ಬೆಂಗಳೂರು : ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ವಿ ಕೆ ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ನೀಡಲು ಜೈಲು ಅಧಿಕಾರಿಗಳು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಮತ್ತೆ ಎರಡು ವಾರ ಕಾಲಾವಕಾಶ ನೀಡಿದೆ.
ಪ್ರಕರಣದ ತನಿಖೆಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತೆ ಕೆ ಎಸ್ ಗೀತಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಎಸ್ ಸಿ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣದ ತನಿಖೆಯನ್ನು 30 ದಿನಗಳಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು. ತಪ್ಪಿದರೆ ಮುಂದಿನ ವಿಚಾರಣೆಗೆ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಎಂದು 2021ರ ಸೆ.7ರಂದು ಹೈಕೋರ್ಟ್ ತಾಕೀತು ಮಾಡಿತ್ತು.
ಅದರಂತೆ ಅರ್ಜಿ ಶುಕ್ರವಾರ ವಿಚಾರಣೆಗೆ ಬಂದಾಗ ಸರ್ಕಾರದ ಪರ ವಕೀಲ ವಿ.ಶ್ರೀನಿಧಿ ಹಾಜರಾಗಿ, ಇಂದಿನ ವಿಚಾರಣೆಗೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಹಾಜರಾಗಬೇಕಿತ್ತು.
ಆದರೆ, ವೈಯಕ್ತಿಕ ಕಾರಣದಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಅದನ್ನು ಪರಿಗಣಿಸಿದ ಪೀಠ, ಅರ್ಜಿ ಸಂಬಂಧ 2021ರ ಸೆ.7ರಂದು ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಎರಡು ವಾರದಲ್ಲಿ ಪಾಲಿಸಬೇಕು ಎಂದು ಸರ್ಕಾರಿ ವಕೀಲರಿಗೆ ಸೂಚಿಸಿತು.
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ಶಶಿಕಲಾ ಹಾಗೂ ಅವರ ಸಂಬಂಧಿ ಇಳವರಸಿ ಅವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ ಆರೋಪ ಕೇಳಿ ಬಂದಿತ್ತು. ಅದಕ್ಕಾಗಿ ಜೈಲು ಅಧಿಕಾರಿಗಳಿಗೆ ಕೋಟ್ಯಂತರ ಹಣ ನೀಡಿದ ಭ್ರಷ್ಟಾಚಾರ ಆರೋಪವೂ ಇತ್ತು.
ಈ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿ 295 ಪುಟಗಳ ಮಧ್ಯಂತರ ವರದಿ ಸಲ್ಲಿಸಲಾಗಿತ್ತು. ಆದರೆ, ಈವರೆಗೆ ಅಂತಿಮ ವರದಿ ಸಲ್ಲಿಸಿಲ್ಲ. ಆದ್ದರಿಂದ ಅಂತಿಮ ವರದಿ ಸಲ್ಲಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ: Watch: ಬಾಳೆಗಾಗಿ ಬೊಲೆರೊ ಏರಿದ ಒಂಟಿ ಸಲಗ: ಹಾರ್ನ್ಗೆ ಬೆಚ್ಚಿ ಜನರನ್ನು ಅಟ್ಟಾಡಿಸಿದ ಗಜರಾಜ