ಬೆಂಗಳೂರು: ಅತ್ಯಾಚಾರಕ್ಕೊಳಗಾದ 13 ವರ್ಷದ ಸಂತ್ರಸ್ತೆಯ 25 ವಾರಗಳ ಭ್ರೂಣ ತೆಗೆಸಲು ಹೈಕೋರ್ಟ್ ವಾಣಿವಿಲಾಸ ಆಸ್ಪತ್ರೆಯ ಸೂಪರಿಂಟೆಂಡೆಂಟ್ಗೆ ನಿರ್ದೇಶನ ನೀಡಿದೆ. ಅತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿದ್ದ ಅಪ್ರಾಪ್ತೆ ಗರ್ಭಪಾತಕ್ಕೆ ಅನುಮತಿ ಕೋರಿ ತನ್ನ ತಾಯಿಯ ಮೂಲಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಆಸ್ಪತ್ರೆಯ ವೈದ್ಯರು ಸಂತ್ರಸ್ತೆಯನ್ನು ಪರಿಶೀಲನೆಗೊಳಪಡಿಸಿ ಅವರ ಜೀವಕ್ಕೆ ಹಾನಿಯಾಗುವಂತಿದ್ದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬಹುದು. ಒಂದು ವೇಳೆ ವೈದ್ಯರ ನಿರ್ಧಾರದಂತೆ ಹೊಡೆಯಲ್ಲಿ ಬೆಳೆಯುತ್ತಿರುವ ಭ್ರೂಣ ತೆಗೆಸಿದಲ್ಲಿ ತನಿಖೆಗೆ ನೆರವಾಗುವುದಕ್ಕಾಗಿ ಭ್ರೂಣದ ಡಿಎನ್ಎಯನ್ನು ವಿಧಿ ವಿಜ್ಞಾನ ಪ್ರಯೋಗದಲ್ಲಿ ಸಂಗ್ರಹಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಅಲ್ಲದೆ, ತನಿಖಾಧಿಕಾರಿಗಳು ತಕ್ಷಣ ಸಂತ್ರಸ್ತೆ ಮತ್ತು ಅವರೊಟ್ಟಿಗೆ ಇರುವವರಿಗೆ ನೆರವಾಗಲು ಆಸ್ಪತ್ರೆಗೆ ಹೋಗುವುದು ಮತ್ತು ಹಿಂದಿರುಗುವುದಕ್ಕಾಗಿ ವಾಹನದ ವ್ಯವಸ್ಥೆ ಮಾಡಬೇಕು. ವೈದ್ಯರ ಸೂಚನೆ ಮೇರೆಗೆ ಹೆಚ್ಚುವರಿ ಚಿಕಿತ್ಸೆಗೂ ಇದೇ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಬೇಕು. ಯಾವುದೇ ಕಾರಣಕ್ಕೂ ಸಂತ್ರಸ್ತೆಯಿಂದ ಪಡೆದುಕೊಳ್ಳಬಾರದು ಎಂದು ಸೂಚನೆ ನೀಡಿದೆ.
ಇದನ್ನೂ ಓದಿ: ಆರ್ಟಿಐ ಕಾರ್ಯಕರ್ತನ ಹತ್ಯೆ ಕೇಸ್: ಬಿಬಿಎಂಪಿ ಮಾಜಿ ಸದಸ್ಯೆ ಸೇರಿ 10 ಆರೋಪಿಗಳು ಖುಲಾಸೆ