ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಡಿಸೆಂಬರ್ 5ಕ್ಕೆ ರಾಜ್ಯ ಬಂದ್ಗೆ ಕರೆ ನೀಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡಿರುವ ಆಯುಕ್ತ ಮಂಜುನಾಥ್ ಪ್ರಸಾದ್, ಬಂದ್ ವೇಳೆ ಬಿಬಿಎಂಪಿ ಮಾರುಕಟ್ಟೆಗಳನ್ನು ಬಲವಂತವಾಗಿ ಮುಚ್ಚಿಸಿದ್ರೆ, ಕಾನೂನು ಪ್ರಕಾರ ಕ್ರಮ ಕೈಗೊಂಡು ದೂರು ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮಲ್ಲಿ ಮಾರುಕಟ್ಟೆಗಳನ್ನು ಮುಚ್ಚಿಸಲು ಹೋಗಬಾರದು. ಬಲವಂತವಾಗಿ ವ್ಯಾಪಾರಿಗಳನ್ನು ಬಂದ್ಗೆ ಬೆಂಬಲಿಸುವಂತೆ ಒತ್ತಾಯಿಸಿದರೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಹೈಕೋರ್ಟ್, ಸುಪ್ರೀಂಕೋರ್ಟ್ ನಿರ್ದೇಶನವೂ ಇದೆ. ಹೀಗಾಗಿ ಒತ್ತಾಯ ಪೂರ್ವಕವಾಗಿ ಮಾರುಕಟ್ಟೆಗಳನ್ನು ಬಂದ್ ಮಾಡಿಸಿ, ಜನರಿಗೆ ವ್ಯಾಪಾರಿಗಳಿಗೆ ತೊಂದರೆ ನೀಡಬಾರದು. ಒಂದು ವೇಳೆ ತೊಂದರೆ ನೀಡಿದ್ರೆ, ತಪ್ಪಿತಸ್ಥರ ವಿರುದ್ಧ ಸ್ಥಳೀಯ ಅಧಿಕಾರಿಗಳೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ ಎಂದರು.
ಹೀಗಾಗಿ ಕೆ.ಆರ್. ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ, ಮಡಿವಾಳ ಸೇರಿದಂತೆ ಪ್ರಮುಖ ಬಿಬಿಎಂಪಿ ಮಾರುಕಟ್ಟೆಗಳು ಎಂದಿನಂತೆ ವ್ಯಾಪಾರ ವಹಿವಾಟನ್ನು ಡಿಸೆಂಬರ್ ಐದರಂದು ನಡೆಸಲಿವೆ.