ಬೆಂಗಳೂರು: ಸರ್ಕಾರಿ ಶಾಲೆಗಳಲ್ಲೇ ಅಂಗನವಾಡಿ ಆರಂಭ, ಸರ್ಕಾರಿ ವೈದ್ಯರ ಖಾಸಗಿ ಕ್ಲಿನಿಕ್ಗೆ ಕಡಿವಾಣ ಹಾಕಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಜೆ ಹೊರರೋಗಿ ವಿಭಾಗ ಆರಂಭ, ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ನರ್ಸಿಂಗ್ ಕಾಲೇಜು ಆರಂಭ ಸೇರಿದಂತೆ ಹಲವು ಅಂಶಗಳೊಂದಿಗೆ ಎರಡನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 4 ಮತ್ತು 5 ನೇ ವರದಿಗಳನ್ನು ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಲ್ಲಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್ ಭೇಟಿ ನೀಡಿದರು. ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಎಸಿಎಸ್ ರಜನೀಶ್ ಗೋಯಲ್ ಸಮ್ಮುಖದಲ್ಲಿ ಆಯೋಗದ 4 ಮತ್ತು 5 ನೇ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು. ವರದಿಯಲ್ಲಿ ವಿವಿಧ ಇಲಾಖೆಗಳಿಂದ 3630 ಶಿಫಾರಸು ಮಾಡಲಾಗಿದೆ.
ಪ್ರಮುಖ ಅಂಶಗಳು: ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಪ್ರಾರಂಭಿಸಿ ಅದೇ ಶಾಲೆಯಲ್ಲೇ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡುವುದು, ವಿದ್ಯಾರ್ಥಿಗಳು ಶಾಲೆ ಬಿಡುವುದನ್ನು ತಪ್ಪಿಸಲು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸುವುದು. 1- 12 ನೇ ತರಗತಿವರೆಗೆ ಕ್ಲಸ್ಟರ್ ಶಾಲೆ ಮಾಡಿದಲ್ಲಿ ವರ್ಗಾವಣೆ ಪ್ರಮಾಣ ಪತ್ರವನ್ನು (TC) ಪದೇ ಪದೇ ಪಡೆದುಕೊಳ್ಳುವುದು ಕಡಿಮೆ ಮಾಡಿದಂತಾಗುತ್ತದೆ. ಇದರ ಜೊತೆಗೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡಿ ಪೌಷ್ಟಿಕತೆ ಸುಧಾರಿಸಬೇಕು. ಅಪೌಷ್ಟಿಕತೆ ನೀಗಿಸಲು 2ರ ಬದಲು 5 ಮೊಟ್ಟೆ ನೀಡಬಹುದಾ ಎಂದು ಪರಿಶೀಲಿಸಿ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ವೈದ್ಯಕೀಯ ಶಿಕ್ಷಣ ಸೀಟು ಪಡೆಯುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೋಟಾ ಅಡಿಯಲ್ಲಿ ಶೇ.15 ರಷ್ಟು ಸೀಟು ಮೀಸಲಿಡುವುದು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 5 ರಿಂದ 10 ರಷ್ಟು ಅನಿವಾಸಿ ಭಾರತೀಯ ಕೋಟಾ ಸೃಷ್ಟಿ ಮಾಡಬಹುದು. 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲಸದ ಹೊರೆ ಇಳಿಸಲು ಬಿಎಸ್ಸಿ ನರ್ಸಿಂಗ್ ಕೋರ್ಸ್ ಹಾಗೂ ಪ್ಯಾರಾಮೆಡಿಕಲ್ ಕೋರ್ಸ್ ಆರಂಭಿಸಬಹುದು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಸರ್ಕಾರಿ ವೈದ್ಯರು ಖಾಸಗಿ ವೃತ್ತಿ ನಡೆಸುವುದನ್ನು (Pravite practice) ನಿಷೇಧಿಸಬಹುದು, ಸರ್ಕಾರಿ ಆಸ್ಪತ್ರೆಗಳಲ್ಲೇ ಸಂಜೆ ಹೊರರೋಗಿಗಳ ವಿಭಾಗ ಪ್ರಾರಂಭಿಸಲು ಸಲಹೆ ನೀಡಲಾಗಿದೆ. ಲೋಕಸೇವಾ ಆಯೋಗದ ಅಧ್ಯಕ್ಷರು ಸೇರಿದಂತೆ ಸದಸ್ಯರ ಸಂಖ್ಯೆಯನ್ನು 14 ರಿಂದ 8ಕ್ಕೆ ಇಳಿಸಲು ಶಿಫಾರಸು ಮಾಡಿದ್ದು, ಬಿಬಿಎಂಪಿಯಲ್ಲಿನ 30 ಕಂದಾಯ ವಿಭಾಗಗಳಿಗೆ ವಿಕೇಂದ್ರೀಕರಣ ಮತ್ತು ಸಮನ್ವಯ ಸಾಧಿಸಲು 30 ಕೆಎಎಸ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಶಿಫಾರಸು ಮಾಡಿದೆ.
5 ಲಕ್ಷಕ್ಕಿಂತ ಕಡಿಮೆ ವಹಿವಾಟು ಹೊಂದಿರುವ ಸಂಘಗಳು 5 ವರ್ಷಗಳಿಗೊಮ್ಮೆ ಲೆಕ್ಕಪತ್ರ ಸಲ್ಲಿಸಲು ಚಾರ್ಟರ್ಡ್ ಅಕೌಂಟೆಂಟ್ಗಳಿಂದ ಲೆಕ್ಕ ಪರಿಶೋಧನೆ ಮಾಡಿಸುವ ಅಗತ್ಯವಿಲ್ಲ. ಸಂಪನ್ಮೂಲ ಹೆಚ್ಚಳಕ್ಕೆ ಕಾಯ್ದೆ ತಿದ್ದುಪಡಿ ಮಾಡಿ ಶೇಕಡಾ ಒಂದರಷ್ಟು ಕ್ರೀಡಾ ಸೆಸ್ಸ್ ಹೆಚ್ಚಿಸಬಹುದು, ರಾಜ್ಯ ಸಹಕಾರ ಚುನಾವಣಾ ಪ್ರಾಧಿಕಾರ ರದ್ದುಗೊಳಿಸಬಹುದು. ಉದ್ಯೋಗ ಸೇವೆ ಇಲಾಖೆಯನ್ನು ಕೌಶಲ್ಯ ಮಿಷನ್ ಜೊತೆ ವಿಲೀನಗೊಳಿಸಬಹುದು, ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮಸೂದೆ 2020ನ್ನು ಅಂತಿಮಗೊಳಿಸಬಹುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯವನ್ನು ಎರಡು ನಿರ್ದೇಶನಾಲಯಗಳನ್ನಾಗಿ ಪ್ರತ್ಯೇಕಿಸಬಹುದು ಎನ್ನುವುದು ಸೇರಿದಂತೆ ಹಲವು ಶಿಫಾರಸುಗಳನ್ನು ವರದಿ ಒಳಗೊಂಡಿದೆ.
ಇದನ್ನೂ ಓದಿ: ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ.ಗಳ ಅನುದಾನ ಬಿಡುಗಡೆ: ಸಿಎಂ ಬೊಮ್ಮಾಯಿ