ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ಬಸ್ ಮುಷ್ಕರದ ಬಿಸಿ ಈಗಿನಿಂದಲೇ ಜನರಿಗೆ ತಟ್ಟುಲಿದೆ. ಹೀಗಾಗಿ, ಇಂದು ನಡೆಯಲಿರುವ ಪರೀಕ್ಷೆಗಳನ್ನು ಕೆಲವು ವಿಶ್ವವಿದ್ಯಾಲಯಗಳು ದಿನಾಂಕ ಮುಂದೂಡಿದ್ದರೇ ಮತ್ತೆ ಕೆಲವು ವಿವಿಗಳು ಅಗತ್ಯ ಸಿದ್ಧತೆಗಳೊಂದಿಗೆ ನಡೆಸುತ್ತಿವೆ.
6ನೇ ವೇತನ ಆಯೋಗದ ಪ್ರಕಾರ ತಮಗೆ ವೇತನ ನೀಡಬೇಕು ಎಂಬುದು ಸಾರಿಗೆ ನಿಗಮದ ಸಿಬ್ಬಂದಿಯ ಬಹುದೊಡ್ಡ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮದ ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಮಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ:
ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆ ಏ. 1 ರಂದು ಆರಂಭವಾಗಿತ್ತು. ಈಗಾಗಲೆ 3 ಪರೀಕ್ಷೆಗಳು ನಡೆದಿದ್ದು ಇಂದು ನಾಲ್ಕನೇ ವಿಷಯದ ಪರೀಕ್ಷೆ ನಡೆಯಬೇಕಿತ್ತು. ಆದರೆ ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಬರಲು ಅನಾನುಕೂಲವಾಗುವ ನಿಟ್ಟಿನಲ್ಲಿ ನಾಳೆಯ ಪರೀಕ್ಷೆ ಮುಂದೂಡಲಾಗಿದೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಇಲಾಖೆಯ ರಿಜಿಸ್ಟ್ರಾರ್ ಪಿ ಎಲ್ ಧರ್ಮ ಅವರು ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಗೆ ಬರಲು ಸಮಸ್ಯೆ ಯಾಗುವ ಸಾಧ್ಯತೆಯ ಕಾರಣದಿಂದ ನಾಳಿನ ಪದವಿ ಪರೀಕ್ಷೆ ಮುಂದೂಡಲಾಗಿದೆ. ಮುಂದೂಡಿಕೆಯಾದ ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ತುಮಕೂರು ವಿವಿ ಪರೀಕ್ಷೆಗಳು ಮುಂದೂಡಿಕೆ:
ಏಪ್ರಿಲ್ 7ರಂದು ನಡೆಯಬೇಕಿದ್ದ ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ವಿವಿಧ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿ ಸಿದ್ದೇಗೌಡ ತಿಳಿಸಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದ ವಿವಿಧ ಸ್ನಾತಕ ಪದವಿಗಳ ತೃತೀಯ ಸೆಮಿಸ್ಟರ್ ಹಾಗೂ ಬಿಎ ಇಂಟಿಗ್ರೇಟೆಡ್ ಕನ್ನಡ ಪಂಡಿತ್ ಪದವಿ 7ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ಏಪ್ರಿಲ್ 19ಕ್ಕೆ ಮುಂದೂಡಲಾಗಿದೆ.
ಬೆಂಗಳೂರು ಉತ್ತರ ವಿವಿ ಪರೀಕ್ಷೆ ಮುಂದೂಡಿಕೆ:
ಇಂದಿನಿಂದ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ಏಪ್ರಿಲ್ 7ಕ್ಕೆ ನಡೆಯಬೇಕಿದ್ದ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ನಗರ ವಿವಿ ಎಲ್ಲ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಂದು ಬೆಂಗಳೂರು ವಿವಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
ದಾವಣಗೆರೆ ವಿವಿ ವ್ಯಾಪ್ತಿಯಲ್ಲಿ ಇಂದೇ ಪರೀಕ್ಷೆ:
ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಅಂದರೆ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪದವಿ ಕಾಲೇಜುಗಳಲ್ಲಿ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ದಾವಣಗೆರೆ ವಿವಿ ಪರೀಕ್ಷಾಂಗ ವಿಭಾಗದ ರಿಜಿಸ್ಟ್ರಾರ್ ಮಾಹಿತಿ ನೀಡಿದ್ದಾರೆ.
ಕುವೆಂಪು ವಿವಿಯ ಪರೀಕ್ಷೆ ಮುಂದುವರಿಕೆ:
ಕುವೆಂಪು ವಿಶ್ವ ವಿದ್ಯಾನಿಲಯದ ಪರೀಕ್ಷೆಗಳು ಎಂದಿನಂತೆ ಇಂದು ನಡೆಯಲಿದೆ ಎಂದು ಕುವೆಂಪು ವಿವಿ ಸ್ಪಷ್ಟನೆ ನೀಡಿದೆ.
ಸಾರಿಗೆ ನೌಕರರ ಮುಷ್ಕರ ನಡೆಯುವುದರಿಂದ ಪರೀಕ್ಷೆ ಮುಂದೂಡಬಹುದು ಎಂದು ಭಾವಿಸಲಾಗಿತ್ತು. ಆದರೆ ನಾಳೆ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಕುವೆಂಪು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೂ. ಪಿ.ಕಣ್ಣನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ ನೌಕರರ ಮುಷ್ಕರ ಅನಿರ್ದಿಷ್ಟವಧಿವರೆಗೂ ನಡೆಯಲಿದೆ. ಮುಷ್ಕರ ಮುಂದುವರೆಯುವುದರಿಂದ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ. ಅಲ್ಲದೆ ಪರೀಕ್ಷೆಗಳನ್ನು ಮುಂದೂಡಬೇಕೆಂದು ಯಾವುದೇ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಬಾರದೆ ಇರುವುದರಿಂದ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದಿನ ಪರಿಸ್ಥಿತಿ ಬಗ್ಗೆ ಕುಲಪತಿಗಳೊಂದಿಗೆ ಸಮಾಲೋಚಿಸಿ, ಮುಂದಿನ ಪರೀಕ್ಷೆಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರೊ.ಪಿ.ಕಣ್ಣಪ್ಪ ತಿಳಿಸಿದ್ದಾರೆ.
ಮೈಸೂರು ವಿವಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ:
ಸಾರಿಗೆ ನೌಕರರ ಮುಷ್ಕರ ಇದ್ದರೂ ಸಹ ಮೈಸೂರು ವಿಶ್ವವಿದ್ಯಾಲಯದ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ರಿಜಿಸ್ಟ್ರಾರ್ ಪ್ರೊ ಎ ಪಿ ಜ್ಞಾನಪ್ರಕಾಶ್ ಮಾಹಿತಿ ನೀಡಿದ್ದಾರೆ. ಪದವಿ ವಿಭಾಗದ ಎಲ್ಲಾ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.