ಬೆಂಗಳೂರು: ಎರಡು ದಿನಗಳ ಕಾಲ ನಡೆದ ರಾಜ್ಯ ಚುನಾವಣಾ ಸಮಿತಿ ಸಭೆ ಬುಧವಾರ ಮುಕ್ತಾಯಗೊಂಡಿದೆ. 224 ಕ್ಷೇತ್ರಗಳ ಸ್ಥಿತಿಗತಿ, ಆಕಾಂಕ್ಷಿಗಳ ವರ್ಚಸ್ಸು, ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ ಮೂರು ಹಂತದ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಐದಾರು ಕ್ಷೇತ್ರದ ಬಗ್ಗೆ ಗೊಂದಲವಿದ್ದು, ಅದನ್ನು ಪರಿಹರಿಸಿಕೊಂಡು ಗುರುವಾರ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಲು ಸಮಿತಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ನಡೆದ ರಾಜ್ಯ ಚುನಾವಣಾ ಸಮಿತಿ ಸಭೆ ಪೂರ್ಣಗೊಂಡಿದೆ. ವಯೋಮಿತಿ ಮೀರಿರುವ, ವರ್ಚಸ್ಸು ಕಳೆದುಕೊಂಡಿರುವ, ವಿವಾದದಲ್ಲಿ ಸಿಲುಕಿರುವ ಶಾಸಕರ ಹೊರತುಪಡಿಸಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಕುರಿತು ರಾಜ್ಯ ಚುನಾವಣಾ ಸಮಿತಿ ಒಲವು ತೋರಿದೆ. ಮೂರು ಹಂತದಲ್ಲಿ ಪಟ್ಟಿಯನ್ನು ಸಿದ್ಧಪಡಿಸಿದ್ದು, ಎ ಬಿ ಮತ್ತು ಸಿ ಎಂದು ವರ್ಗೀಕರಿಸಲಾಗಿದೆ. ಗೆಲ್ಲುವ ಸಾಧ್ಯತೆ ಹೆಚ್ಚಿರುವ ಕ್ಷೇತ್ರಗಳು, ತೀವ್ರ ಜಿದ್ದಾಜಿದ್ದಿ ಇದ್ದು ಪ್ರಯತ್ನ ಪಟ್ಟರೆ ಗೆಲ್ಲುವ ಸಾಧಿಸುವ ಕ್ಷೇತ್ರಗಳು ಹಾಗು ಪ್ರತಿಪಕ್ಷಗಳ ಭದ್ರ ಕೋಟೆಯಾಗಿರುವ ಮತ್ತು ಬಿಜೆಪಿ ದುರ್ಬಲವಾಗಿರುವ ಕ್ಷೇತ್ರಗಳಾಗಿ ವಿಂಗಡಿಸಿ ಪಟ್ಟಿ ಸಿದ್ಧಪಡಿಸಲಾಗಿದೆ.
ಪಕ್ಷದ ಹೈಕಮಾಂಡ್ ಸೂಚನೆಯಂತೆ ಕೆಲ ಕ್ಷೇತ್ರಗಳಿಗೆ ಒಂದೇ ಹೆಸರು, ಮತ್ತೆ ಕೆಲ ಕ್ಷೇತ್ರಗಳಿಗೆ ಎರಡು ಹೆಸರು, ಅತಿ ಹೆಚ್ಚು ಆಕಾಂಕ್ಷೆಗಳು ಇರುವ ಕಡೆ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಕೆಲವೆಡೆ ಹಾಲಿ ಶಾಸಕರು ಇರುವ ಕಡೆಗೂ ಮೂರು ಹೆಸರು ಕಳಿಸಲಾಗುತ್ತಿದ್ದು, ಹೊಸ ಮುಖಕ್ಕೆ ಮಣೆ ಹಾಕಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇನ್ನು 224 ಕ್ಷೇತ್ರಗಳಲ್ಲಿ ವರುಣಾ, ಶಿವಮೊಗ್ಗ ಸೇರಿ 6-8 ಕ್ಷೇತ್ರಗಳ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಇದನ್ನು ಪಕ್ಷದ ರಾಜ್ಯಾಧ್ಯಕ್ಷರ ವಿವೇಚನೆಗೆ ರಾಜ್ಯ ಚುನಾವಣಾ ಸಮಿತಿ ಬಿಟ್ಟಿದ್ದು, ರಾಜ್ಯಾಧ್ಯಕ್ಷರೇ ಗುರುವಾರ ಈ ಕ್ಷೇತ್ರಗಳ ಹೆಸರನ್ನು ಅಂತಿಮಗೊಳಿಸಿ ನಂತರ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಲಿದ್ದಾರೆ. ಏಪ್ರಿಲ್ 8 ರಂದು ನವದೆಹಲಿಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಾಗುತ್ತದೆ. ಅಂದು ಅಥವಾ ಏಪ್ರಿಲ್ 9 ರಂದು ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ನಾಮಪತ್ರ ಸಲ್ಲಿಕೆ ಆರಂಭವಾದ ನಂತರ ಎರಡನೇ ಪಟ್ಟಿ ಹಾಗೂ ಏಪ್ರಿಲ್ 20 ರ ಒಳಗೆ ಮೂರನೇ ಹಾಗೂ ಅಂತಿಮ ಪಟ್ಟು ಬಿಡುಗಡೆಯಾಗಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಗೂಳಿಹಟ್ಟಿ ಶೇಖರ್ ಬೆಂಬಲಿಗರಿಂದ ಒತ್ತಡ: ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರಿಗೆ ಟಿಕೆಟ್ ಕೊಡಬೇಕೆಂದು ಅವರ ಬೆಂಬಲಿಗರು ಹಾಗೂ ಸ್ಥಳೀಯ ನಾಯಕರು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪರನ್ನು ಒತ್ತಾಯಿಸಿದ್ದಾರೆ. ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಗೆ ಹೊಸದುರ್ಗ ಕ್ಷೇತ್ರದ ಸ್ಥಳಿಯ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಕೆಲ ಮುಖಂಡರು ಕಳೆದ ರಾತ್ರಿ ಭೇಟಿ ನೀಡಿದರು. ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಗೂಳಿಹಟ್ಟಿ ಶೇಖರ್ ಬೆಂಬಲಿಗರನ್ನು ಯಡಿಯೂರಪ್ಪ ಭೇಟಿ ಮಾಡಿ, ಹೊಸದುರ್ಗ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಜಿಲ್ಲಾ ಸಮಿತಿಯಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಗೂಳಿಹಟ್ಟಿ ಶೇಖರ್ ಹೆಸರನ್ನೂ ಒಳಗೊಂಡಂತೆ ಪಟ್ಟಿಯನ್ನು ಹೈಕಮಾಂಡ್ಗೆ ಕಳಿಸಲಾಗುತ್ತದೆ. ಅಂತಿಮವಾಗಿ ಹೈಕಮಾಂಡ್ ಟಿಕೆಟ್ ಫೈನಲ್ ಮಾಡಲಿದೆ, ಅಭ್ಯರ್ಥಿ ಬಗ್ಗೆ ಯೋಚನೆ ಬಿಟ್ಟು ಚುನಾವಣೆ ಗೆಲ್ಲಲು ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿ ಕಳುಹಿಸಿದ್ದಾರೆ.
ಇದನ್ನೂ ಓದಿ: ಅಂತಿಮಗೊಳ್ಳದ ಕಾಂಗ್ರೆಸ್ 2ನೇ ಪಟ್ಟಿ: ಗುರುವಾರ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನ