ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು ಹೊಂದಿರುವ ದೊಡ್ಡ ಕ್ಷೇತ್ರವಾಗಿದ್ದು, ಸದ್ಯ ಬಿಜೆಪಿ ಎಂ ಕೃಷ್ಣಪ್ಪರದ್ದೇ ಗೆಲುವಿನ ಓಟ. ಆದರೆ ಇವರನ್ನು ಸೋಲಿಸುವುದರ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ಲ್ಯಾನ್ ಮಾಡುತ್ತಿದ್ದು, ಸದ್ಯದ ಚುನಾವಣಾ ಚಿತ್ರಣ ಏನಿದೆ ಎಂಬ ವರದಿ ಇಲ್ಲಿದೆ..
ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ ರಾಜ್ಯದ ಕ್ಷೇತ್ರಗಳ ಪೈಕಿ ಅತಿ ದೊಡ್ಡ ಕ್ಷೇತ್ರವಾಗಿದೆ. ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ. 2008 ಕ್ಷೇತ್ರ ಮರುವಿಂಗಡನೆ ಬಳಿಕ ರಚನೆಯಾದ ಕ್ಷೇತ್ರದಲ್ಲಿ ಸದ್ಯ ಬಿಜೆಪಿಯದ್ದೇ ಪಾರುಪತ್ಯ. ಕ್ಷೇತ್ರ ರಚನೆಯಾದಾಗಿನಿಂದ ಬಿಜೆಪಿಯ ಎಂ ಕೃಷ್ಣಪ್ಪ ಅವರೇ ರಣಕಣದಲ್ಲಿ ವಿಜಯಪತಾಕೆ ಹಾರಿಸುತ್ತಿದ್ದಾರೆ. ಹ್ಯಾಟ್ರಿಕ್ ಸಾಧಿಸಿರುವ ಎಂ ಕೃಷ್ಣಪ್ಪ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿಯುವುದು ಖಚಿತ. ಬಿಜೆಪಿ ಭದ್ರಕೋಟೆ ಮುರಿಯಲು ಕಾಂಗ್ರೆಸ್ ಹಾಗು ಜೆಡಿಎಸ್ ಶತಪ್ರಯತ್ನ ಮಾಡುತ್ತಿವೆ. ಬೆಂಗಳೂರು ದಕ್ಷಿಣದಲ್ಲಿ ಬಿಬಿಎಂಪಿಯ ಗೊಟ್ಟಿಗೆರೆ, ಕೋಣನ ಕುಂಟೆ, ಅಂಜನಾಪುರ, ವಸಂತಪುರ, ಉತ್ತರಹಳ್ಳಿ, ಎಳಚೇನಹಳ್ಳಿ, ಬೇಗೂರು ವಾರ್ಡ್‌ಗಳು ಬರುತ್ತವೆ. ಈ ಕ್ಷೇತ್ರದಲ್ಲಿ ಒಕ್ಕಲಿಗರೇ ನಿರ್ಣಾಯಕರು. ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಈ ಕ್ಷೇತ್ರ ಒಳಗೊಂಡಿದೆ.
ಕ್ಷೇತ್ರದ ಚುನಾವಣಾ ಲೆಕ್ಕಾಚಾರ ಏನು?: ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ ಈವರೆಗೆ ಬಿಜೆಪಿಯ ಭ್ರದಕೋಟೆಯಾಗಿದೆ. ಬಿಜೆಪಿಯ ಎಂ ಕೃಷ್ಣಪ್ಪ ಈ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಭದ್ರಕೋಟೆ ಪುಡಿಗಟ್ಟಲು ತನ್ನದೇ ಕಾರ್ಯತಂತ್ರ ರೂಪಿಸುತ್ತಿದೆ. ಈ ಕ್ಷೇತ್ರದಲ್ಲಿ ಮೂರು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ ಎಂ ಕೃಷ್ಣಪ್ಪ ಈಗ ನಾಲ್ಕನೇ ಬಾರಿ ಸ್ಪರ್ಧಿಸುವುದು ಖಚಿತವಾಗಿದೆ. ಎಂ ಕೃಷ್ಣಪ್ಪ ಕ್ಷೇತ್ರ ರಚನೆಯಾದಾಗಿನಿಂದ ಬಿಜೆಪಿಯ ಎಂಎಲ್ಎ ಮುಖವಾಗಿದ್ದಾರೆ. ಆದರೆ, ಇತ್ತ ಕಾಂಗ್ರೆಸ್ ಪ್ರತಿಚುನಾವಣೆಯಲ್ಲಿ ಅಭ್ಯರ್ಥಿ ಬದಲಾಯಿಸುತ್ತಿದೆ. ಇದು ಬಿಜೆಪಿ ಹಾಲಿ ಶಾಸಕ ಎಂ ಕೃಷ್ಣಪ್ಪರ ಗೆಲುವನ್ನು ಸುಲಭವಾಗಿಸುತ್ತಿದೆ.
ಕಾಂಗ್ರೆಸ್ನಲ್ಲಿ ಯಾರ್ಯಾರು ಆಕಾಂಕ್ಷಿಗಳು: ಈ ಬಾರಿ ಕಾಂಗ್ರೆಸ್‌ನಿಂದ ಕಳೆದ ಸಲ ಸ್ಪರ್ಧಿಸಿ ಪರಾಭವಗೊಂಡಿದ್ದ ಆರ್ಕೆ ರಮೇಶ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನು ರಾಜಗೋಪಾಲರೆಡ್ಡಿ, ಕಿಶೋರ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ಹೊಸ ಮುಖವನ್ನು ಕಾಂಗ್ರೆಸ್ ಕಣಕ್ಕಿಳಿಸುತ್ತಿರುವುದರಿಂದ ಅವರಿಗೆ ಕ್ಷೇತ್ರದ ಸ್ಥಿತಿಗತಿ, ಕ್ಷೇತ್ರದ ಚುನಾವಣಾ ಲೆಕ್ಕಾಚಾರ ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗೆಲುವು ಕಷ್ಟಸಾಧ್ಯವಾಗುತ್ತಿದೆ. ಇತ್ತ ಆರ್ ಪ್ರಭಾಕರ ರೆಡ್ಡಿ ಅವರಿಗೆ ಜೆಡಿಎಸ್ ಟಿಕೆಟ್ ಘೋಷಿಸಿದೆ. ಪ್ರಭಾಕರ ರೆಡ್ಡಿ 2013ರಲ್ಲಿ ಸ್ಪರ್ಧೆ ಮಾಡಿ 71 ಸಾವಿರ ಮತಗಳನ್ನು ಪಡೆದಿದ್ದರು. ಆದರೆ, 2018ರ ಚುನಾವಣೆಯಲ್ಲಿ 36 ಸಾವಿರ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಇಳಿದಿದ್ದರು. ಹೀಗಾಗಿ ಒಕ್ಕಲಿಗರೇ ನಿರ್ಣಾಯಕರಾಗಿರುವ ಈ ಕ್ಷೇತ್ರದಲ್ಲಿ ಜೆಡಿಎಸ್ ತನ್ನದೇ ಆದ ತಂತ್ರಗಾರಿಕೆ ನಡೆಸುತ್ತಿದೆ.
ಕ್ಷೇತ್ರದಲ್ಲಿನ ಸಮಸ್ಯೆಗಳೂ ಹತ್ತು ಹಲವು: ಬೆಂಗಳೂರು ದಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳಿಗೇನು ಕಡಿಮೆ ಇಲ್ಲ. ಈ ಕ್ಷೇತ್ರ ಅತಿದೊಡ್ಡ ವ್ಯಾಪ್ತಿ ಹೊಂದಿರುವ ರಣಕಣವಾಗಿದೆ. ಗ್ರಾಮ ಹಾಗೂ ನಗರ ಪ್ರದೇಶಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಸಮಸ್ಯೆಗಳಿಗೇನು ಕೊರತೆ ಇಲ್ಲ. ಟ್ರಾಫಿಕ್ ಸಮಸ್ಯೆ ಈ ಕ್ಷೇತ್ರದ ದೊಡ್ಡ ಸಮಸ್ಯೆಯಾಗಿದೆ. ಉತ್ತರಹಳ್ಳಿ, ಕೋಣನಕುಂಟೆ ಕ್ರಾಸ್, ಕನಕಪುರ ರಸ್ತೆಯಲ್ಲಿನ ಟ್ರಾಫಿಕ್ ಕಿರಿಕಿರಿ ಜನರಿಗೆ ಅಸಮಾಧಾನ ತಂದಿದೆ. ಇನ್ನು ಹಲವು ಕಡೆ ರಸ್ತೆಗಳು ಗುಂಡಿ ಬಿದ್ದಿದ್ದು, ವಾಹನ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಹಲವೆಡೆ ನೀರಿನ ಸಮಸ್ಯೆ ನಿವಾರಣೆಯಾಗಿಲ್ಲ. ಮಳೆ ಅದಾಗ ಕೆಲ ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗುತ್ತಿದೆ. ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ವೇಗದಿಂದ ಬೆಳೆಯುತ್ತಿದೆ. ಇದು ಕೆರೆ ಒತ್ತುವರಿ, ಸರ್ಕಾರಿ ಜಮೀನು ಒತ್ತುವರಿಗೆ ಕಾರಣವಾಗಿದೆ.
ಕ್ಷೇತ್ರದ ಜಾತಿ ಲೆಕ್ಕಾಚಾರ ಏನು?: ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಈ ಕ್ಷೇತ್ರದಲ್ಲಿ ಬರೋಬ್ಬರಿ 6,50,532 ಮತದಾರರನ್ನು ಹೊಂದಿದೆ. ಈ ಪೈಕಿ 3,44,268 ಪುರುಷ ಮತದಾರರಿದ್ದಾರೆ. ಇನ್ನು ಮಹಿಳಾ ಮತದಾರರ ಸಂಖ್ಯೆ 3,06,165 ಇದೆ. ಇತರ ಮತದಾರರ ಸಂಖ್ಯೆ 99 ಇದ್ದಾರೆ. ಕ್ಷೇತ್ರದಲ್ಲಿ ಸುಮಾರು 1,48,000, ಒಕ್ಕಲಿಗ ಮತದಾರರಿದ್ದಾರೆ. ಇನ್ನು ಒಬಿಸಿ ಮತದಾರರ ಸಂಖ್ಯೆ ಸುಮಾರು 1,40,000 ರಷ್ಟಿದೆ. ಕ್ಷೇತ್ರದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದ ಮತದಾರರು ಸುಮಾರು 1,50,000 ಇದ್ದಾರೆ. ಇನ್ನು ಲಿಂಗಾಯತ 55,000, ಬ್ರಾಹ್ಮಣ 14,000 ಮತದಾರರಿದ್ದಾರೆ.
2018ರ ಕ್ಷೇತ್ರದ ಫಲಿತಾಂಶ: ಈ ಕ್ಷೇತ್ರದಲ್ಲಿ ಏನಿದ್ದರೂ ತ್ರಿಕೋನ ಸ್ಪರ್ಧೆ. ಆದರೆ, ಬಿಜೆಪಿ ಮೂರು ಬಾರಿಯೂ ವಿಜಯ ಪತಾಕೆ ಹಾರಿಸಿದೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಉತ್ತಮ ಪೈಪೋಟಿ ನೀಡಿದ್ದರು. 2018ರಲ್ಲಿ ಬಿಜೆಪಿ ಹಾಲಿ ಶಾಸಕ ಎಂ.ಕೃಷ್ಣಪ್ಪ 1,52,427 ಮತ ಗಳಿಸಿ ಜಯಭೇರಿ ಬಾರಿಸಿದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಒಟ್ಟು 1,22,068 ಮತಗಳನ್ನು ಪಡೆದಿದ್ದರು. ಇನ್ನು ಜೆಡಿಎಸ್ ಅಭ್ಯರ್ಥಿ ಒಟ್ಟು 36,138 ಮತ ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಬಿಜೆಪಿಯ ಎಂ.ಕೃಷ್ಣಪ್ಪ ಕಳೆದ ಬಾರಿ ಒಟ್ಟು 30,359 ಅಂತರದಲ್ಲಿ ಗೆಲುವು ಸಾಧಿಸಿದ್ದು, 46% ಮತ ಪಾಲು ಹೊಂದಿದ್ದರು. ಕಾಂಗ್ರೆಸ್ ಅಭ್ಯರ್ಥಿ 37% ಮತ್ತು ಜೆಡಿಎಸ್ ಅಭ್ಯರ್ಥಿ 11% ಮತ ಪಾಲು ಪಡೆದಿದ್ದರು.
ಓದಿ: ಕೇಸರಿ ಭದ್ರಕೋಟೆಯಲ್ಲಿ ಮೂರು ಪಕ್ಷಗಳ ಕಾದಾಟ.. ಯಾರಾಗ್ತಾರೆ ಚಿಕ್ಕಪೇಟೆ ಸುಲ್ತಾನ್..!