ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಸಂಸದರು ಈಗ ಕೇಂದ್ರ ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಸುತ್ತಿದ್ದಾರೆ. ಬಿಜೆಪಿಯಿಂದ ಗೆದ್ದಿರುವ 25 ಲೋಕಸಭಾ ಸದಸ್ಯರ ಪೈಕಿ ಸುಮಾರು 18 ಸಂಸದರು ಪ್ರಧಾನಿ ಮೋದಿ ಸಂಪುಟ ಸೇರಲು ತಮ್ಮದೇ ಆದ ನೆಟ್ವರ್ಕ್ಗಳ ಮೂಲಕ ಕಸರತ್ತು ನಡೆಸಿದ್ದಾರೆ.
ಶೋಭಾ ಕರಂದ್ಲಾಜೆ, ಡಿ.ವಿ ಸದಾನಂದಗೌಡ, ಅನಂತಕುಮಾರ ಹೆಗಡೆ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಪಿ.ಸಿ.ಗದ್ದಿಗೌಡರ್, ಶಿವಕುಮಾರ್ ಉದಾಸಿ, ವಿ.ಶ್ರೀನಿವಾಸ ಪ್ರಸಾದ್ ಲಾಬಿ ನಡೆಸುತ್ತಿರುವವರಲ್ಲಿ ಪ್ರಮುಖರು. ರಾಜ್ಯದಲ್ಲಿ ಬಿಜೆಪಿ ಸಂಸದರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ ಕೇಂದ್ರದಲ್ಲಿ ಸಚಿವ ಸ್ಥಾನ ಕೊಡಿಸಲು ಒತ್ತಡ ಹಾಕುತ್ತಿದ್ದಾರೆ. ಕೇಂದ್ರದಲ್ಲಿ ತಮಗೆ ಸಂಪರ್ಕವಿರುವ ಬಿಜೆಪಿ ವರಿಷ್ಠರ ಜತೆ ಸಹ ಮಾತುಕತೆ ನಡೆಸಿ ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇನ್ನು ಕೆಲವರು ಸಂಘ ಪರಿವಾರದ ಮೂಲಕವೂ ಲಾಬಿಯಲ್ಲಿ ತೊಡಗಿದ್ದಾರೆಂದು ಹೇಳಲಾಗುತ್ತಿದೆ.
ಲಿಂಗಾಯತ ಸಮುದಾಯದಿಂದ ಬೆಳಗಾವಿ ಸಂಸದ ಸುರೇಶ ಅಂಗಡಿ, ಹಾವೇರಿಯ ಶಿವಕುಮಾರ ಉದಾಸಿ, ದಾವಣಗೆರೆಯ ಜಿ.ಎಂ.ಸಿದರದೇಶ್ವರ್, ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ, ತುಮಕೂರಿನ ಜಿ.ಎಸ್.ಬಸವರಾಜು ಪ್ರಯತ್ನ ನಡೆಸುತ್ತಿದ್ದಾರೆ. ಬ್ರಾಹ್ಮಣ ಸಮುದಾಯದಿಂದ ಧಾರವಾಡ ಸಂಸದ ಪ್ರಹ್ಲಾದ್ ಜೋಷಿ, ಉತ್ತರ ಕನ್ನಡದ ಅನಂತಕುಮಾರ್ ಹೆಗಡೆ. ಒಕ್ಕಲಿಗರ ಕೋಟಾದಿಂದ ಡಿ.ವಿ.ಸದಾನಂದಗೌಡ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಸಚಿವ ಸ್ಥಾನದ ಮೇಲೆ ಆಸೆ ಇಟ್ಟುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಆದರೆ ಎಸ್ಸಿ- ಎಸ್ಟಿ, ಹಿಂದುಳಿದ ವರ್ಗಗಳಿಂದ ಡಾ. ಉಮೇಶ್ ಜಾಧವ್, ವಿ.ಶ್ರೀನಿವಾಸ ಪ್ರಸಾದ್, ನಳೀನ್ ಕುಮಾರ್ ಕಟೀಲು, ರಮೇಶ ಜಿಗಜಿಣಗಿ, ಪಿ.ಸಿ.ಮೋಹನ್ ಸಚಿವ ಪದವಿಗೆ ಹಿರಿಯ ನಾಯಕರ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸೋಲಿಲ್ಲದ ಸರದಾರನ್ನು ಸೋಲಿಸಿದ ಕಿರ್ತಿ ಹೊತ್ತುಕೊಂಡಿರುವ ಡಾ. ಉಮೇಶ್ ಜಾಧವ್ ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿ ಬಾವುಟ ನೆಟ್ಟಿದ್ದಕ್ಕೆ ಸಚಿವ ಸ್ಥಾನ ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಅನಂತಕುಮಾರ ಹೆಗಡೆ ರಾಜ್ಯದಲ್ಲಿಯೇ ಅತಿ ಹೆಚ್ಚು (4 ಲಕ್ಷ) ಮತಗಳ ಅಂತರದಿಂದ ಗೆದ್ದಿರುವುದನ್ನು ಬಂಡವಾಳ ಮಾಡಿಕೊಂಡು ಮಂತ್ರಿಗಿರಿಗೆ ಮನವಿ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಪ್ರಧಾನಿ ಮೋದಿ ಅಳೆದು ತೂಗಿ ಪ್ರಾದೇಶಿಕ, ಜಾತಿ, ಹಿರಿತನ ಆಧರಿಸಿ ಮಂತ್ರಿ ಸ್ಥಾನ ನೀಡುವ ಸಾದ್ಯತೆ ಇದೆ. ರಾಜ್ಯದಲ್ಲಿ ಅತಿ ಹೆಚ್ಚು ಸಂಸದರು ಈ ಬಾರಿ ಆಯ್ಕೆಯಾಗಿ ಪಕ್ಷವನ್ನು ಬೆಂಬಲಿಸಿದ್ದರಿಂದ ನಾಲ್ಕರಿಂದ ಆರು ಸಚಿವ ಸ್ಥಾನಗಳನ್ನು ರಾಜ್ಯಕ್ಕೆ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.