ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಬಿ.ವೈ. ವಿಜಯೇಂದ್ರ ಅವರು ಇಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಪದ್ಮನಾಭನಗರದ ಅವರ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, ಮಾಜಿ ಪ್ರಧಾನಮಂತ್ರಿ ದೇವೇಗೌಡರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿ, ಅವರ ಆಶೀರ್ವಾದ ಪಡೆದಿದ್ದೇನೆ ಎಂದರು.
ಇಷ್ಟು ದೊಡ್ಡ ರಾಷ್ಟ್ರೀಯ ಪಕ್ಷದಲ್ಲಿ ಇಷ್ಟು ಚಿಕ್ಕ ವಯಸ್ಸಿಗೇ ದೊಡ್ಡ ಜವಾಬ್ದಾರಿ ಕೊಟ್ಟ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ತಂದೆಯವರಾದ ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆಗೆ ಶಕ್ತಿ ತುಂಬಿದ ಮಾದರಿಯಲ್ಲಿ ನೀನು ಕೂಡ ಯಶಸ್ವಿ ಆಗುವಂತೆ ದೇವೇಗೌಡರು ಹರಸಿದರು ಎಂದು ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ, ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಹೆಚ್ಚು ಸ್ಥಾನವನ್ನು ಗೆಲ್ಲಬೇಕು. ಇದು ದೇಶದ ಭವಿಷ್ಯ ನಿರ್ಮಾಣದ ಚುನಾವಣೆ. ಯುವಕರು ಹೆಚ್ಚು ಹೆಚ್ಚಾಗಿ ಮುಂದೆ ಬರಬೇಕೆಂದು ಆಶೀರ್ವಾದ ಮಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ದೇವೇಗೌಡರ ಭೇಟಿಯಿಂದ ತುಂಬಾ ಸಂತೋಷವಾಗಿದೆ. ರಾಜ್ಯದ ಮತ್ತು ದೇಶದ ಆಗುಹೋಗುಗಳ ಬಗ್ಗೆ ಅವರ ಚಿಂತನೆಗಳು ಪ್ರೇರಕ ಮತ್ತು ದೊಡ್ಡ ಶಕ್ತಿಯನ್ನು ಕೊಡುತ್ತದೆ ಎಂದ ಅವರು, ರಾಜ್ಯದಲ್ಲಿ ಹೋರಾಟ ಎಂಬ ಮಾತು ಬಂದಾಗ ದೇವೇಗೌಡರು ಮತ್ತು ಯಡಿಯೂರಪ್ಪ ಅವರು ನೆನಪಾಗುತ್ತಾರೆ. ಅದನ್ನು ಕೂಡ ಅವರು ನೆನಪು ಮಾಡಿಕೊಂಡರು ಎಂದು ತಿಳಿಸಿದರು. ಪಕ್ಷದ ಹಿತದೃಷ್ಟಿಯಿಂದ ದೇವೇಗೌಡರು ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಸಲಹೆಗಳನ್ನು ತೆಗೆದುಕೊಂಡು, ಒಗ್ಗಟ್ಟಾಗಿ ನುಗ್ಗಿ ಕೆಲಸ ಮಾಡುತ್ತೇವೆ ಎಂದರು.
ವಿಜಯೇಂದ್ರ ಡೈನಾಮಿಕ್ ಲೀಡರ್: ಪ್ರಜ್ವಲ್ ರೇವಣ್ಣ
ಇದೇ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ವಿಜಯೇಂದ್ರ ಅವರು ಅಧಿಕೃತವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಘೋಷಣೆಯಾಗಿದ್ದು, ಇಡೀ ರಾಜ್ಯದ ಯುವಕರಲ್ಲಿ ಸಂಚಲನ ಮೂಡಿಸಿದೆ. ಮುಂದಿನ ಚುನಾವಣೆಗೆ ಒಬ್ಬ ಡೈನಾಮಿಕ್ ಲೀಡರ್ ಬೇಕು ಎಂಬ ಭಾವನೆ ಕಾಡುತಿತ್ತು. ವಿಜಯೇಂದ್ರ ನೇಮಕದಿಂದ ಆ ಭಾವನೆಯಿಂದ ನಾವು ಹೊರಗೆ ಬಂದಿದ್ದೇವೆ. ಹೀಗಾಗಿ ಅವರು ಇವತ್ತು ದೇವೇಗೌಡರನ್ನು ಭೇಟಿ ಮಾಡಿ ಸಣ್ಣಪುಟ್ಟ ಸಲಹೆ ಹಂಚಿಕೊಂಡಿದ್ದಾರೆ ಎಂದು ಹೇಳಿದರು.
ಮುಂಬರುವ ಚುನಾವಣೆಗಳಲ್ಲಿ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಪ್ರಮಾಣ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರ ಜೊತೆ ಸೇರಿಕೊಂಡು, ದೊಡ್ಡ ಮಟ್ಟದ ಹೋರಾಟ ಮಾಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯುವ ಕೆಲಸ ಮಾಡುತ್ತೇವೆ ಎಂದರು.
ಮತ್ತೊಮ್ಮೆ ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೆ ನಾವು ಬೆಂಬಲ ಕೊಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 22 ರಿಂದ 24 ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ಕೃಷ್ಣಪ್ಪ, ಸಿ.ಕೆ. ರಾಮಮೂರ್ತಿ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಜೆಡಿಎಸ್ ಮುಖಂಡ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ನ.15 ರಂದು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕಾರ: ಬಿ.ವೈ ವಿಜಯೇಂದ್ರ