ಬೆಂಗಳೂರು: ನಾಯಕತ್ವ ಬದಲಾವಣೆಯಾಗಿ ಆರು ತಿಂಗಳಾಗುತ್ತಿದ್ದು, ಸಂಪುಟ ಪುನಾರಚನೆ ಒತ್ತಡದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ನಡೆಸುತ್ತಿದ್ದಾರೆ. ಇದಕ್ಕೆ ಹೈಕಮಾಂಡ್ ಅಸ್ತು ಎನ್ನುತ್ತಿಲ್ಲ, ಸಂಘ ಪರಿವಾರ ಬಿಡುತ್ತಿಲ್ಲ. ಮತ್ತೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳ ಅಲೆದಾಟವೂ ನಿಲ್ಲುತ್ತಿಲ್ಲ. ದೀಪಾವಳಿ, ಹೊಸ ವರ್ಷ, ಸಂಕ್ರಾಂತಿ ಎಂದು ಕಾದಿದ್ದ ಆಕಾಂಕ್ಷಿಗಳು ಇದೀಗ ಯುಗಾದಿವರೆಗೂ ಕಾಯಬೇಕಾದ ಸಂದಿಗ್ಧತೆಯಲ್ಲಿದ್ದಾರೆ.
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಖಾಲಿ ಉಳಿದಿರುವ ನಾಲ್ಕು ಸ್ಥಾನಗಳ ಭರ್ತಿ ಜೊತೆಗೆ ಕಳಪೆ ಸಾಧನೆ ತೋರಿದ ಕೆಲವರು ಮತ್ತು ಸಂಘಟನೆಗೆ ಬಳಸಿಕೊಳ್ಳಲು ಕೆಲ ಹಿರಿಯರಿಗೆ ಕೊಕ್ ನೀಡಿ ಹೊಸಬರಿಗೆ ಮಣೆ ಹಾಕಬೇಕು ಎನ್ನುವ ಚಿಂತನೆ ವ್ಯಕ್ತವಾಗುತ್ತಿದ್ದಂತೆ, ಆಕಾಂಕ್ಷಿಗಳಿಂದ ಲಾಬಿ ಶುರುವಾಗಿದೆ. ಪ್ರತಿನಿತ್ಯ ಮುಖ್ಯಮಂತ್ರಿ ನಿವಾಸಕ್ಕೆ ಆಕಾಂಕ್ಷಿಗಳು ಅಲೆದಾಟ ಆರಂಭಿಸಿದ್ದಾರೆ.
ವಲಸಿಗರಲ್ಲಿ ನಾರಾಯಣಗೌಡ, ಗೋಪಾಲಯ್ಯ ಸೇರಿದಂತೆ ಕೆಲವರ ಕಾರ್ಯನಿರ್ವಹಣೆಗೆ ಸಂಘ ಪರಿವಾರದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕೆಲವರನ್ನು ಕೈಬಿಟ್ಟು ಸಂಘ ಪರಿವಾರದ ಹಿನ್ನೆಲೆಯ ಶಾಸಕರಿಗೆ ಮಣೆ ಹಾಕಬೇಕು ಎಂದು ಇತ್ತೀಚೆಗೆ ಸಂಘ ಪರಿವಾರದ ಪ್ರಮುಖರು ಚರ್ಚಿಸಿ ರಾಜ್ಯ ಘಟಕಕ್ಕೆ ಸಂದೇಶ ಕಳುಹಿಸಿಕೊಟ್ಟಿದೆ. ಅದರ ಜೊತೆ ಪಕ್ಷದ ಕಡೆಯಿಂದಲೇ ಕೆಲ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.
ಸಂಘ ಪರಿವಾರ ಮತ್ತು ಪಕ್ಷದ ಅಣತಿಯಂತೆ ಪಟ್ಟಿ ಹಿಡಿದು ದೆಹಲಿಗೆ ಹೋಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಚರ್ಚೆಗೆ ಇನ್ನೂ ಸರಿಯಾದ ರೀತಿಯ ಅವಕಾಶ ಲಭ್ಯವಾಗಿಲ್ಲ. ಹಾಗಾಗಿ ಸಂಪುಟ ವಿಸ್ತರಣೆ ಸಂಕಷ್ಟಕ್ಕೆ ಸಿಎಂಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್ ಎ ರಾಮದಾಸ್, ಅಪ್ಪಚ್ಚು ರಂಜನ್, ಶಿವರಾಜ್ ಪಾಟೀಲ್, ಎಂ.ಪಿ. ರೇಣುಕಾಚಾರ್ಯ, ಅರವಿಂದ ಬೆಲ್ಲದ್, ಸೋಮಶೇಖರ ರೆಡ್ಡಿ, ಎಂ ಎಲ್ ಸಿ ಭಾರತಿ ಶೆಟ್ಟಿ, ಸಿ.ಪಿ ಯೋಗೇಶ್ವರ್, ಸೋಮೇಶ್ವರ ರೆಡ್ಡಿ ಸೇರಿದಂತೆ ಒಂದಷ್ಟು ಶಾಸಕರು ಕ್ಷೇತ್ರದ ಕೆಲಸ ಅನ್ನೋ ನೆಪದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.
ವಲಸಿಗರ ಕೋಟಾದಲ್ಲಿ ಸಂಪುಟ ಸೇರಲೇಬೇಕು ಎಂದು ನಿರ್ಧರಿಸಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಬಹಿರಂಗವಾಗಿಯೇ ಹೇಳಿಕೆ ನೀಡಿ ಅಪೇಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಇವರ ಜೊತೆ ತಿಪ್ಪಾರೆಡ್ಡಿ, ಪೂರ್ಣಿಮಾ, ಪರಣ್ಣ ಮುನವಳ್ಳಿ ಸೇರಿದಂತೆ ಮತ್ತಷ್ಟು ಶಾಸಕರು ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ.
ಯತ್ನಾಳ್, ರೇಣುಕಾಚಾರ್ಯ ಒತ್ತಡ: ಶತಾಯಗತಾಯವಾಗಿ ಒಂದೂವರೆ ವರ್ಷವಾದ್ರು ಮಿನಿಸ್ಟರ್ ಪಟ್ಟ ಅಲಂಕರಿಸಬೇಕು ಎಂದು ಪಣ ತೊಟ್ಟಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ತಮ್ಮ ರಾಜಕೀಯ ಗುರುವಿನ ಕಡುವೈರಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಜೊತೆಗೆ ಇದೀಗ ಕೈ ಜೋಡಿಸಿದ್ದಾರೆ. ವಿಧಾನಸೌಧದಲ್ಲಿ ಯತ್ನಾಳ್ ಜೊತೆಗೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಬಹಿರಂಗವಾಗಿ ಸಂಪುಟ ವಿಸ್ತರಣೆ ಈಗಲೇ ಆಗಬೇಕು ಎನ್ನುವ ಬೇಡಿಕೆ ಮುಂದಿಡುತ್ತಾ ಸಿಎಂ ಬೊಮ್ಮಾಯಿ ಮೇಲೆ ಒತ್ತಡ ಹೇರುತ್ತಿದ್ದಾರೆ.
ಇಬ್ಬರು ನಾಯಕರು ಒಟ್ಟಿಗೆ ಸೇರಿ ಬೊಮ್ಮಾಯಿ ಕ್ಯಾಬಿನೆಟ್ಗೆ ಎಂಟ್ರಿಯಾಗಾಲೇಬೇಕು ಅಂತ ಹೇಳಿ ದೆಹಲಿಯಾತ್ರೆಗೆ ಸಿದ್ಧಗೊಂಡಿದ್ದಾರೆ. ಬೊಮ್ಮಾಯಿ ಮೇಲೆ ಒತ್ತಡ ಹೇರುವುದು ಅದು ಸಫಲವಾಗದೇ ಇದ್ದಲ್ಲಿ ಹೈಕಮಾಂಡ್ ಮೇಲೆಯೇ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಒಂದು ಪಕ್ಷ ಸಂಪುಟ ವಿಸ್ತರಣೆ ವಿಳಂಬವಾದರೆ ಕೆಲ ಶಾಸಕರ ಗುಂಪು ಕಟ್ಟಿಕೊಂಡು ದೆಹಲಿ ದೊರೆಗಳ ಮುಂದೆ ಪರೇಡ್ ಮಾಡಲು ಸಹ ಸಜ್ಜಾಗಿದ್ದಾರೆ.
ಸಾಹುಕಾರನ ನೆರವು ಕೇಳಿದ್ರಾ ಹೊಸ ದೋಸ್ತಿಗಳು: ಇದರ ಜೊತೆ ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗು ರೇಣುಕಾಚಾರ್ಯ ಶಾಸಕ ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದ್ದು, ಸಂಪುಟ ಪುನಾರಚನೆಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಮೂಲಕ ಬೊಮ್ಮಾಯಿ ಮೇಲೆ ಒತ್ತಡ ಹಾಕಿಸಬೇಕು ಎಂದು ನಿರ್ಧರಿಸಿದ್ದು, ಅದಕ್ಕಾಗಿ ಬೆಳಗಾವಿ ಸಾಹುಕಾರ ಸದ್ಯದಲ್ಲೇ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ.
ಈ ಹಿಂದಿನಿಂದಲೇ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಆಗಾಗ್ಗೆ ಜಾರಕಿಹೊಳಿ ನಿವಾಸಕ್ಕೆ ಲಂಚ್ ಮೀಟ್, ಡಿನ್ನರ್ ಮೀಟ್ ಹೆಸರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಲೇ ಇದ್ದು, ಇದೀಗ ಮತ್ತೆ ಜಾರಕಿಹೊಳಿ ಮೂಲಕವೇ ಯಡಿಯೂರಪ್ಪ ಮೇಲೆ ಒತ್ತಡ ತರಲು ಹೊರಟಿದ್ದಾರೆ.
ರೀ ಎಂಟ್ರಿಗೆ ಸಾಹುಕಾರ ಯತ್ನ: ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಮರಳಿ ಸಂಪುಟ ಸೇರಲು ಸರ್ಕಸ್ ನಡೆಸುತ್ತಿದ್ದಾರೆ. ತಮ್ಮ ವಿರುದ್ಧದ ಪ್ರಕರಣದಲ್ಲಿ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಅದರಂದ ಆದಷ್ಟು ಬೇಗ ಪಾರಾಗುವ ವಿಶ್ವಾಸದಲ್ಲಿದ್ದಾರೆ. ಹಾಗಾಗಿ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಯಡಿಯೂರಪ್ಪ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ. ಈಗಾಗಲೇ ಕೆಲವು ಬಾರಿ ಸಿಎಂ ಜೊತೆ ಈ ಸಂಬಂಧ ಮಾತುಕತೆಯನ್ನು ಸಹ ನಡೆಸಿದ್ದಾರೆ.
ಒಂದು ಕಡೆ ಸಂಘ ಪರಿವಾರ, ಮತ್ತೊಂದು ಕಡೆ ಪಕ್ಷದ ರಾಜ್ಯ ಘಟಕದ ಶಿಫಾರಸು, ಮತ್ತೊಂದೆ ಆಕಾಂಕ್ಷಿಗಳು ಸಿಎಂ ಬೊಮ್ಮಾಯಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೋವಿಡ್ ಕಾರಣ ನೀಡಿದ್ದ ವರಿಷ್ಠರ ನಂತರ ಧನುರ್ಮಾಸ ಎಂದಿದ್ದರು. ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಎನ್ನುವ ನಿಲುವಿಗೆ ಮುಖ್ಯಮಂತ್ರಿಗಳು ಬಂದಿದ್ದರು. ಆದರೆ ಇದೀಗ ಸಂಕ್ರಾಂತಿಯೂ ಮುಗಿದಿದ್ದು, ಸಂಪುಟ ವಿಸ್ತರಣೆಗೆ ಮಾತ್ರ ಇನ್ನೂ ಮುಹೂರ್ತ ಕೂಡಿಬಂದಿಲ್ಲ.
ಇದೀಗ ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿ ಹೈಕಮಾಂಡ್ ನಾಯಕರು ಉತ್ತರ ಪ್ರದೇಶ ಚುನಾವಣೆಯನ್ನೇ ಕೇಂದ್ರೀಕರಿಸಿಕೊಂಡು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಸದ್ಯ ಕರ್ನಾಟಕ ರಾಜಕೀಯ, ಸಂಪುಟ ವಿಸ್ತರಣೆಯಂತಹ ವಿಷಯಗಳ ಕುರಿತು ತಲೆಕೆಡಿಸಿಕೊಳ್ಳುವುದು ಕಷ್ಟ. ಹಾಗಾಗಿ ಪಂಚ ರಾಜ್ಯಗಳ ಚುನಾವಣೆ ಹಾಗು ರಾಜ್ಯ ಮುಂಗಡ ಬಜೆಟ್ ಮಂಡನೆ ನಂತರವೇ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿಬರಲಿದೆ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ