ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ರಾಜ್ಯಾದ್ಯಂತ ಏರ್ಪಡಿಸಿದ್ದ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಬೆಂಗಳೂರು ನಗರ ಹಾಗೂ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು.
ಅಭಿಯಾನಕ್ಕೆ ಹೇರೋಹಳ್ಳಿ ವಾರ್ಡ್ ವ್ಯಾಪ್ತಿಯ ಕಚೇರಿಯ ಮುಂಭಾಗ ಸಹಕಾರ ಸಚಿವಎಸ್.ಟಿ.ಸೋಮಶೇಖರ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತ ಚಾಲನೆ ನೀಡಿದರು. ಬಳಿಕ ಬಿಬಿಎಂಪಿ ಕೇಂದ್ರ ಕಚೇರಿ, ವಾರ್ಡ್ ಕಚೇರಿಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಬಿಬಿಎಂಪಿ ಶಾಲಾ ಮಕ್ಕಳೊಂದಿಗೆ ಕನ್ನಡ ಗೀತೆ ಹಾಡಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಕೇಂದ್ರ ಕಚೇರಿ, ಕೇಂದ್ರ ಕಾರ್ಯಾಗಾರ ಹಾಗೂ ಎಲ್ಲಾ ಘಟಕಗಳಲ್ಲಿ ಏಕಕಾಲಕ್ಕೆ "ಜಯ ಭಾರತ ಜನನಿಯ ತನುಜಾತೆ" ಲಕ್ಷಕಂಠಗಳಲ್ಲಿ ಕನ್ನಡ ಗೀತಗಾಯನ ಮೊಗಳಿತು.
ಕನ್ನಡ ಉಳಿವಿಗಾಗಿ ಸಂಕಲ್ಪ:
ಇದಾದ ಬಳಿಕ ಸಂಕಲ್ಪ ಸ್ವೀಕಾರ ಮಾಡಲಾಯಿತು. ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣವನ್ನ ತೊಟ್ಟರು. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಬದ್ಧನಾಗಿರುತ್ತೇನೆ ಎಂದು ಸಂಕಲ್ಪ ಮಾಡಿದರು.
ಮೂರು ಹಾಡಿನ ಮೂಲಕ ನಾಡು-ನುಡಿಯ ಪ್ರೀತಿ ಅನಾವರಣ:
ಬಿಎಂಟಿಸಿ ಕೇಂದ್ರ ಕಚೇರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಾಯಕರು ರಾಷ್ಟ್ರಕವಿ ಕುವೆಂಪು ವಿರಚಿತ 'ಬಾರಿಸು ಕನ್ನಡ ಡಿಂಡಿಮವ', ನಿಸಾರ್ ಅಹಮದ್ ಅವರ 'ಜೋಗದ ಸಿರಿ ಬೆಳಕಿನಲ್ಲಿ' ಹಾಗೂ ಹಂಸಲೇಖ ಅವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಗೀತೆಗಳನ್ನು ಗಾಯಕರು ಹಾಡುವ ಮೂಲಕ ಕನ್ನಡ ನಾಡು - ನುಡಿಯ ಪ್ರೇಮವನ್ನು ಅನಾವರಣಗೊಳಿಸಿದರು.
ಎಲ್ಲೆಡೆ ಮೊಳಗಿದ ಕನ್ನಡ ಗೀತೆಗಳು:
ಎಂಜಿ ರಸ್ತೆ, ಮೆಜೆಸ್ಟಿಕ್, ನಾಗಸಂದ್ರ, ಮೆಟ್ರೋ, ಬಿಎಂಟಿಸಿ, ಬಿಬಿಎಂಪಿ ಸೇರಿದಂತೆ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಕನ್ನಡ ಗೀತೆಗಳು ಮೊಳಗಿದವು. ಈ ಮೂಲಕ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಈ ವೇಳೆ ಕಾರ್ಯಕ್ರಮ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ರವರು ಮಾತನಾಡಿ, ಕನ್ನಡವನ್ನು ಬಳಸಲು ಮತ್ತು ಕನ್ನಡದಲ್ಲಿ ವ್ಯವಹರಿಸಲು ಪ್ರೋತ್ಸಾಹಿಸುವ ಸಲುವಾಗಿ ಅಧಿಕಾರಿಗಳು, ಸಿಬ್ಬಂದಿಗೆ ರೂ.5000 ಬಹುಮಾನ ನೀಡಲು 50 ಸಾವಿರ ರೂ.ಗಳನ್ನು ಮೀಸಲಿಡುವುದಾಗಿ ತಿಳಿಸಿದರು.
ನಂತರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತೆಗಳು ಮೊಳಗಿವೆ. ಕನ್ನಡಕ್ಕಾಗಿ ನಾವು ಎಂಬ ವಿಚಾರವನ್ನು ಸಮಸ್ತ ನಾಗರಿಕರಿಗೆ ತಿಳಿಸಲು ಸಂಕಲ್ಪ ಮಾಡಿದ್ದೇವೆ. 28 ವಿಧಾನಸಭಾ ಕ್ಷೇತ್ರಗಳಲ್ಲಿ ಸಾಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಕಾರಣರಅದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಅರಮನೆನಗರಿ ಮೈಸೂರಲ್ಲಿ ಹರಡಿದ ಕನ್ನಡ ಕಂಪು:
ಇಂದು ರಾಜ್ಯಾದ್ಯಂತ ಕನ್ನಡಕ್ಕಾಗಿ ನಾವು ಅಭಿಯಾನದ ಲಕ್ಷ ಕಂಠಗಳ ಸಮೂಹ ಗೀತ ಗಾಯನ ಕಾರ್ಯಕ್ರಮದ ಅಂಗವಾಗಿ ಮೈಸೂರಿನ ಓವೆಲ್ ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿವಿ, ರಂಗಾಯಣ, ಕಾಲೇಜು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಮಂಡಳಿ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಗೀತಾ ಗಾಯನವನ್ನು ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ನಾಡಗೀತೆಯ ಮೂಲಕ ಕಾರ್ಯಕ್ರಮ ಆರಂಭಿಸಿ, ಬಾರಿಸು ಕನ್ನಡ ಡಿಂಡಿಮವ, ಜೋಗದಸಿರಿ ಬಳಕಿನಲ್ಲಿ ಹಾಗೂ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಎಂಬ ಮೂರು ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.
ಕುಣಿದು ಕುಪ್ಪಳಿಸಿದ ಯುವ ಜನತೆ:
ಹಂಸಲೇಖ ರಚಿತವಾದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ಕಾಲೇಜು ಯುವಕ-ಯುವತಿಯರು, ಶಾಲಾ ಮಕ್ಕಳು ನೃತ್ಯ ಮಾಡಿ ಸಂಭ್ರಮಿಸಿದರು.
ಕನ್ನಡ ನೆಲ,ಜಲದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ:
ನ.01 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕಮದ ಪೂರ್ವಭಾವಿಯಾಗಿ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ಕುಮಾರ್ ಈ ವಿನೂತನ ಕಾರ್ಯಕ್ರಮ ಆರಂಭ ಮಾಡಿಸಿದ್ದಾರೆ. ಈ ಕಾರ್ಯಕ್ರಮದ ಮೂಲಕ ಕನ್ನಡಿಗರೆಲ್ಲರಿಗೂ ಭಾಷೆ, ನೆಲಜಲದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಕನ್ನಡೇತರರಿಗೆ ಪ್ರೀತಿಯಿಂದ ಕನ್ನಡ ಕಲಿಸಬೇಕು ಎಂಬ ಮಾನೋಭಾವನೆಯನ್ನು ನಮ್ಮಲ್ಲಿ ಜಾಗೃತಗೊಳಿಸಲು ವಿನೂತನ ಕಾರ್ಯಕ್ರಮ ಮಾಡಿದ್ದಾರೆ. ಇದು ಅದ್ಭುತವಾದ ಕಲ್ಪನೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಈ ವೇಳೆ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಶಾಸಕ ಎಲ್.ನಾಗೇಂದ್ರ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತಿಯಲ್ಲಿ ಮೈಸೂರಿನ ವಿವಿಧ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಗೀತಾಗಾಯನದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಬಿಜೆಪಿ ಕಚೇರಿಯಲ್ಲಿ ಮೊಳಗಿದ ಮಾತಾಡ್ ಮಾತಾಡ್ ಕನ್ನಡ ಅಭಿಯಾನ