ಬೆಂಗಳೂರು: ಸಹೋದ್ಯೋಗಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಬ್ಲಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಸಿಐಎಸ್ಎಫ್ ಕಾನ್ಸ್ಟೇಬಲ್ಗಳನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ತಮ್ಮ ಸಹೋದ್ಯೋಗಿಯ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದರಿಂದ ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ನಂತರ ಸಿಐಎಸ್‌ಎಫ್‌ನ ಶಿಸ್ತು ಪ್ರಾಧಿಕಾರದ ವಜಾ ಆದೇಶದ ವಿರುದ್ಧ ಆರೋಪಿಗಳು ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ಸಂತ್ರಸ್ತೆ 2015ರಲ್ಲಿ ದೂರು ದಾಖಲಿಸಿದ್ದು, ದೂರುದಾರರ ಪ್ರಕಾರ, ಆರೋಪಿಗಳಲ್ಲಿ ಒಬ್ಬನು ತನ್ನೊಂದಿಗೆ ಮೊದಲು ಸ್ನೇಹ ಬೆಳೆಸಿದ್ದ. ಬಳಿಕ ಸ್ನೇಹದ ಲಾಭ ಪಡೆದು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ನಂತರ ಇತರ ಆರೋಪಿಗಳು ಈ ವಿಷಯವನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿ ಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಿಐಎಸ್‌ಎಫ್ ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಓದಿ: 16 ವರ್ಷದ ಹುಡುಗಿ ಮದುವೆಯಾಗಲು ಏನೂ ತೊಂದರೆ ಇಲ್ಲ ಎಂದ ಪಂಜಾಬ್ - ಹರಿಯಾಣ ಹೈಕೋರ್ಟ್!
ಸಿಐಎಸ್ಎಫ್ ಶಿಸ್ತು ಪ್ರಾಧಿಕಾರವು, ಕರ್ತವ್ಯದಲ್ಲಿ ಶಿಸ್ತು ಮತ್ತು ನೈತಿಕತೆ ಅತಿಮುಖ್ಯವಾಗಿದ್ದು, ಆರೋಪಿಗಳು ಮಾಡಿದ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ನಡೆದಿರುವ ಕೃತ್ಯವು ಕರ್ತವ್ಯದ ಮೇಲೆ ಹೊರಗಿದ್ದ ಪತಿಗೆ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಹೇಳಿ ಪ್ರಾಧಿಕಾರವು ಆರೋಪಿಗಳನ್ನು ವಜಾಗೊಳಿಸಿತ್ತು.
ಎಲ್ಲ ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸಿರುವ ಪ್ರಾಧಿಕಾರ, ಆರೋಪಿಗಳ ಕೃತ್ಯದಿಂದ ಕುಟುಂಬವನ್ನು ಬಿಟ್ಟು ದೂರದೂರಿಗೆ ಕರ್ತವ್ಯಕ್ಕೆ ತೆರಳುವ ಇತರ ಸಿಬ್ಬಂದಿಗೂ ಅಭದ್ರತೆ ಕಾಡಲಿದೆ ಎಂದು ಅಭಿಪ್ರಾಯಪಟ್ಟಿದೆ.
ಎಲ್ಲ ಎಂಟು ಆರೋಪಿಗಳನ್ನು ವಿಚಾರಣಾ ನ್ಯಾಯಾಲಯವು ಕ್ರಿಮಿನಲ್ ಆರೋಪಗಳಿಂದ ಖುಲಾಸೆಗೊಳಿಸಿದೆ. ಆದೇಶದ ನಂತರ, ಅವರ ವಜಾವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ಕ್ರಿಮಿನಲ್ ಪ್ರಕರಣದಲ್ಲಿ ದಾಖಲಾದ ದೂರುದಾರರ ಹೇಳಿಕೆಯಿಂದ ‘ಆಪಾದಿತ ಘಟನೆಗೆ ಅವಳು ಒಪ್ಪಿಗೆ ನೀಡಿದ ಪಕ್ಷವಾಗಿರುವುದು ಸ್ಪಷ್ಟವಾಗಿದೆ’ ಎಂದು ವಾದಿಸಲಾಯಿತು.
ಈ ರೀತಿಯ ಘಟನೆಗಳು ಪೊಲೀಸ್ ಪೇದೆಗಳ ನೈತಿಕತೆಯನ್ನು ಕುಸಿಯುವಂತೆ ಮಾಡುತ್ತದೆ ಮತ್ತು ಸಿಐಎಸ್‌ಎಫ್‌ನಿಂದ ವಜಾಗೊಳಿಸಿದ ಆದೇಶ ಸೂಕ್ತ ಎಂದು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠವು ಇತ್ತೀಚೆಗೆ (ಜೂನ್ 15) ಆದೇಶ ನೀಡಿತು.