ಬೆಂಗಳೂರು: ರಾಜ್ಯದ ಜನರ ಆರೋಗ್ಯ ಮುಖ್ಯ, ಲಾಕ್ ಡೌನ್ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳಿ ಎಂದು ರಾಜ್ಯಪಾಲರು ಸರ್ಕಾರಕ್ಕೆ ಸಲಹೆ ನೀಡಿದ್ದು, ಆದಷ್ಟು ಬೇಗ ಯಾವ ರೀತಿ ಕಠಿಣ ನಿಯಮ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದು ಪ್ರಕಟಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸರ್ವಪಕ್ಷ ಸಭೆ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಪಾಲರು ಸರ್ವಪಕ್ಷ ಸಭೆ ನಡೆಸಿದರು. ಎರಡು ಗಂಟೆಗಳ ಕಾಲ ವಿಸ್ತೃತವಾದ ಚರ್ಚೆ ಆಗಿದೆ, ಬಹಳ ವಿಚಾರವನ್ನು ಕುಮಾರಸ್ವಾಮಿ ಹೇಳಿದ್ದಾರೆ. ಅವರು ಲಾಕ್ ಡೌನ್ ಪರ ಮಾತನಾಡಿದ್ದಾರೆ, ಔಷಧ ವ್ಯವಸ್ಥೆ ಮಾಡಲು ಹೇಳಿದ್ದಾರೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತಜ್ಞರ ಸಮಿತಿ ಹೇಳಿದ್ದನ್ನು ಯೋಚಿಸಿ ಕ್ರಮ ಕೈಗೊಳ್ಳಿ ಎಂದಿದ್ದಾರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸರ್ಕಾರದ ಕಾರ್ಯಕ್ಕೆ ಶ್ಲಾಘನೆ ಮಾಡಿದ್ದಾರೆ, ರಾಜ್ಯಪಾಲರು ಕೂಡಲೇ ಕ್ರಮ ಕೈಗೊಳ್ಳಿ, ತಜ್ಞರ ಸಮಿತಿ ವರದಿ ಅನುಷ್ಠಾನ ಮಾಡಿ ಎಂದು ಸೂಚನೆ ನೀಡಿದ್ದಾರೆ ಎಂದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದೇನು!?
ರಾಜ್ಯಪಾಲರು ಬಹಳ ಕಠಿಣ ನಿರ್ಣಯ ಕೈಗೊಳ್ಳಬೇಕು, ಆರೋಗ್ಯ ಕರ್ನಾಟಕ ಬೇಕು ಎಂದಿದ್ದಾರೆ, ತಾಂತ್ರಿಕ ಸಲಹಾ ಸಮಿತಿ ಸಭೆ ಇಂದೇ ನಡೆಸಿ ತೀರ್ಮಾನ ಮಾಡಿ ಎನ್ನುವ ಸಲಹೆ ನೀಡಿದ್ದಾರೆ. ಸಿಎಂ ಜೊತೆ ಮಾತನಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ತಾಂತ್ರಿಕ ಸಮಿತಿ, ಪ್ರತಿಕ್ಷ ಸದಸ್ಯರ ಸಲಹೆ ಎಲ್ಲವನ್ನೂ ಪರಿಗಣಿಸಿ ಕಠಿಣ ನಿಲುವು ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈಗ ಬಿಗಿಯಾದ ಕ್ರಮ ಅವಶ್ಯಕತೆ ಇದೆ ಎಂದು ಎಲ್ಲರೂ ಸಲಹೆ ನೀಡಿದ್ದಾರೆ. ಕಳೆದ ಬಾರಿ ಲಾಕ್ ಡೌನ್ ಮಾಡಿದ್ದೆವು, ನಂತರ ಬೇರೆ ಕಠಿಣ ಕ್ರಮವೂ ಆಗಿತ್ತು. ಅದೆಲ್ಲ ನೋಡಿ ಕ್ರಮ ಈಗ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸಲಾಗುತ್ತದೆ ಎಂದರು.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಲಾಕ್ ಡೌನ್ ಮಾಡುವಂತೆ ಸಲಹೆ ನೀಡಿರಲಿಲ್ಲ, ಕೇವಲ ಕಠಿಣ ನಿಲುವಿಗೆ ಸೂಚಿಸಿತ್ತು, ಈಗ ಮತ್ತೊಮ್ಮೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ತಾಂತ್ರಿಕ ಸಮಿತಿ ಜೊತೆ ಸಭೆ ಆಗಬೇಕು, ಸಮಿತಿ ವರದಿ ನೀಡಲಿದೆ, ಸಾಧಕ ಬಾಧಕ ನೋಡಿ ಆದಷ್ಟು ಬೇಗ ನೂತನ ಮಾರ್ಗಸೂಚಿ ಕುರಿತು ನಿರ್ಣಯ ಆಗಲಿದೆ ಎಂದರು.