ಬೆಂಗಳೂರು: ತಡರಾತ್ರಿ ಆನೇಕಲ್ ಪಟ್ಟಣದ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಮುಂಜಾನೆ 3ಕ್ಕೆ ಕರಗ ಮಹೋತ್ಸವ ನೆರವೇರಿಸುವ ಮೂಲಕ ಆನೇಕಲ್ ತಹಶೀಲ್ದಾರರ ಆದೇಶವನ್ನು ಪೂಜಾರಿ ಅರ್ಜುನಪ್ಪ ಕುಟುಂಬ ದಿಕ್ಕರಿಸಿದೆ. ಇದಕ್ಕೆ ಪ್ರತಿ ವೈರಿಗಳಾದ ವಹ್ನಿಕುಲ ಕುಲಸ್ಥರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ದೂರು ನೀಡಿ ಅರ್ಚಕ ಕುಟುಂಬದ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿದ ಘಟನೆ ತಾಲೂಕಿನಲ್ಲಿ ಸದ್ದು ಮಾಡಿದೆ.
ತಹಶೀಲ್ದಾರ್ ಶಿವಪ್ಪ ಹೆಚ್ ಲಮಾಣಿ ನೀಡಿದ ಆದೇಶದಲ್ಲಿ, ಕರಗ ಆಚರಣೆ ಪಲ್ಲಕ್ಕಿ ಉತ್ಸವವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಕೇವಲ ದೇವಾಲಯದ ಆವರಣದೊಳಗೆ ಪೂಜಾ ವಿಧಾನಗಳಿಗಷ್ಟೇ ಮಾಡಲು ಅವಕಾಶ ಕಲ್ಪಿಸಿದ್ದರು. ಇದರಂತೆ ಅರ್ಚಕ ಕುಟುಂಬ ಒಪ್ಪಿ ಪೂಜೆ ನೆರವೇರಿಸಿ ಅನಂತರ ಮುಂಜಾನೆ 3ಕ್ಕೆ ಯಾರಿಗೂ ತಿಳಿಸದೇ ಕರಗ ಕುಣಿದು ಅಚ್ಚರಿ ಮೂಡಿಸಿದ್ದಾರೆ ಎಂದು ಅರ್ಜಿದಾರರಾದ ವಹ್ನಿಕುಲ ಸೇವಾ ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಬೆಳಗಾಗುತ್ತಿದ್ದಂತೆ ವಕೀಲರ ನೆರವು ಪಡೆದ ಕುಲಸ್ಥರ ತಂಡ ತಹಶೀಲ್ದಾರ್ ಕಚೇರಿ ಹಾಗೂ ಪೊಲೀಸ್ ಠಾಣೆಗಳಲ್ಲಿ ಲಿಖಿತ ದೂರು ನೀಡಿದರು. ಅಷ್ಟೇ ಅಲ್ಲ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಅವರು ಪ್ರತಿಭಟನೆಕಾರರ ಮನವೋಲಿಸುವಲ್ಲಿ ಯಶಸ್ವಿಯಾದರು. ಬಳಿಕ ವಹ್ನಿಕುಲ ಕುಲಸ್ಥರು ದೂರು ನೀಡಿ ಮನೆಗಳತ್ತ ನಡೆದರು.
ಚುನಾವಣೆ ಹಿನ್ನೆಲೆ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತಿದೆ. ಹೀಗಾಗಿ ಕರಗ ಮತ್ತು ಪಲ್ಲಕ್ಕಿಗಳು ಹೊರತು ಪಡಿಸಿ ದೇವಸ್ಥಾನದೊಳಗೆ ಪೂಜೆ ಮಾತ್ರ ಮಾಡಲು ಅರ್ಜುನಪ್ಪ ಅವರಿಗೆ ಅನುಮತಿ ನೀಡಲಾಗಿದೆ ಎಂದು ತಹಶೀಲ್ದಾರ್ ಹೇಳಿದ್ದರು. ನಾವು ಸಹ ತಹಶೀಲ್ದಾರ್ ಹೇಳಿದಂತೆ ಭಜನೆ ಬಿಟ್ಟು ಪೂಜೆ ಮಾಡಿದ್ದೆವು. ಆದರೆ ಅರ್ಜುನಪ್ಪನವರು ತಹಶೀಲ್ದಾರ್ ಆದೇಶವನ್ನು ಉಲ್ಲಂಘಿಸಿ ರಾತ್ರೋರಾತ್ರಿ ಕರಗ ಆಚರಣೆ ಮಾಡಿದ್ದಾರೆ ಎಂದು ಆರೋಪಿಸಿದ ವಹ್ನಿಕುಲ ಕುಲಸ್ಥರ ಮುಖಂಡ ಸೋಮಶೇಖರ್ ಅವರು, ಇದರ ಬಗ್ಗೆ ತಹಶೀಲ್ದಾರ್ ಅವರು ಕೂಡಲೇ ಕ್ರಮ ಕೈಗೊಳ್ಳಬೇಕು. ಅವರನ್ನು ಪೂಜಾರಿ ಸ್ಥಾನದಿಂದ ವಜಾ ಮಾಡಿ ದೇವಸ್ಥಾನವನ್ನು ನಮಗೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿದರು.
ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅರ್ಚಕರಿಗೆ ಆದೇಶ.. ತಹಶೀಲ್ದಾರ್ ಶಿವಪ್ಪ ಹೆಚ್ ಲಮಾಣಿ ಮತ್ತು ಮೂವರು ಅರ್ಜಿದಾರರ ಸಮ್ಮುಖದಲ್ಲಿ ನಡೆದ ಕರಗ ಆಚರಣೆಯ ಸಭೆಯಲ್ಲಿ ಅಧಿಕೃತ ಒಮ್ಮತ ಮೂಡಲಿಲ್ಲ. ಬದಲಾಗಿ ತೀರ್ಪಿಗೂ ಮುನ್ನ ಕರಗದ ದೇವಾಲಯದ ಮುಂದೆ ಚಂದ್ರಪ್ಪನ ಕಡೆಯವರು ಬಲರಾಮ ಮೂರ್ತಿ ಸಿದ್ಧಗೊಳಿಸಿದ್ದು ಹಾಗೂ ಅದನ್ನು ಅರ್ಜುನಪ್ಪ ತಂಡ ಕೆಡವಿದ ಘಟನೆ ಇಂಟೆಲಿಜೆನ್ಸ್ ವರದಿಯಿಂದ ಗೊತ್ತಾಗಿದೆ. ಆದೇಶಕ್ಕೂ ಮುನ್ನ ಈ ಬೆಳವಣಿಗೆಗಳನ್ನು ಆಧರಿಸಿ ಹಾಗೂ ಈ ಹಿಂದಿನ ತಹಶೀಲ್ದಾರ್ ರಾಜೀವ್ ಕರೆದಿದ್ದ ಸಭೆಯಲ್ಲಿ ಮೂವರು ಅರ್ಜಿದಾರರಿಗೆ ನೀಡಿದ್ದ ಮೌಖಿಕ ಆದೇಶ ಹಾಗೂ ಎರಡನೆಯದಾಗಿ ನನ್ನ ನೇತೃತ್ವದಲ್ಲೂ ನಡೆದ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಇವೆಲ್ಲಾ ಬೆಳವಣಿಗೆಗಳನ್ನು ಪರಿಶೀಲಿಸಿ ಹೈಕೋರ್ಟ್ ಆದೇಶದನ್ವಯ ಮುಜರಾಯಿ ಆಯುಕ್ತರು ಕೊಟ್ಟ ನಿರ್ದೇಶನವನ್ನು ಗಮನಿಸಿ ದೇವಾಲಯದೊಳಗೆ ಸಂಪ್ರದಾಯದಂತೆ ಧರ್ಮರಾಯಸ್ವಾಮಿ ದ್ರೌಪತಾಂಭ ದೇವಾಲಯದಲ್ಲಿ ಪೂಜೆ ನಡೆಸಲು ಅರ್ಚಕರಿಗೆ ಆದೇಶ ನೀಡಿರುವುದಾಗಿ ತಿಳಿಸಿದರು.
ಓದಿ: ಆನೇಕಲ್ ಕರಗಕ್ಕೆ ನೀತಿ ಸಂಹಿತೆ ಅಡ್ಡಿ: ಕರಗ ರಹಿತ ಪೂಜಾ ವಿಧಿ ವಿಧಾನಗಳಿಗೆ ಅವಕಾಶ