ಬೆಂಗಳೂರು: "ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ಸಂದರ್ಭದಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಇದನ್ನೆಲ್ಲಾ ನೋಡಿ ಸಿಎಂ, ಡಿಸಿಎಂ, ಸಚಿವರೆಲ್ಲಾ ಯಾವಾಗ ರಾಜ್ಯದಿಂದ ತೊಲಗಲಿದ್ದಾರೆ ಎಂದು ಜನ ಬಯಸುತ್ತಿದ್ದಾರೆ. ಈ ಹಣ ಪತ್ತೆ ಜವಾಬ್ದಾರಿಯನ್ನು ಸಿಎಂ ಹಾಗು ಪೂರ್ಣ ಸಚಿವ ಸಂಪುಟ ವಹಿಸಿಕೊಳ್ಳಬೇಕು. ಇಡೀ ಮಂತ್ರಿ ಮಂಡಲ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು" ಎಂದು ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಮಂಗಳವಾರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತು. ಎಟಿಎಂ ಸರ್ಕಾರ ಎಂದು ವಾಗ್ದಾಳಿ ನಡೆಸಿತು. ಪ್ರತಿಭಟನೆಯಲ್ಲಿ ಮೂರು ಎಟಿಎಂ ಮಾದರಿ ಯಂತ್ರಗಳ ಪ್ರದರ್ಶನ ಮಾಡಲಾಯಿತು. ಸರ್ಕಾರ ಎಐಸಿಸಿಗೆ ಎಟಿಎಂ ಆಗಿದೆ ಎಂದು ಬಿಂಬಿಸಲು ಎಟಿಎಂ ಪ್ರದರ್ಶಿಸಿ ಅದರಿಂದ ಹಣ ಹೊರತೆಗೆಯುವ ಮೂಲಕ ಸರ್ಕಾರವನ್ನು ಬಿಜೆಪಿ ಟೀಕಿಸಿತು.
ಮಾಜಿ ಸಚಿವ ಅಶ್ವತ್ಥನಾರಾಯಣ್ ಮಾತನಾಡಿ, "ಕಾಂಗ್ರೆಸ್ಗೆ ಜನ ಆಶೀರ್ವಾದ ಮಾಡಿದ್ದಾರೆ. ಆದರೆ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇಡೀ ರಾಜ್ಯವನ್ನು ಲೂಟಿ ಮಾಡಲು ಅವಕಾಶ ಕೊಟ್ಟಿದ್ದಾರೆ, ನಾವು ಲೂಟಿ ಮಾಡುತ್ತೇವೆ ಎನ್ನುವ ನಿಲುವು ತಳೆದಿದ್ದಾರೆ. ರಾಜ್ಯವನ್ನು ಗುತ್ತಿಗೆದಾರರು, ಬಿಲ್ಡರ್ಗಳಿಂದ ಹಣ ಪಡೆಯುತ್ತಿದ್ದಾರೆ. ಈಗ ಐಟಿ ದಾಳಿಯಲ್ಲಿ ಹಣ ಪತ್ತೆಯಾಗಿದೆ. ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಗುತ್ತಿಗೆದಾರರೆಲ್ಲಾ ಬಿಜೆಪಿಯವರು ಎನ್ನುತ್ತಾರೆ. ಹಾಗಾದರೆ ತನಿಖೆಗೆ ವಹಿಸಿ, ಸಿಬಿಐಗೆ ನೀಡಿ" ಎಂದರು.
"ಡಿಸಿಎಂಗೆ ಬ್ರ್ಯಾಂಡ್ ಮಾತ್ರ ಗೊತ್ತಿರೋದು. ಈಗಾಗಲೇ ಹೋಗಿ ಬಂದಿದ್ದಾರೆ, ಇನ್ನು ಎಷ್ಟು ಬಾರಿ ಹೋಗಿ ಬಂದರೇನು" ಎಂದು ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿ ಬಂದ ವಿಚಾರ ಪ್ರಸ್ತಾಪಿಸಿ ವ್ಯಂಗ್ಯವಾಡಿದರು. "ದರಿದ್ರದ ಸಂಕೇತ ಕಾಂಗ್ರೆಸ್ ಸರ್ಕಾರ. ಇವರು ಬರುತ್ತಿದ್ದಂತೆ ಮಳೆ ಇಲ್ಲ, ವಿದ್ಯುತ್ ಇಲ್ಲ, ಲೂಟಿ ಮಾಡುವ ಸರ್ಕಾರ ಕಾಂಗ್ರೆಸ್ದು. ಹೈಕಮಾಂಡ್ ಒಂದು ಪೈಸೆ ಕೇಳಲ್ಲ ಅನ್ನುತ್ತಾರೆ ಆದರೆ ಪೈಸೆ ಕೇಳೋಕೆ ಹೈಕಮಾಂಡ್ ಭಿಕ್ಷುಕರಾ? ಅವರು ಕೋಟಿ ಕೋಟಿ ಕೇಳುತ್ತಾರೆ" ಎಂದರು.
"ಸುರ್ಜೇವಾಲ ಎಟಿಎಂ ಓನರ್, ವೇಣುಗೋಪಾಲ್ ಕಲೆಕ್ಷನ್ ಏಜೆಂಟ್": "ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೇವಾಲ ರಾಜ್ಯ ಕಾಂಗ್ರೆಸ್ನ ಎಟಿಎಂ ಓನರ್ ಆಗಿದ್ದರೆ, ಕೆ.ಸಿ.ವೇಣುಗೋಪಾಲ್ ಕಲೆಕ್ಷನ್ ಏಜೆಂಟ್" ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
"ಈಗ ಕಲೆಕ್ಷನ್ ಏಜೆಂಟ್ ವೇಣುಗೋಪಾಲ ಬಂದು ಕಲೆಕ್ಷನ್ ಹೇಗೆ ಮಾಡಬೇಕು ಎಂದು ತೋರಿಸಿದ್ದಾರೆ. ಕೆಲ ದಿನದ ಹಿಂದೆ ದೆಹಲಿಗೆ ರಾಜ್ಯದ ನಾಯಕರನ್ನು ಕರೆಸಿಕೊಂಡು ಯಾವ ಯಾವ ಸಚಿವರು ಎಷ್ಟು ಹಣ ಕೊಡಬೇಕು ಎಂದು ಕಾಂಗ್ರೆಸ್ ವರಿಷ್ಠರ ಸಮ್ಮುಖದಲ್ಲಿ ಫಿಕ್ಸ್ ಮಾಡಲಾಯಿತು. ಅದರಂತೆ ಈಗ ಹಣ ಸಂಗ್ರಹದಲ್ಲಿ ತೊಡಗಿದ್ದಾರೆ" ಎಂದು ಟೀಕಿಸಿದರು.
"ಸಿದ್ದರಾಮಯ್ಯ ಜೆಡಿಎಸ್ನಲ್ಲಿದ್ದಾಗಲೇ ಸುಳ್ಳು ಹೇಳುವುದನ್ನು ಕಲಿತಿದ್ದರೋ, ಕಾಂಗ್ರೆಸ್ಗೆ ಬಂದ ನಂತರ ಸುಳ್ಳು ಹೇಳುವುದನ್ನು ಕಲಿತಿದ್ದಾರೋ ಗೊತ್ತಿಲ್ಲ. ಆದರೆ ಹಸಿ ಸುಳ್ಳಿನ ಸರದಾರ ವೀರಪ್ಪ ಮೊಯ್ಲಿಯನ್ನೂ ಸಿದ್ದರಾಮಯ್ಯ ಮೀರಿಸಿದ್ದಾರೆ" ಎಂದು ವ್ಯಂಗ್ಯ ಮಾಡಿದರು.
"ಆದಾಯ ತೆರಿಗೆ ದಾಳಿ ಬಿಜೆಪಿ ಮಾಡಿಸುವುದಿಲ್ಲ. ದೂರುಗಳು ಬರುವುದರ ಆಧಾರದಲ್ಲಿ ಮಾಹಿತಿ ಸಂಗ್ರಹಿಸಿ ದಾಳಿ ನಡೆಸುತ್ತಾರೆ. ಕಾಂಗ್ರೆಸಿಗರ ಆಡಳಿತ ಹೀಗೆಯೇ ಮುಂದುವರೆದರೆ ಪಾಕಿಸ್ತಾನದ ಆರ್ಥಿಕತೆ ಕರ್ನಾಟಕಕ್ಕೆ ಬರಲಿದೆ. ಹಾಗಾಗಿ ಆದಷ್ಟು ಬೇಗ ಈ ಸರ್ಕಾರವನ್ನು ಮನೆಗೆ ಕಳುಹಿಸಬೇಕು" ಎಂದರು.
ಇದನ್ನೂ ಓದಿ: ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ಪೊಲೀಸ್ ವಶಕ್ಕೆ; ನಾಳೆ ತಮಿಳುನಾಡು ಸಿಎಂ ಭೇಟಿ