ಬೆಂಗಳೂರು : ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. ಸಭೆಯ ನೇತೃತ್ವವನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಲೋಕಸಭಾ ಚುನಾವಣಾ ಉಸ್ತುವಾರಿ ವಿನೋದ್ ತಾವ್ಡೆ ವಹಿಸಿಕೊಂಡಿದ್ದರು. ಬೆಂಗಳೂರಿನ 3 ಲೋಕಸಭೆ ಕ್ಷೇತ್ರಗಳ ಸಿದ್ಧತೆ, ಪಕ್ಷ ಸಂಘಟನೆ ಮತ್ತು ಮೋದಿ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಲಹೆ, ಸೂಚನೆಗಳನ್ನು ನೀಡಲಾಯಿತು.
ಬಳಿಕ ಮಾತನಾಡಿದ ವಿನೋದ್ ತಾವ್ಡೆ, "ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕೇಂದ್ರ ನಾಯಕರು, ರಾಜ್ಯ ನಾಯಕರು ಪಂಚಾಯತ್ ಮಟ್ಟದಿಂದ ಪಕ್ಷ ಕಟ್ಟುತ್ತಿದ್ದೇವೆ. ಬೆಂಗಳೂರಿನ ಮೂರು ಕ್ಷೇತ್ರದ ಬಿಜೆಪಿ ಮುಖಂಡರಿಗೆ ಈಗಾಗಲೇ ಸಿದ್ಧತೆಗಳ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಲಾಗಿದೆ" ಎಂದರು.
"ವಿಧಾನಸಭೆ ಚುನಾವಣೆಯಲ್ಲಿನ ನ್ಯೂನತೆಗಳನ್ನು ಸರಿದೂಗಿಸಿ 2019ರಲ್ಲಿನ ಲೋಕಸಭೆ ಚುನಾವಣೆಯಲ್ಲಿನ ಫಲಿತಾಂಶವನ್ನು ಮರುಕಳಿಸುವಂತೆ ಮಾಡಲು ಮುಂದಿನ 10 ತಿಂಗಳು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಪಕ್ಷದ ಕಾರ್ಯಕರ್ತರಿಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಲಾಯಿತು. ಮೋದಿ ಸರ್ಕಾರದ ಸಾಧನೆಗಳನ್ನು ಜನಮನ ಮುಟ್ಟಿಸುವಂತೆ ತಿಳಿಸಲಾಗಿದೆ" ಎಂದು ಅವರು ತಿಳಿಸಿದರು.
ಬಿಜೆಪಿಯಲ್ಲಿ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕಿಯಿಸಲು ವಿನೋದ್ ತಾವ್ಡೆ ನಿರಾಕರಿಸಿದರು. ಈ ಹಿಂದೆ ವಿನೋದ್ ತಾವ್ಡೆ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಸಂಬಂಧ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದರು. ಇದೀಗ ಆ ಕುರಿತು ಮಾತನಾಡಲು ಹಿಂದೇಟು ಹಾಕಿದರು.
ಇದನ್ನೂ ಓದಿ : ಪ್ರತಿಪಕ್ಷಗಳ ಮೈತ್ರಿಯ ಹೆಸರು ಕಾನೂನು ಬಾಹಿರ ಅಲ್ಲ: ಇಂಡಿಯಾ ರಚನೆಯಿಂದ ಬಿಜೆಪಿ ಬೆದರಿದೆ -ಕಾಂಗ್ರೆಸ್ ಟೀಕೆ
'ಇಂಡಿಯಾ'- ಬಿಜೆಪಿಗೆ ಕಾಂಗ್ರೆಸ್ ತರಾಟೆ : ಇನ್ನೊಂದೆಡೆ, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನೂತನವಾಗಿ ರಚನೆಗೊಂಡ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. 'ಇಂಡಿಯಾ' ಕೂಟ ಯಾವುದೇ ಕಾನೂನಿನ ಅಂಶಗಳನ್ನು ಮೀರಿಲ್ಲ. ಪ್ರತಿಪಕ್ಷಗಳ ಒಗ್ಗಟ್ಟಿನಿಂದ ಬಿಜೆಪಿ ಜರ್ಜರಿತಗೊಂಡಿದೆ. 'ಇಂಡಿಯಾ' ವಿಸ್ತೃತ ಹೆಸರಿನ ಸಂಕ್ಷಿಪ್ತ ರೂಪ, ಪದವಲ್ಲ ಎಂದು ಹೇಳಿದೆ.
ಲೋಕಸಭೆ ಚುನಾವಣೆಯ ಕಾರ್ಯತಂತ್ರಕ್ಕಾಗಿ ಜುಲೈ 18ರಂದು ಬೆಂಗಳೂರಿನಲ್ಲಿ ಸಭೆ ಸೇರಿದ್ದ 26 ಪಕ್ಷಗಳು ಮೈತ್ರಿಕೂಟವನ್ನು 'ಇಂಡಿಯಾ' ಎಂದು ನಾಮಕರಣ ಮಾಡಿಕೊಂಡಿವೆ. ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್‌ನ ಸಂಕ್ಷಿಪ್ತ ರೂಪವೇ 'ಇಂಡಿಯಾ' ಎಂದಾಗಿದೆ.
ಇದನ್ನೂ ಓದಿ : ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿರುವ ಎನ್ಸಿಪಿ ನಾಯಕ ಶರದ್ ಪವಾರ್ : ಇಂಡಿಯಾ ಒಕ್ಕೂಟ ಅಸಮಾಧಾನ
ಮೈತ್ರಿ ಹೆಸರಿಗೆ ಆಕ್ಷೇಪಣೆ: ಬಾಂಬೆ ಹೈಕೋರ್ಟ್ ವಕೀಲ ಹಾಗೂ ಬಿಜೆಪಿ ಮಹಾರಾಷ್ಟ್ರ ಸಾಮಾಜಿಕ ಮಾಧ್ಯಮ ಕಾನೂನು ಮತ್ತು ಸಲಹಾ ವಿಭಾಗದ ಮುಖ್ಯಸ್ಥ ಅಶುತೋಷ್ ಜೆ ದುಬೆ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮೈತ್ರಿ ಹೆಸರಿಗೆ ತನ್ನ ಆಕ್ಷೇಪಣೆ ದಾಖಲಿಸಿದ್ದಾರೆ.