ಬೆಂಗಳೂರು: ಸೈದ್ಧಾಂತಿಕ, ಸಂಘಟನೆ, ರಾಜಕೀಯವಾಗಿ ಚುನಾವಣೆ ಎದುರಿಸಲು ರೋಡ್ಮ್ಯಾಪ್ ಸಿದ್ಧಪಡಿಸುವ ಕೆಲಸ ಸಂಕಲ್ಪ ಶಿಬಿರದಲ್ಲಿ ನಡೆಯಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದರು. ಬೆಂಗಳೂರು ಹೊರವಲಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಂಕಲ್ಪ ಚಿಂತನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಏರಲು ಜನರ ಆಶೀರ್ವಾದ ಇರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಜನರನ್ನು ಮಾತನಾಡಿಸಿದಾಗ ಈ ಅಂಶ ಗಮನಿಸಿದ್ದು, ಅಧಿಕಾರಕ್ಕೆ ಬರುವ ನನಗೆ ವಿಶ್ವಾಸವಿದೆ. ಉದಯಪುರದ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಕೆಲವು ನಿರ್ಣಯ ಕೈಗೊಳ್ಳಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಸಂಘಟನೆಯ ಎಲ್ಲ ಖಾಲಿ ಹುದ್ದೆ ಭರ್ತಿ ಮಾಡುವುದು. ಅದೇ ಪ್ರಕಾರ ಹದಿನೈದು ದಿನದಲ್ಲಿ ಕೆಪಿಸಿಸಿ ಹಂತದಲ್ಲಿ ಭರ್ತಿ ಮಾಡಲಾಗುತ್ತದೆ ಎಂದರು.
ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಘಟಕಗಳಿಂದ ವಾರ್ರೂಮ್ ಸ್ಥಾಪನೆ ಮಾಡಲಾಗುವುದು. ಎಐಸಿಸಿಯ ನಿರ್ದೇಶನದಂತೆ ಪದಾಧಿಕಾರಿಗಳಲ್ಲಿ ಶೇಕಡಾ ಐವತ್ತು ಮಂದಿ ಐವತ್ತರ ಒಳಗಿನವರಿರಬೇಕು. ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ ಮಹಿಳೆಯರನ್ನು ಸಮಿತಿಗಳಲ್ಲಿ ಆದ್ಯತೆ ಮೇಲೆ ಅವಕಾಶ ಕೊಡಬೇಕು. ಟಿಕೆಟ್ ಹಂಚಿಕೆಯಲ್ಲೂ ಇದನ್ನು ಪಾಲಿಸಬೇಕು. ಜಿಲ್ಲಾಧ್ಯಕ್ಷ, ಬ್ಲಾಕ್ ಅಧ್ಯಕ್ಷ ಸೇರಿ ಸಂಘಟನೆಯಲ್ಲಿ ಐದು ವರ್ಷದ ಜವಾಬ್ದಾರಿ ಮುಗಿದ ಕೂಡಲೇ ಬೇರೆಯವರಿಗೆ ಅವಕಾಶ ಕೊಡಬೇಕೆಂದು ಹೇಳಿದರು.
ಒಂದು ಕುಟುಂಬ, ಒಂದು ಟಿಕೆಟ್: ಒಂದೇ ಕುಟುಂಬಕ್ಕೆ ಒಂದೇ ಟಿಕೆಟ್ ಕೊಡುವ ತೀರ್ಮಾನದಲ್ಲಿ ಸ್ಪಷ್ಟನೆ ಇದೆ. ಎಲ್ಲರಿಗೂ ಟಿಕೆಟ್ ತಿರಸ್ಕಾರಿಸಲಾಗಲ್ಲ. ಕೆಲವರು ಪಕ್ಷದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದರೆ, ನನ್ನ ಮಗ ಅಮೆರಿಕದಿಂದ ಬಂದಿದ್ದಾನೆ. ಇನ್ನೆಲ್ಲಿಂದಲೋ ಬಂದಿದ್ದಾನೆ. ನನ್ನ ಪತ್ನಿಗೆ ಟಿಕೆಟ್ ಕೊಡಬೇಕೆಂಬ ಬೇಡಿಕೆಗೆ ಇನ್ಮುಂದೆ ಅವಕಾಶ ಕೊಡಲ್ಲ. ಹೀಗೆ ಅವಕಾಶ ಬೇಕಿದ್ದರೆ ಪಕ್ಷದಲ್ಲಿ ಐದು ವರ್ಷ ಸೇವೆ ಮಾಡಿರಬೇಕು. ಪ್ರತಿ ತಿಂಗಳು ಡಿಸಿಸಿ ಸಭೆ ಕಡ್ಡಾಯ. ಆರು ತಿಂಗಳಿಗೊಮ್ಮೆ ಜನರಲ್ ಬಾಡಿ ಪಿಸಿಸಿ ಆಗಬೇಕೆಂದು ಸುರ್ಜೇವಾಲಾ ಹೇಳಿದರು.
ಅಸಮಾಧಾನದಿಂದ ಪಕ್ಷಕ್ಕೆ ಹಾನಿ: ಜಿಲ್ಲಾ ಹಂತದಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಯಬೇಕು. ನಾಲ್ಕು ನಿಮಿಷದ ಫೇಮ್‌ಗಾಗಿ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಬೇಡಿ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಏನೇ ಇದ್ದರೂ ನಾಯಕರ ಜೊತೆ ಚರ್ಚೆ ಮಾಡಿ ಎಂಬ ಸೂಚಿಸಿದರು.
ಪರಿಷತ್ ಹಾಗೂ ರಾಜ್ಯಸಭೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಾಧಾನ ಕಂಡು ಬಂದಿದ್ದು ನಿಜ. ಆದರೆ, ಈ ಅಸಮಾಧಾನ ಶಮನ ಮಾಡುತ್ತೇವೆ. ಅಸಮಾಧಾನ ಬಂಡಾಯ ಸ್ವರೂಪ ತೆಗೆದುಕೊಳ್ಳಬಾರದು. ಶಾಸಕರ ಸಂಖ್ಯಾಬಲ ಕಡಿಮೆಯಿದೆ. ಆಕಾಂಕ್ಷಿಗಳು ಹೆಚ್ಚಿದ್ದಾರೆ. 150 ಸ್ಥಾನಗಳು ಕಾಂಗ್ರೆಸ್ಗೆ ಇದ್ದಿದ್ದರೇ ಎಲ್ಲರ ಬೇಡಿಕೆಗಳನ್ನು ಈಡೇರಿಸುತ್ತಿದ್ದವು. ಹಲವು ಅರ್ಹರಿಗೆ ರಾಜ್ಯಸಭೆಯಲ್ಲಿ ಅವಕಾಶ ಮಾಡಿಕೊಡಲ ಸಾಧ್ಯವಾಗಿಲ್ಲ ಎಂದು ವಿವರಿಸಿದರು.
ಡಿಕೆಶಿ-ಸಿದ್ದು ಬಗ್ಗೆ ದೂಷಿಸಬೇಡಿ: ಅಭ್ಯರ್ಥಿ ಅಯ್ಕೆ ವಿಚಾರದಲ್ಲಿ ಡಿಕೆಶಿ, ಸಿದ್ದರಾಮಯ್ಯ ಹೈಕಮಾಂಡ್ ಜೊತೆ ಚರ್ಚೆ ಮಾಡಿಯೇ ತೀರ್ಮಾನ ಮಾಡಿದ್ದಾರೆ. ಹಾಗಾಗಿ ನೀವು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಇದು ಹೈಕಮಾಂಡ್ ತೀರ್ಮಾನ. ನಮ್ಮ ಬಳಿ ರಾಜ್ಯಸಭೆಯ 2 ಸ್ಥಾನ ಇದೆ. ಆದರೆ, ಡಜನ್ಗಿಂತ ಆಕಾಂಕ್ಷಿಗಳು ಇದ್ದಾರೆ. ಎಲ್ಲರಿಗೂ ಟಿಕೆಟ್ ನೀಡುವುದಕ್ಕೆ ಸಾಧ್ಯವಾ ಎಂದು ಪ್ರಶ್ನೆ ಮಾಡಿದರು.
ಹಣ ಮತ್ತು ಜಾತಿಯಿಂದ ಗೆಲುವು ಅಸಾಧ್ಯ. ಹಣ ಮತ್ತು ಜಾತಿಯಿಂದ ಗೆಲ್ಲಬಹುದು ಎಂದು ಬಿಜೆಪಿ ಅಂದುಕೊಂಡಿದೆ. ನಮ್ಮಲ್ಲಿ ಕೂಡ ಕೆಲವರು ಹಣ, ಜಾತಿಯಿಂದ ಗೆಲ್ಲಬಹುದು ಎಂದು ಭಾವಿಸಿದ್ದಾರೆ. ಒಬ್ಬೊಬ್ಬರು ಬೆಂಬಲಿಸಿದರೆ ಮಾತ್ರ ನಾವು ಮೇಲಕ್ಕೇರಬಹುದು. ನಾಯಕರ ನಡುವೆ ಭಿನ್ನಾಭಿಪ್ರಾಯ ಇದ್ದರೆ ಪಕ್ಷ ದುರ್ಬಲ ಆಗುತ್ತದೆ.
50ಕ್ಕೂ ಹೆಚ್ಚು ನಾಯಕರ ನಡುವೆ ವೈಮನಸ್ಸಿದೆ ಅಂತ ಬಿಂಬಿಸಲಾಗಿತ್ತು. ಮೇಕೆದಾಟು ಪಾದಯಾತ್ರೆಯಿಂದ ಎಲ್ಲ ನಾಯಕರೂ ಒಮ್ಮನಿಸಿನಿಂದ ಒಗ್ಗೂಡಲು ಸಾಧ್ಯವಾಯಿತು. ಈಗ ನಾವು ಪ್ರದೇಶವಾರು ಧ್ವನಿ ಎತ್ತಬೇಕಿದೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಹದಾಯಿ ವಿಷಯ ಕೈಗೆತ್ತಿಕೊಂಡು ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು. ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಚೆಲುವರಾಯಸ್ವಾಮಿ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಹರಿಪ್ರಸಾದ್ ಮಾತನಾಡಿದರು.
ಇದನ್ನೂ ಓದಿ: ವಿಧಾನಸಭೆ, ಲೋಕಸಭೆ ಜತೆ ಸ್ಥಳೀಯ ಸಂಸ್ಥೆ ಚುನಾವಣೆಗೂ ಸಿದ್ಧತೆ ನಡೆಸಿದ್ದೇವೆ: ಸಿದ್ದರಾಮಯ್ಯ