ಬೆಂಗಳೂರು: ದೇಶದ ನಾನಾ ಕಡೆಗಳಲ್ಲಿ ಅಪರಾಧ ಕೃತ್ಯವೆಸಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಹಾಗೂ ದೇಶದ ಒಂದೇ ಸೂರಿನಡಿ ಆತ್ಯಾಧುನಿಕ ಬೆರಳು ಮುದ್ರೆ ಸಂಗ್ರಹಾಲಯ (ಎಫ್ಪಿಬಿ) ಸುಧಾರಿಸಲು ಕೇಂದ್ರ ಸರ್ಕಾರದ ಎನ್ಎಎಫ್ಐಎಸ್ (National Automated Fingerprint Identification System) ಕರ್ನಾಟಕವು ಈವರೆಗೂ ಸುಮಾರು 5 ಲಕ್ಷ ಮಂದಿ ಕ್ರಿಮಿನಲ್ಗಳ ಬೆರಳಚ್ಚು ಡೇಟಾ ಕಳುಹಿಸಿ ಇತರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ.
ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ (ಎನ್ಸಿಆರ್ಬಿ) ವತಿಯಿಂದ ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳ ಆರೋಪಿಗಳ ಬೆರಳು ಮುದ್ರೆಯನ್ನು ಒಂದೇ ಸೂರಿನಡಿ ತರಲು ಎನ್ಎಎಫ್ಐಎಸ್ ನ ಸರ್ವರ್ಗೆ ಅಳವಡಿಸಲು ಉದ್ದೇಶಿಸಿದೆ. ರಾಜ್ಯ ಬೆರಳು ಮುದ್ರೆ ಸಂಗ್ರಹಾಲಯದ ರಾಜ್ಯದ ಆಟೋಮೆಟೆಡ್ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಷನ್ ಸಿಸ್ಟಮ್‌ನಲ್ಲಿದ್ದ ಸುಮಾರು 5 ಲಕ್ಷ ಆರೋಪಿಗಳ ಬೆರಳಚ್ಚುಗಳನ್ನು ರವಾನಿಸಿದೆ.
ಇತರೆ ರಾಜ್ಯಗಳಿಗೆ ಹೋಲಿಸಿದರೆ ಬೆರಳು ಮುದ್ರೆ ಸಂಗ್ರಹಾಲಯ ಡಿಜಿಟಲೀಕರಣಕೊಂಡು ತ್ವರಿತಗತಿಯಾಗಿ ಕೇಂದ್ರದ ಸರ್ವರ್ ಗೆ ಡೇಟಾ ರವಾನಿಸುವ ಮೂಲಕ ಮುಂಚೂಣಿ ಸ್ಥಾನದಲ್ಲಿದೆ. ಸದ್ಯ ಪ್ರಾಯೋಗಿಕ ಹಂತದಲ್ಲಿದ್ದು, ಇನ್ನು ಕೆಲವೇ ತಿಂಗಳಲ್ಲಿ ಅಧಿಕೃತವಾಗಿ ಜಾರಿ ಬರಲಿದೆ. ಎಲ್ಲಾ ರಾಜ್ಯಗಳ ಪೊಲೀಸರಿಗೆ ಈ ನೂತನ ವ್ಯವಸ್ಥೆ ಅನುಕೂಲಕರವಾಗಲಿದೆ.
ಉತ್ತರ ಭಾರತದ ಕೆಲ ರಾಜ್ಯಗಳು ಫಿಂಗರ್ ಪ್ರಿಂಟ್ ಬ್ಯೂರೊವನ್ನು (ಎಫ್ಪಿಬಿ) ಮ್ಯಾನುಯಲ್ ಪದ್ಧತಿಯಿಂದ ಡಿಜಿಟಲೀಕರಣಗೊಳಿಸುತ್ತಿದ್ದರೆ ಇನ್ನೂ ಕೆಲ ರಾಜ್ಯಗಳು ಗಣಕೀಕರಣಗೊಂಡು ಬೆರಳು ಮುದ್ರೆ ದತ್ತಾಂಶ ರವಾನಿಸುವಲ್ಲಿ ನಿರತವಾಗಿವೆ. ಆದರೆ, ಕರ್ನಾಟಕ 2003 ರಲ್ಲಿಯೇ ಎಫ್ಪಿಬಿ ಡಿಜಿಟಲೀಕರಣಗೊಂಡು ಸಾವಿರಾರು ಪ್ರಕರಣಗಳ ಪತ್ತೆಗೆ ಸಹಕಾರಿಯಾಗಿವೆ. ದೇಶದ ಎಲ್ಲಾ ರಾಜ್ಯಗಳಿಂದ ಎನ್ಎಎಫ್ಐಎಸ್ ಗೆ ಸುಮಾರು 70 ಲಕ್ಷ ಆರೋಪಿಗಳ ಫಿಂಗರ್ ಫ್ರಿಂಟ್ ಬಂದಿದೆ.
5 ಲಕ್ಷ ಆರೋಪಿಗಳ ಬೆರಳಚ್ಚು ಡೇಟಾ ರವಾನೆ: ಅಪರಾಧ ನಡೆದಾಗ ಆರೋಪಿತರ ಬಗ್ಗೆ ಸುಳಿವು ನೀಡುವ ಹಾಗೂ ಕ್ರಿಮಿನಲ್ ಗಳ ಜಾತಕ ಬಯಲು ಮಾಡುವ ಮಡಿವಾಳದಲ್ಲಿರುವ ರಾಜ್ಯ ಬೆರಳಚ್ಚು ಮುದ್ರೆ ಸಂಗ್ರಹಾಲಯದಲ್ಲಿ ಸುಮಾರು 5 ಲಕ್ಷ ಕ್ರಿಮಿನಲ್ಗಳ ಬೆರಳಚ್ಚುಗಳನ್ನ ಕೇಂದ್ರದ ಸರ್ವರ್ಗೆ ಶಿಫ್ಟ್ ಮಾಡಲಾಗಿದೆ. ರಾಜ್ಯದ ಆರೋಪಿಗಳು ದೇಶದ ವಿವಿಧ ಮೂಲೆಯಲ್ಲಿ ಅಪರಾಧವೆಸಗಿದಾಗ ತಂತ್ರಜ್ಞಾನದ ನೆರವಿನಿಂದ ಕೂಡಲೇ ಆತನ ವಿಳಾಸ, ಪ್ರಕರಣಗಳ ಹಿನ್ನೆಲೆ, ಯಾವ ರೀತಿಯ ಅಪರಾಧ ಎಸಗಿದ್ದಾನೆ ಸೇರಿದಂತೆ ಪೊಲೀಸರಿಗೆ ಬೇಕಾಗುವ ಉಪಯುಕ್ತ ಮಾಹಿತಿ ಪಡೆಯಲು ಸಹಕಾರಿಯಾಗುವುದರ ಜೊತೆಗೆ ತ್ವರಿತಗತಿಯಲ್ಲಿ ಪ್ರಕರಣ ಭೇದಿಸಲು ನೆರವಾಗಲಿದೆ.
ವರ್ಷಕ್ಕೆ 25-30 ಸಾವಿರ ಕ್ರಿಮಿನಲ್ಸ್ ಡೇಟಾ ಸಂಗ್ರಹ: ರಾಜ್ಯ ಬೆರಳು ಮುದ್ರೆ ಸಂಗ್ರಹಾಲಯಕ್ಕೆ ಎಸ್ಪಿ ಮುಖ್ಯಸ್ಥರಾಗಿದ್ದು, ವಲಯ ಮಟ್ಟದಲ್ಲಿ ಡಿವೈಎಸ್ಪಿ ಹಾಗೂ ಜಿಲ್ಲಾ ಮಟ್ಟದಲ್ಲಿ ಇನ್ಸ್ಪೆಕ್ಟರ್ ಗಳು ಕಾರ್ಯನಿರ್ವಹಿಸುತ್ತಾರೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಬೆರಳು ಮುದ್ರೆ ಘಟಕಗಳಿವೆ. ಇವುಗಳಿಗೆ ಪೊಲೀಸ್ ಇನ್ಸ್ಪೆಕ್ಟರ್ಗಳೇ ಘಟಕಾಧಿಕಾರಿ.
ರಾಜ್ಯದಲ್ಲಿ ಪ್ರಮುಖ ಅಪರಾಧಗಳು ನಡೆದಾಗ ಸ್ಥಳಕ್ಕೆ ಘಟಕಾಧಿಕಾರಿಗಳು ಸಿಬ್ಬಂದಿಯೊಂದಿಗೆ ದೌಡಾಯಿಸಿ ಆರೋಪಿತರ ಫಿಂಗರ್ ಪ್ರಿಂಟ್ ಮಾಹಿತಿ ಸಂಗ್ರಹಿಸುತ್ತಾರೆ. ಅವುಗಳನ್ನು ತಮ್ಮ ಬಳಿಯಿರುವ ಫಿಂಗರ್ ಪ್ರಿಂಟ್ ಮ್ಯಾಚ್ ಮಾಡುತ್ತಾರೆ. ಒಂದು ವೇಳೆ ಈ ಹಿಂದೆ ಅಪರಾಧವೆಸಗಿ ಬಂಧಿತನಾಗಿ ಬೆರಳು ಮುದ್ರೆ ಡೇಟಾದಲ್ಲಿ ಆರೋಪಿವಿದ್ದರೆ ಕೂಡಲೇ ಪತ್ತೆ ಹಚ್ಚಬಹುದಾಗಿದೆ.
ಘಟಕಾಧಿಕಾರಿಗಳು ನೀಡುವ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲು ಅನುಕೂಲವಾಗುತ್ತದೆ. ಈ ಮೂಲಕ ರಾಜ್ಯದಲ್ಲಿ ವರ್ಷಕ್ಕೆ ಸರಿ ಸುಮಾರು 25ರಿಂದ 30 ಸಾವಿರ ಕ್ರಿಮಿನಲ್ಸ್ ಗಳ ಬೆರಳಚ್ಚನ್ನು ಸಂಗ್ರಹಿಸಲಾಗುತ್ತದೆ.
ಬೆರಳು ಮುದ್ರೆಯಿಂದ ಸುಮಾರು ಪ್ರತಿ ವರ್ಷ 400 ರಿಂದ 500 ಪ್ರಕರಣ ಭೇದಿಸಲಾಗುತ್ತದೆ. ಪ್ರಾಯೋಗಿಕ ಹಂತದಲ್ಲಿರುವ ಎನ್ಎಎಫ್ಐಎಸ್ ಮೂಲಕ ರಾಜ್ಯದಲ್ಲಿ ಸುಮಾರು 24 ಪ್ರಕರಣಗಳನ್ನು ಭೇದಿಸಲಾಗಿದೆ. ಈಗಾಗಲೇ 5 ಲಕ್ಷ ಆರೋಪಿಗಳ ಬೆರಳು ಮುದ್ರೆಯನ್ನ ಕೇಂದ್ರದ ಸರ್ವರ್ಗೆ ರವಾನಿಸಲಾಗಿದೆ. ಇದು ನಿರಂತರ ಪ್ರಕ್ರಿಯೆಯಾಗಿರಲಿದೆ. ಒಟ್ಟಾರೆ ಪೊಲೀಸ್ ಇಲಾಖೆಯಲ್ಲಿ ಅಪರಾಧ ಪ್ರಕರಣಗಳನ್ನ ಭೇದಿಸಲು ಎಫ್ಪಿಬಿ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಜ್ಯ ಅಪರಾಧ ಮತ್ತು ತಾಂತ್ರಿಕ ಸೇವೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ತಿಳಿಸಿದ್ದಾರೆ.
ಈ ಹಿಂದೆ ಜಿಲ್ಲಾ ಘಟಕಗಳಲ್ಲಿ ಆರೋಪಿಗಳ ಬೆರಳಚ್ಚು ಸಂಗ್ರಹಿಸಿ ಜಿಲ್ಲಾ ಸರ್ವರ್ ಗಳಲ್ಲಿ ಇರುತಿತ್ತು. 2019 ರ ಬಳಿಕ ಎಫ್ ಪಿಬಿಯು ಆಟೋಮೆಟೆಡ್ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಷನ್ ಸಿಸ್ಟಮ್ ಗೆ ಸುಧಾರಿತ ಸಾಫ್ಟ್ ವೇರ್ ಅಳವಡಿಸಿಕೊಂಡು ವಿವಿಧ ಜಿಲ್ಲಾ ಸರ್ವರ್ ಗಳಲ್ಲಿ ಅಡಕವಾಗಿರುವ ಆರೋಪಿಗಳ ಬೆರಳು ಮುದ್ರೆಯನ್ನು ರಾಜ್ಯದ ಒಂದೇ ಸರ್ವರ್ ನ ತೆಕ್ಕೆಗೆ ತೆಗೆದುಕೊಂಡು ಶೋಧ ನಡೆಸಲಾಗುತಿತ್ತು. ಇದೀಗ ಬೆರಳು ಮುದ್ರೆ ಸಂಗ್ರಹಾಲಯವನ್ನ ಕೇಂದ್ರಿಕೃತಗೊಳಿಸುತ್ತಿದ್ದು ಪೂರ್ಣಗೊಂಡ ಬಳಿಕ ಆರೋಪಿಗಳ ಬಂಧನಕ್ಕೆ ಉಪಯುಕ್ತವಾಗಲಿದೆ ಎಂದು ರಾಜ್ಯ ಬೆರಳು ಮುದ್ರೆ ಸಂಗ್ರಹಾಲಯದ ಪೊಲೀಸ್ ಅಧೀಕ್ಷಕ ಎಂ.ಸಿ.ಕುಮಾರಸ್ಚಾಮಿ ಹೇಳಿದರು.
ಇದನ್ನೂ ಓದಿ: ವಿಚ್ಛೇದನ ನಿರಾಕರಿಸಿದ ಮಹಿಳೆಗೆ ಥಳಿಸಿದ ವಕೀಲ: ಕೋರ್ಟ್ ಆವರಣದಲ್ಲೇ ಘಟನೆ