನ ಮಾಲೀಕತ್ವದಲ್ಲಿದೆ. ಹೀಗಾಗಿ ಇತರೆ ಯಾರೂ ಈ ಪದವನ್ನು ಬಳಕೆ ಮಾಡಬಾರದು ಎಂದು ನಿಷೇಧ ಹೇರಿದೆ.
ದೂರಿನ ವಿವರ: ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್ 1990 ರ ದಶಕದ ಹಿಂದೆ ಯೆಜ್ಡಿ ಬ್ರಾಂಡ್‌ನಲ್ಲಿ ಮೋಟಾರ್ ಸೈಕಲ್‌ಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ನೋಂದಣಿಯಾಗಿತ್ತು. ಇದಾದ ಬಳಿಕ 1996 ರಲ್ಲಿ ಸಂಸ್ಥೆ ದಿವಾಳಿ ಎಂಬುದಾಗಿ ಪ್ರಕಟಿಸಿತ್ತು. ಇದು 250 ಸಿಸಿಯ 2 ಸ್ಟೋಕ್ ದ್ವಿಚಕ್ರ ವಾಹನಗಳನ್ನು ಉತ್ಪಾದನೆ ಮಾಡುತ್ತಿತ್ತು. ಯೆಜ್ಡಿ ಮೋಟಾರ್ ಉತ್ಪಾದನೆಯನ್ನು ನಿಲ್ಲಿಸಿ ಕಂಪೆನಿಯ ಎಲ್ಲ ಆಸ್ತಿಗಳನ್ನು ಅಧಿಕೃತ ಬಕಾಸ್ತುದಾರರಿಗೆ (ಲಿಕ್ವಿಡೇಟರ್)ಗೆ ವಹಿಸಿದ್ದರು.
ಯೆಜ್ಡಿ ಮೋಟಾರ್ ಸೈಕಲ್ ಬ್ರ್ಯಾಂಡ್‌ನ್ನು ಮಹೇಂದ್ರ ಅಂಡ್ ಮಹೇಂದ್ರದ ಅಂಗಸಂಸ್ಥೆಗಳಾದ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಬೋಮನ್ ಇರಾನಿ ಅವರು 2022 ರ ಜನವರಿಯಲ್ಲಿ ಟ್ರೆಡ್ ಮಾರ್ಕ್ ನೋಂದಣಿ ಮಾಡಿಕೊಂಡು ಜಾವಾ ವಾಹನಗಳ ಮರು ಉತ್ಪಾದನೆಗೆ ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಸುಸ್ತಿದಾರರು ಮತ್ತು ಐಡಿಯಲ್ ಜಾವಾ ಎಂಪ್ಲಾಯಿಸ್ ಅಸೋಸಿಯೇಷನ್ಸ್ ಅರ್ಜಿಗಳನ್ನು ಸಲ್ಲಿಸಿದ್ದರು.
ಇದನ್ನೂ ಓದಿ: ಅಪಘಾತ ಪ್ರಕರಣಗಳಲ್ಲಿ ವಿಮೆ ಇಲ್ಲದ ಕಾರಣಕ್ಕೆ ವಾಹನ ಬಿಡುಗಡೆಗೆ ನಿರಾಕರಿಸುವಂತಿಲ್ಲ: ಹೈಕೋರ್ಟ್