ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಇಂದು ಬಜೆಟ್ ಮಂಡನೆ ಮಾಡಿದ್ದು, ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಶೇಷ ಅನುದಾನ ನೀಡಿದ್ದಾರೆ.
ಪಶುಸಂಗೋಪನೆ :
- ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುವ ಸಂಕಷ್ಟ ನಿವಾರಣೆಗೆ ʻಅನುಗ್ರಹʼ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆದರೆ, ಹಿಂದಿನ ಸರ್ಕಾರ ಅದನ್ನು ನಿರ್ಲಕ್ಷಿಸಿರುವುದು ಅವರ ರೈತ ವಿರೋಧಿ ಧೋರಣೆ ಬಿಂಬಿಸುತ್ತದೆ. ಈ ಯೋಜನೆಯನ್ನು ಪುನರ್‌ಸ್ಥಾಪಿಸಿ ಕುರಿ ಮತ್ತು ಮೇಕೆಗಳಿಗೆ 5,000 ರೂ. ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳಿಗೆ 10,000 ರೂ. ಪರಿಹಾರ ಒದಗಿಸಲಾಗುವುದು.
- ʻಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆʼ ಎಂಬ ಧ್ಯೇಯವಾಕ್ಯ ಹೊಂದಿರುವ ʻನಂದಿನಿʼಯು ಕೋಟ್ಯಾಂತರ ಜನರ ಬದುಕಿಗೆ ಆಸರೆಯಾಗಿದೆ. ನಂದಿನಿ ಬ್ರಾಂಡ್ ಕನ್ನಡಿಗರೊಂದಿಗೆ ಭಾವನಾತ್ಮಕ ಬೆಸುಗೆಯನ್ನು ಹೊಂದಿದ್ದು, ಇದನ್ನು ಉಳಿಸಿ ಇನ್ನಷ್ಟು ಬೆಳೆಸಲು ನಮ್ಮ ಸರ್ಕಾರ ಬದ್ಧವಾಗಿದೆ.
- ರಾಜ್ಯದಲ್ಲಿ 2022-23 ನೇ ಸಾಲಿನಲ್ಲಿ ಚರ್ಮಗಂಟು ರೋಗದ ಹರಡುವಿಕೆ, ಪಶು ಆಹಾರದ ಕಚ್ಚಾ ಪದಾರ್ಥಗಳ ಬೆಲೆ ಏರಿಕೆ, ವಾಣಿಜ್ಯ ಬೆಳೆಗಳ ಪ್ರದೇಶಗಳ ಹೆಚ್ಚಳ ಹಾಗೂ ಮುಂಗಾರು ತಡವಾಗಿರುವ ಕಾರಣಗಳಿಂದ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಹಾಲಿನ ಇಳುವರಿಯಲ್ಲಿ ಶೇ.5 ರಿಂದ ಶೇ.7 ರಷ್ಟು ಇಳಿಕೆಯಾಗಿರುತ್ತದೆ. ಉತ್ತಮ ಹಾಲು ನೀಡುವ ತಳಿಗಳನ್ನು ಅಭಿವೃದ್ಧಿಪಡಿಸುವ ಹಾಗೂ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಸಮರ್ಪಕ ಚಿಕಿತ್ಸೆ, ಔಷಧ ಮತ್ತು ಲಸಿಕೆಗಳನ್ನು ಒದಗಿಸುವ ಮೂಲಕ ಹಾಲಿನ ಇಳುವರಿಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು.
- ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಒಟ್ಟು 32,045 ಜಾನುವಾರುಗಳು ಮರಣ ಹೊಂದಿರುತ್ತವೆ. ಈ ಪೈಕಿ ಒಟ್ಟು 25,859 ಮರಣ ಹೊಂದಿದ ಜಾನುವಾರುಗಳಿಗೆ 53 ಕೋಟಿ ರೂ. ಪರಿಹಾರಧನವನ್ನು ವಿತರಿಸಲಾಗಿದೆ. ಬಾಕಿ ಇರುವ 5,851 ಮರಣಹೊಂದಿದ ಜಾನುವಾರುಗಳ ಮಾಲೀಕರಿಗೆ ೧೨ ಕೋಟಿ ರೂ. ಪರಿಹಾರಧನವನ್ನು ವಿತರಿಸಲು ಕ್ರಮ ವಹಿಸಲಾಗುವುದು.
- ಗ್ರಾಹಕರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಪ್ರೋಟೀನ್‌ಯುಕ್ತ ಮಾಂಸ ಮತ್ತು ಮೊಟ್ಟೆ ಪೂರೈಕೆಗೆ ಅವಕಾಶ ಕಲ್ಪಿಸಲು ಖಾಸಗಿ ಸಹಭಾಗಿತ್ವದಲ್ಲಿ ಜಾನುವಾರು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳು ಹಾಗೂ ಉತ್ತಮವಾದ ಮಾರುಕಟ್ಟೆ ಅಭಿವೃದ್ಧಿ ಮಾಡಲಾಗುವುದು.
ಮೀನುಗಾರಿಕೆಗೆ ಉತ್ತೇಜನ :
- ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು 50,000 ರೂ. ಗಳಿಂದ ಮೂರು ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು.
- ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು ಒಂದೂವರೆ ಲಕ್ಷ ಕಿಲೋ ಲೀಟರ್‌ನಿಂದ ಎರಡು ಲಕ್ಷ ಕಿಲೋ ಲೀಟರ್‌ಗಳವರೆಗೆ ಹೆಚ್ಚಿಸಲಾಗುವುದು. ಇದರಿಂದ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂ.ಗಳಷ್ಟು ನೆರವಾಗಲಿದೆ.
- ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಇಂಜಿನ್‌ಗಳನ್ನು ಪೆಟ್ರೋಲ್/ಡೀಸೆಲ್ ಇಂಜಿನ್‌ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 4,000 ಸೀಮೆ ಎಣ್ಣೆ ಇಂಜಿನ್‌ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ಒದಗಿಸಲಾಗುವುದು.
- ರಾಜ್ಯದ ಜಲಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಮೀನು ಮರಿಗಳನ್ನು ಉತ್ಪಾದಿಸುವ ಮೂಲಕ ಒಳನಾಡು ಮೀನುಗಾರಿಕೆಗೆ ಇರುವ ವಿಪುಲ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು. ಜೊತೆಗೆ, ಹೆಚ್ಚಿನ ಬೇಡಿಕೆಯಿರುವ ಕಾಟ್ಲಾ ಮತ್ತು ರೋಹು ಮೀನು ಮರಿಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಒಳನಾಡು ಮೀನುಗಾರಿಕೆಯನ್ನು ಪ್ರೋತ್ಸಾಹಿಸಲಾಗುವುದು.
- ಸೀಗಡಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಉತ್ತಮ ಮಾರುಕಟ್ಟೆಯನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು.
- ಮೀನುಗಾರಿಕೆಗೆ ಈಗ ಲಭ್ಯವಿರುವ ಶೈತ್ಯಾಗಾರಗಳನ್ನು ದುಪ್ಪಟ್ಟುಗೊಳಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು.
ಇದನ್ನೂ ಓದಿ : Karnataka Budget: ದಾಖಲೆಯ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: ಅಬಕಾರಿ ಸುಂಕ ಹೆಚ್ಚಳ