ಬೆಂಗಳೂರು: ನವದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಗಿತವಾಗಲಿದೆ ಎನ್ನುವುದು ಕೇವಲ ವದಂತಿಯಾಗಿದ್ದು, ಕನ್ನಡ ಅಧ್ಯಯನ ಪೀಠ ಮುಂದುವರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಜೂನ್ 25ರಂದು ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಪತ್ರ ಬರೆದು ಕನ್ನಡ ಅಧ್ಯಯನಪೀಠ ಮುಂದುವರಿಸಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಮತ್ತು ಸಂಸ್ಕೃತಿ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎನ್ನುವ ವಿಷಯವನ್ನು ಕುಲಪತಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯವು ಪರಸ್ಪರ ಮಾಡಿಕೊಂಡ ಒಪ್ಪಂದದ ಮೇರೆಗೆ ಕನ್ನಡ ಅಧ್ಯಯನ ಪೀಠವು 2015ರ ಅಕ್ಟೋಬರ್ 1ರಿಂದ ಕಾರ್ಯಾರಂಭ ಮಾಡಿದೆ ಒಪ್ಪಂದದ ಪ್ರಕಾರ ಇಲಾಖೆಯು ವಾರ್ಷಿಕವಾಗಿ 43 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ ಜೆಎನ್ಯು ಕನ್ನಡ ಅಧ್ಯಯನಪೀಠದ ಕೋರಿಕೆಯಂತೆ ಸರ್ಕಾರವು ಐದು ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ನೀಡಿದ್ದು, ಇದರಿಂದ ಲಭಿಸುವ ಬಡ್ಡಿಯಿಂದ ಕನ್ನಡ ಅಧ್ಯಯನ ಪೀಠ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಆರ್ಥಿಕ ಸಮಸ್ಯೆ ಎದುರಾಗದು ಎಂದು ಮಾಹಿತಿ ನೀಡಿದ್ದಾರೆ.
ಜೆಎನ್ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಆಗಸ್ಟ್ 20ರಂದು ನಿವೃತ್ತಿ ಆಗುವುದರಿಂದ ಅವರ ಜಾಗಕ್ಕೆ ನಿಯಮಾನುಸಾರ ಹೊಸದಾಗಿ ಅರ್ಹರನ್ನು ನೇಮಕಾತಿ ಮಾಡಿಕೊಳ್ಳಲು ಜೂನ್ 25ರಂದು ಜೆಎನ್ಯು ಉಪ ಕುಲಪತಿಗಳಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಲು ಕೋರಿದ್ದೇನೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದೆ. ಸದರಿ ಕೇಂದ್ರವು ಸ್ಥಗಿತಗೊಳ್ಳುತ್ತದೆ ಎಂಬ ವದಂತಿಯೂ ಕಲ್ಪಿತ ಸುದ್ದಿಯಾಗಿದ್ದು, ಕನ್ನಡಿಗರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಸಿ.ಟಿ ರವಿ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷೆ ಬೆಳವಣಿಗೆಯ ದೃಷ್ಟಿಯಿಂದ ಜೆಎನ್ಯು ಕನ್ನಡ ಅಧ್ಯಯನ ಪೀಠ ಪ್ರಧಾನಪಾತ್ರ ವಹಿಸಿರುವುದರಿಂದ ಕನ್ನಡ ಪೀಠಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವು, ಸಹಕಾರವನ್ನು ನೀಡುತ್ತಾ ಬಂದಿದೆ. ನಾಡು-ನುಡಿ ಸಂಸ್ಕೃತಿ ಬೆಳವಣಿಗೆಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.