ಬೆಂಗಳೂರು : ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸರ್ಕಾರದ ಉತ್ತರಕ್ಕೆ ಅಸಮಾಧಾನಗೊಂಡು ಕಾಗದವನ್ನು ಕಲಾಪದಲ್ಲೆ ತೂರಿದ್ದಕ್ಕೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ವಿಷಾದ ವ್ಯಕ್ತಪಡಿಸಿದರು.
ಗದ್ದಲದಿಂದಾಗಿ ಮುಂದೂಡಿಕೆಯಾಗಿದ್ದ ಪರಿಷತ್ ಸದನ ಮತ್ತೆ ಸೇರಿದಾಗ ಮಾತನಾಡಿದ ಮರಿತಿಬ್ಬೇಗೌಡ, ಮಂಡ್ಯ ಜಿಲ್ಲೆಗೆ ನೀರಾವರಿ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ನೀರಾವರಿ ವಿಭಾಗದಲ್ಲಿ ನಮ್ಮ ಜಿಲ್ಲೆಗೆ ಅನ್ಯಾಯವಾಗಬಾರದು ಎನ್ನುವ ಕಳಕಳಿಯಿಂದ ಸರ್ಕಾರದ ಮೇಲೆ ಒತ್ತಾಯ ಮಾಡಿದೆ. ಮಂಜೂರಾತಿ ಆಗಿರುವ 85 ಲಕ್ಷದ ಕಾಮಗಾರಿಗೆ ಅನುಮತಿ ಕೊಡಿಸುತ್ತೇನೆ, ಉಳಿದ ಕಾಮಗಾರಿಗಳ ಬಗ್ಗೆ ಹಣಕಾಸು ಲಭ್ಯತೆ ನೋಡಿ ಪರಿಗಣನೆ ಮಾಡುತ್ತೇವೆ. ಈ ಬಗ್ಗೆ ಸಂಬಂಧಪಟ್ಟವರಿಂದ ಉತ್ತರ ಕೊಡಿಸುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದರು. ಹಿಂದಿನ ಸರ್ಕಾರದ ಯೋಜನೆ ಸ್ಥಗಿತವಾಗಿದೆ, ಅದನ್ನು ಆರಂಭಿಸಿ ಎಂದು ಮತ್ತೆ ಮನವಿ ಮಾಡಿದೆ. ಆಗ ನಿಮಗೆ ಕಾಮಗಾರಿ ಅನುಮೋದನೆ ಆಗಬೇಕಾ..? ಬೇಡವಾ ಎಂದು ಗೃಹ ಸಚಿವರು ಹೇಳಿದರು. ಇದು ನನ್ನನ್ನು ಆಕ್ರೋಶಗೊಳ್ಳುವಂತೆ ಮಾಡಿತು. ಯಾರ ಬಗ್ಗೆಯೂ ನನಗೆ ವೈಯಕ್ತಿಕ ರಾಗ ದ್ವೇಷ ಇಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ನೀಡಿದ್ದ ಮಾಹಿತಿಗೆ ಬೇಸರವಿದೆ. ಬೊಮ್ಮಾಯಿ ಅವರು ಸ್ನೇಹ ಪೂರ್ವಕವಾಗಿಯೇ ಕಾಮಗಾರಿಗಳಿಗೆ ಮಂಜೂರಾತಿ ಬೇಕಾ ಬೇಡವಾ ಎಂದಾಗ ನನ್ನ ಮನಸಿಗೆ ನೋವಾಗಿ ಕೈಯಲ್ಲಿದ್ದ ಪತ್ರ ಬಿಸಾಡಿದೆ. ಸದನದ ಬಗ್ಗೆ ಅಪಾರ ಗೌರವ ಇದೆ, ಸದನದ ಗೌರವ ಕಾಪಾಡಿಕೊಂಡೇ ಬಂದಿದ್ದೇನೆ, ಚ್ಯುತಿ ತರುವ ಕೆಲಸ ಮಾಡಿಲ್ಲ. ರಾಜಕೀಯ ಜೀವನದಲ್ಲಿ ಯಾರೊಂದಿಗೂ ದ್ವೇಷ ಇಟ್ಟುಕೊಂಡಿಲ್ಲ, ಬುದ್ದ, ಬಸವ, ಅಂಬೇಡ್ಕರ್ ತತ್ವದಲ್ಲಿ ನಂಬಿಕೆ ಇಟ್ಟವನು ನಾನು. ಇಂದಿನ ನನ್ನ ವರ್ತನೆ ತಪ್ಪು ಎಂದು ಪರಿಭಾವಿಸಿದ್ದೇನೆ, ಸದನದ ಗೌರವ ಕಾಪಾಡುವುದು ನನ್ನ ಆಧ್ಯ ಕರ್ತವ್ಯ, ಪೀಠದ ತೀರ್ಮಾನಕ್ಕೆ ಬದ್ದನಾಗಿದ್ದೇನೆ. ನನ್ನ ಪದ ಬಳಕೆಯಿಂದ ಸಚಿವರು, ಸದನದ ಸದಸ್ಯರಿಗೆ ನೋವುಂಟಾಗಿದ್ದಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಓದಿ : ಪೇಪರ್ ತೂರಿದ ಮರಿತಿಬ್ಬೇಗೌಡ ಅಮಾನತಿಗೆ ಬಿಜೆಪಿ ಪಟ್ಟು: ಪರಿಷತ್ನಲ್ಲಿ ಕೋಲಾಹಲ..!
ಇದಕ್ಕೆ ಪ್ರತಿಯಾಗಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸದಸ್ಯರ ಪ್ರಶ್ನೆಗೆ ವಿವರವಾದ ಉತ್ತರ ಕೊಡಲಾಗಿದೆ. ಯಾವ ಹೊಸ ಟೆಂಡರ್ ಕೊಡಲಾಗಿದೆ ಎಂದಿದ್ದಕ್ಕೆ ಅದರ ವಿವರ ಕೊಡಲಾಗಿದೆ. ಯಾವ ಹಂತದಲ್ಲಿವೆ ಎಂದು ಕೇಳಿದರೆ, ಅದನ್ನೂ ನೀಡುತ್ತೇವೆ. ಆದರೆ ಅವರು ಹಿಂದಿನ ಸರ್ಕಾರದ ಯೋಜನೆಗಳ ಅನುಷ್ಠಾನ ಕುರಿತು ಮಾಹಿತಿ ಕೇಳಿದರು. ಅವು ಬೇರೆ ಬೇರೆ ಹಂತದಲ್ಲಿದೆ, ಅದರ ವಿವರ ವಾರದಲ್ಲಿ ಕೊಡಿಸುತ್ತೇನೆ. ಹಣಕಾಸು ಲಭ್ಯತೆ ಮೇಲೆ ಆದ್ಯತೆ ಮೇಲೆ ಕಾಮಗಾರಿ ತೆಗೆದುಕೊಳ್ಳಲಾಗುತ್ತದೆ ಎಂದಿದ್ದೆ. ಮಂಜೂರಾಗಿ ತಡೆ ಹಿಡಿದಿದ್ದ ಆರೋಪದ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದೆ. ಅವರ ಮಾತಿಗೆ ಪ್ರತಿಕ್ರಿಯೆ ಕೊಟ್ಟಿದ್ದೇನೆ ಹೊರತು, ನನಗೂ ಬೇರೆ ಉದ್ದೇಶವಿಲ್ಲ. ಈಗ ಸದಸ್ಯರು ವಿಷಾದ ವ್ಯಕ್ತಪಡಿಸಿದ್ದಾರೆ, ಇದನ್ನು ಇಲ್ಲಿಗೆ ಬಿಡೋಣ ಎಂದು ಮರಿತಿಬ್ಬೇಗೌಡರನ್ನು ಸದನದಿಂದ ಅಮಾನತು ಮಾಡಬೇಕು ಎನ್ನುವ ವಿಷಯಕ್ಕೆ ತೆರೆ ಎಳೆದರು.