ಬೆಂಗಳೂರು: ನಿವೃತ್ತಿ ಅಥವಾ ಸ್ವಯಂ ನಿವೃತ್ತಿಯ ನಂತರ ಚುನಾವಣಾ ಅಖಾಡಕ್ಕೆ ಧುಮುಕುತ್ತಿರುವ ಅಧಿಕಾರಿಗಳ ಸಂಖ್ಯೆಗೇನು ಈ ಬಾರಿ ಕಡಿಮೆ ಇಲ್ಲ. ಅನೇಕ ಹಿರಿಯ ಅಧಿಕಾರಿಗಳು ಈ ಸಲ ಚುನಾವಣಾ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಯಾವೆಲ್ಲ ನಿವೃತ್ತ ಅಧಿಕಾರಿಗಳ ಪಾಲಿಟಿಕ್ಸ್ ಜೋರಾಗಿದೆ ನೋಡೋಣ.
ಈ ಹಿಂದೆ ಮಾಜಿ ಐಪಿಎಸ್ ಅಧಿಕಾರಿಗಳಾದ ಹೆಚ್.ಟಿ.ಸಾಂಗ್ಲಿಯಾನ ಮತ್ತು ಕೋದಂಡರಾಮಯ್ಯ ಚುನಾವಣಾ ರಣಕಣದಲ್ಲಿ ಜಯಭೇರಿ ಬಾರಿಸಿದ್ದರು. ಬೆಸ್ಕಾಂನಲ್ಲಿ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಹೆಚ್.ನಾಗೇಶ್ ಮುಳಬಾಗಲಿನಿಂದ ಸ್ಪರ್ಧಿಸಿ ಗೆದ್ದಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಐ.ಆರ್. ಪೆರುಮಾಳ್ (ಶಿವಾಜಿನಗರ - ಕೆಜೆಪಿ), ನಿವೃತ್ತ ಪೊಲೀಸ್ ಅಧಿಕಾರಿಗಳಾದ ಸುಭಾಷ್ ಭರಣಿ (ಗಾಂಧಿನಗರ - ಜೆಡಿಎಸ್), ಎಂ.ಸಿ. ನಾರಾಯಣ ಗೌಡ (ಚಿಕ್ಕಪೇಟೆ - ಜೆಡಿಎಸ್), ಜಿ.ಎ.ಬಾವಾ (ಚಾಮರಾಜಪೇಟೆ - ಕಾಂಗ್ರೆಸ್), ಬಿ.ಕೆ. ಶಿವರಾಂ (ಮಲ್ಲೇಶ್ವರ - ಕಾಂಗ್ರೆಸ್), ಚೆಲುವರಾಜು (ವರುಣಾ - ಜೆಡಿಎಸ್), ಅಬ್ದುಲ್ ಅಜೀಂ (ಹೆಬ್ಬಾಳ - ಜೆಡಿಎಸ್), ಟಿ.ಆರ್. ನಾಯಕ್ (ಲಿಂಗಸುಗೂರು - ಬಿಜೆಪಿ), ನಿವೃತ್ತ ಕೆ.ಎ.ಎಸ್ ಅಧಿಕಾರಿ ಹೆಚ್.ಟಿ. ಬಳಿಗಾರ (ಶಿಕಾರಿಪುರ - ಜೆಡಿಎಸ್) ಚುನಾವಣಾ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಪ್ರಮುಖ ನಿವೃತ್ತ ಅಧಿಕಾರಿಗಳಾಗಿದ್ದರು. ಈ ಸಲವೂ ಕೆಲವರು ರಾಜಕೀಯಕ್ಕಾಗಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸುಮಾರು 20ಕ್ಕೂ ಅಧಿಕ ನಿವೃತ್ತ ಅಧಿಕಾರಿಗಳು ಚುನಾವಣಾ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಟಿಕೆಟ್ ಮೇಲೆ ಭಾಸ್ಕರ್ ರಾವ್ ಕಣ್ಣು: ಇತ್ತೀಚೆಗೆ ಐಪಿಎಸ್ನಿಂದ ಸ್ವಯಂ ನಿವೃತ್ತಿ ಹೊಂದಿ ರಾಜಕೀಯ ಅಖಾಡಕ್ಕಿಳಿದ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ ಸೇರಿದ್ದರು. ಎಎಪಿ ಉಪಾಧ್ಯಕ್ಷರಾಗಿದ್ದ ಭಾಸ್ಕರ್ ರಾವ್ ಇದೀಗ ಕಮಲ ಮುಡಿದಿದ್ದಾರೆ. ಬಿಜೆಪಿ ಸೇರ್ಪಡೆಯಾಗಿರುವ ಭಾಸ್ಕರ್ ರಾವ್ ಈಗ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜಯನಗರ ಅಥವಾ ಬಸವನಗುಡಿ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲು ಅವರು ಮುಂದಾಗಿದ್ದಾರೆ. ಟಿಕೆಟ್ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಭಾಸ್ಕರ್ ರಾವ್ ಬ್ರಾಹ್ಮಣ ಮತಗಳು ನಿರ್ಣಾಯಕವಾಗಿರುವ ಜಯನಗರ ಅಥವಾ ಬಸವನಗುಡಿಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಜಯನಗರ ಕ್ಷೇತ್ರದಲ್ಲಿ ಮೂಲ ಬಿಜೆಪಿಗರಿದ್ದರೆ, ಬಸವನಗುಡಿಯಲ್ಲಿ ಹಾಲಿ ಶಾಸಕ ರವಿ ಸುಬ್ರಮಣ್ಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಮಧ್ಯೆ ಭಾಸ್ಕರ್ ರಾವ್ ಕೂಡ ಈ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್ಗೆ ಕಣ್ಣಿಟ್ಟಿದ್ದಾರೆ.
ಎಂ.ಲಕ್ಷ್ಮೀನಾರಾಯಣ್ ಅದೃಷ್ಟ ಪರೀಕ್ಷೆ: ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ್ ಕೂಡ ಚುನಾವಣಾ ರಣಕಣದಲ್ಲಿ ಈಗಾಗಲೇ ತಾಲೀಮು ಆರಂಭಿಸಿದ್ದಾರೆ. ಪ್ರಭಾವಿ ಅಧಿಕಾರಿಯಾಗಿದ್ದ ಎಂ.ಲಕ್ಷ್ಮೀನಾರಾಯಣ್ ಈಗ ಬಿಜೆಪಿ ಸೇರ್ಪಡೆಯಾಗಿದ್ದು, ವಿಜಯನಗರದ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಸಕ್ರಿಯವಾಗಿ ಓಡಾಡುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ತಾವು ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವುದಾಗಿ ಈಗಾಗಲೇ ಅವರು ತಿಳಿಸಿದ್ದಾರೆ. ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ಭೀಮಾ ನಾಯ್ಕ್ ಎದುರು ಕಣಕ್ಕಿಳಿಯಲು ಮುಂದಾಗಿದ್ದಾರೆ. ಯಡಿಯೂರಪ್ಪ ಆಪ್ತರಾಗಿರುವ ಎಂ.ಲಕ್ಷ್ಮಿನಾರಾಯಣ್ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಿಬಿಎಂಪಿ ಆಯುಕ್ತರಾಗಿ, ಸಮಾಜ ಕಲ್ಯಾಣ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ್ದಾರೆ.
ಅನಿಲ್ ಕುಮಾರ್‌ಗೆ ಬಿಜೆಪಿ ಟಿಕೆಟ್ ಪಕ್ಕಾ: ಬಿ.ಹೆಚ್. ಅನಿಲ್ ಕುಮಾರ್, ಮತ್ತೊಬ್ಬ ಪ್ರಭಾವಿ ಐಎಎಸ್ ಅಧಿಕಾರಿಯಾಗಿದ್ದವರು. ನಿವೃತ್ತಿ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದು, ಕೊರಟಗೆರೆ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅನಿಲ್ ಕುಮಾರ್‌ಗೆ ಕೊರಟಗೆರೆ ಟಿಕೆಟ್ ಸಿಗುವುದು ಖಚಿತವಾಗಿದೆ. ಮೀಸಲು ಕ್ಷೇತ್ರವಾದ ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ಗೆ ಠಕ್ಕರ್ ಕೊಡಲು ಮುಂದಾಗಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅನಿಲ್ ಕುಮಾರ್ ಎಸ್‌ಸಿ ಎಡ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಮತದಾರರಿದ್ದಾರೆ.
ನ್ಯಾಯಾಧೀಶ ಹುದ್ದೆ ತ್ಯಜಿಸಿ 'ತೆನೆ'ಗೆ ಜೈ: ನ್ಯಾಯಾಧೀಶರೊಬ್ಬರು ತಮ್ಮ ಹುದ್ದೆ ತ್ಯಜಿಸಿ ಜೆಡಿಎಸ್ ಸೇರಿದ್ದಾರೆ. ಚಿತ್ತಾಪುರ ಕಿರಿಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಸುಭಾಶ್ಚಂದ್ರ ರಾಠೋಡ ಜೆಡಿಎಸ್ ಸೇರಿದವರು. ವಿಜಯಪುರದವರಾದ ರಾಠೋಡ ಅವರು, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದು, ಕಲಬುರಗಿ ಜಿಲ್ಲೆಯ ಚಿತ್ತಾಪುರದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ. ಚಿತ್ತಾಪುರದಲ್ಲಿ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಎದುರಾಳಿಯಾಗಿ ಸ್ಪರ್ಧಿಸಲಿದ್ದಾರೆ. ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಯಾಗಿರುವುದು ಅಚ್ಚರಿ ಉಂಟು ಮಾಡಿದೆ.
ಎಎಪಿ ಹುರಿಯಾಳು ಕೆ.ಮಥಾಯಿ: ಕೆ.ಮಥಾಯಿ ಕರ್ನಾಟಕದ ಖೇಮ್ಕಾ ಎಂದೇ ಪ್ರಖ್ಯಾತಿ ಪಡೆದಿದ್ದ ದಕ್ಷ ಕೆಎಎಸ್ ಅಧಿಕಾರಿ. ಆದರೆ, ತಮ್ಮ ಕೆಎಎಸ್ಗೆ ನಿವೃತ್ತಿ ಘೋಷಿಸಿದ್ದ ಕೆ.ಮಥಾಯಿ ಇದೀಗ ಎಎಪಿ ಪಕ್ಷದ ಹುರಿಯಾಳು ಆಗಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದ ಅವರು ಬೆಂಗಳೂರು ಪಾಲಿಗೆ ಚಿರಪರಿಚಿತ ಮುಖ. ಶಾಂತಿನಗರ ಕ್ಷೇತ್ರದಲ್ಲಿ ಕಣಕ್ಕಿಳಿಯಲಿರುವ ಅವರು ಸಕಾಲ, ಬಿಬಿಎಂಪಿ ಜಾಹೀರಾತು ವಿಭಾಗದಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡವರು. ಜಾಹೀರಾತು ಮಾಫಿಯಾ ಸೇರಿದಂತೆ ಅನೇಕ ಅಕ್ರಮಗಳನ್ನು ಬಯಲಿಗೆಳೆದಿದ್ದರು. 18 ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ 28ಕ್ಕೂ ಹೆಚ್ಚು ಸಲ ವರ್ಗಾವಣೆಯಾಗಿದ್ದರು. ಇದೀಗ ಶಾಂತಿನಗರ ಕೈ ಶಾಸಕ ಎನ್.ಎ. ಹ್ಯಾರೀಸ್ ವಿರುದ್ಧ ತೊಡೆ ತಟ್ಟಲಿದ್ದಾರೆ.
ನಿವೃತ್ತ ಆಫೀಸರ್ಗಳಿಂದ 'ಕೈ' ಪಕ್ಷಕ್ಕೆ ಜೈ: ಮಾಜಿ ಮಾಹಿತಿ ಆಯುಕ್ತ ಮತ್ತು ಐಆರ್‌ಎಸ್ ಅಧಿಕಾರಿ ಸುಧಾಮ್ ದಾಸ್ ಎಂಬುವರು ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದಿದ್ದಾರೆ. ಅವರು ನೆಲಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸಕಲೇಶಪುರ ಅಥವಾ ಮುಳಬಾಗಲು ಟಿಕೆಟ್‌ಗಾಗಿ ನಿವೃತ್ತ ಅಧಿಕಾರಿ ಸಿದ್ದಯ್ಯ ಮತ್ತೆ ಲಾಬಿ ನಡೆಸುತ್ತಿದ್ದಾರೆ. ಜೊತೆಗೆ ನಿವೃತ್ತ ಉಪಕುಲಪತಿ ಮಹೇಶಪ್ಪ ಅವರು ಹರಿಹರದಿಂದ ಸ್ಪರ್ಧಿಸಲು ಬಯಸಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ ಅವರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ. ಅದೇ ರೀತಿ ನಿವೃತ್ತ ಕೆಎಎಸ್ ಅಧಿಕಾರಿ ಪುಟ್ಟಸ್ವಾಮಿ ಅರಕಲಗೂಡಿನಿಂದ ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ.