ಬೆಂಗಳೂರು: ಸಾರ್ವಜನಿಕರಿಂದ ಅನಿಯಂತ್ರಿತವಾಗಿ ಠೇವಣಿ ಸಂಗ್ರಹಕ್ಕೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಗೆ ನಿಯಮ ರೂಪಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.
ಸಂಪುಟ ಸಭೆಯಲ್ಲಿ ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ನಿಯಮಗಳು - 2020ಕ್ಕೆ ಅನುಮೋದನೆ ನೀಡಲಾಗಿದೆ. ರಾಜ್ಯದಲ್ಲಿ ಐಎಂಎ ಸೇರಿದಂತೆ ಹಲವು ಖಾಸಗಿ ಹಣಕಾಸು ಸಂಸ್ಥೆಗಳು ಠೇವಣಿಯನ್ನು ಸಾರ್ವಜನಿಕರಿಂದ ಸಂಗ್ರಹಿಸಿ ವಂಚನೆ ಮಾಡುವ ಪ್ರಕರಣಗಳಿಗೆ ಕಡಿವಾಣ ಹಾಕಲು ಈ ಕಾಯ್ದೆ ಸಹಕಾರಿಯಾಗಲಿದೆ. ಆ ಹಿನ್ನೆಲೆ ನಿಯಮಗಳನ್ನು ರೂಪಿಸಲು ಸಂಪುಟ ಅನುಮೋದನೆ ನೀಡಿದೆ.
ಸಂಪುಟ ಸಭೆ ತೀರ್ಮಾನಗಳೇನು?
- ಬಹುಗ್ರಾಮ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಮತ್ತು ಇತರ 127 ಜನವಸತಿಗಳಿಗೆ ಬಹುಗ್ರಾಮ ಕುಡಿವ ನೀರು ಯೋಜನೆಯ ಪರಿಷ್ಕೃತ ಮೊತ್ತ ರೂ. 91.50 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ
- 3 Waste French Company ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಚಿಕ್ಕನಾಗಮಂಗಲದಲ್ಲಿ 500 ಮೆಟ್ರಿಕ್ ಟನ್ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು ಸ್ಥಾಪಿಸಲು ಅನುಮೋದನೆ ನೀಡಿರುವ 8.03.2018ರ ಆದೇಶ ಹಿಂಪಡೆಯಲು ತೀರ್ಮಾನ
- ಭಾಗ್ಯಲಕ್ಷ್ಮಿ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮದ ಬದಲು ಅಂಚೆ ಇಲಾಖೆ ಮೂಲಕ “ಸುಕನ್ಯಾ ಸಮೃದ್ಧಿ ಖಾತೆ ಯೋಜನೆ"ಯಂತೆ ಮರು ವಿನ್ಯಾಸಗೊಳಿಸಿ 2020-21ನೇ ಸಾಲಿನಿಂದ ಮುಂದುವರೆಸಲು ಆಡಳಿತಾತ್ಮಕ ಮಂಜೂರಾತಿ
- ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಯ ರೂ.109.81 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
- ಬಾಗಲಕೋಟೆ ಜಿಲ್ಲೆ, ಮುಧೋಳ ತಾಲೂಕು, ತಿಮ್ಮಾಪುರದ ರನ್ನನಗರದಲ್ಲಿನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತವನ್ನು 40 ವರ್ಷಗಳ ಅವಧಿಗೆ ಎಲ್ಆರ್ಓಟಿ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಅನುಮತಿ
- ಕೇಂದ್ರೀಯ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (CIPET)ಯ ಅತ್ಯಾಧುನಿಕ ಪಾಲಿಮರ್ ವಿನ್ಯಾಸ ಮತ್ತು ಅಭಿವೃದ್ಧಿ ಸಂಶೋಧನಾ ಪ್ರಯೋಗಾಲಯ (APDDRL)ನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಹೆಚ್ಚುವರಿ ಕಟ್ಟಡ ನಿರ್ಮಾಣ ವೆಚ್ಚ ರೂ.19.04 ಕೋಟಿಗಳ ಪೈಕಿ, ರೂ.9.52 ಕೋಟಿಗಳ (ಶೇ.50 ರಷ್ಟು) ರಾಜ್ಯ ಸರ್ಕಾರದಿಂದ ಅನುಮೋದನೆ
- “ಪಶ್ಚಿಮ ವಾಹಿನಿ” ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಬಿಳಿಯೂರು ಎಂಬಲ್ಲಿ ಕಿಂಡಿ ಅಣೆಕಟ್ಟು ರಚನೆ ಕಾಮಗಾರಿಯ ರೂ.46.70 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ
- ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇಯಕ-2020ಕ್ಕೆ ಅನುಮೋದನೆ
- ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯಡಿಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಿಗೆ ಹವಾಮಾನ ಮುನ್ಸೂಚನೆ ಮತ್ತು ಪ್ರಸರಣೆ ಪದ್ಧತಿಯನ್ನು (Early Warning Dissemination System) ಅನುಷ್ಠಾನಗೊಳಿಸಲು 26.92 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ