ಬೆಂಗಳೂರು: ತಂತ್ರಜ್ಞಾನ ಮೇಳ-2020 ಕಾರ್ಯಕ್ರಮದಲ್ಲಿ ಇಂದು ಬಯೋ ಎಕಾನಮಿ ವರದಿಯನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ್ ವರದಿ ಬಗ್ಗೆ ಮಾಹಿತಿ ನೀಡಿದರು. ಜೈವಿಕ ತಂತ್ರಜ್ಞಾನದಲ್ಲಿ ಬಹಳ ದೊಡ್ಡಮಟ್ಟದ ಉದ್ಯೋಗ ಕಾಣಬಹುದು. ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕಂಡುಕೊಂಡು ಇಡೀ ಪ್ರಪಂಚಕ್ಕೆ ಮಾದರಿಯಾಗಬೇಕು. ಆಗ ಉದ್ಯೋಗವೂ ಸೃಷ್ಟಿಯಾಗುತ್ತದೆ. ಜೊತೆಗೆ ಆರ್ಥಿಕತೆಯೂ ಅಭಿವೃದ್ಧಿಯಾಗುತ್ತದೆ ಎಂದರು.
ಈ ಕ್ಷೇತ್ರದಲ್ಲಿ ನಾವು ಹೆಚ್ಚಿನ ಸಾಧನೆ ಮಾಡಬೇಕಾಗಿದೆ. ಟ್ಯಾಬ್ಲೆಟ್ಸ್ನಿಂದ ಹಿಡಿದು, ವ್ಯವಸಾಯ, ಹಸುಗಳ ವಿಚಾರದಲ್ಲೂ ಇದು ತುಂಬಾ ಉಪಯೋಗವಾಗಿದೆ ಎಂದು ತಿಳಿಸಿದರು. ಮುಂದುವರೆದ ರಾಷ್ಟ್ರಗಳು ಅದೆಷ್ಟೋ ಅಭಿವೃದ್ಧಿ ಕಂಡಿವೆ ಅಂದರೆ ಅದಕ್ಕೆ ಕಾರಣ ಜೈವಿಕ ತಂತ್ರಜ್ಞಾನ. ಕೃಷಿ ಕ್ಷೇತ್ರದಿಂದ ದೇಶಕ್ಕೆ ಎಷ್ಟು ಆದಾಯ ಇದೆಯೋ ಅಷ್ಟರಮಟ್ಟಿಗೆ ಜೈವಿಕ ತಂತ್ರಜ್ಞಾನ ಬೆಳೆಯುತ್ತಿದೆ. ಇಂತಹ ತಂತ್ರಜ್ಞಾನಕ್ಕೆ ಹೆಚ್ಚು ಹೆಚ್ಚು ಆದ್ಯತೆ ನೀಡಬೇಕು ಎಂದರು.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಮಾತನಾಡಿ, ಈ ಕೋವಿಡ್ ಸಂದರ್ಭದಲ್ಲಿ ಲಸಿಕೆ ಕಂಡುಹಿಡಿಯಲು ಕರ್ನಾಟಕಕ್ಕೆ ಬಹಳ ದೊಡ್ಡ ಅವಕಾಶ ಇದೆ. ಇದಕ್ಕೆ ಸರ್ಕಾರ ಒತ್ತು ಕೊಟ್ಟು ಬಳಸಿಕೊಳ್ಳಬೇಕು. ಡೆಂಗ್ಯೂ, ಚಿಕುನ್ ಗುನ್ಯಾ ವೈರಸ್ಗಳ ಪರೀಕ್ಷೆಯಲ್ಲಿ ಕರ್ನಾಟಕ ಮುಂದಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಇನ್ನೂ ಹೆಚ್ಚಿನ ಒತ್ತು ಕೊಡಬೇಕು ಎಂದರು. ಸಾಂಕ್ರಾಮಿಕವಲ್ಲದ ಕಾಯಿಲೆಗಳ ವಿಚಾರವಾಗಿ ಹೆಚ್ಚು ಒತ್ತು ಕೊಟ್ಟಿದ್ದೇವೆ. ಮುಂಬರುವ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳ ವಿಚಾರದಲ್ಲಿ ಹೆಚ್ಚಿನ ಒತ್ತು ಕೊಡಬೇಕು ಎಂದರು.