ಬೆಂಗಳೂರು: 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ...' ಖ್ಯಾತಿಯ ನಿತ್ಯೋತ್ಸವ ಕವಿ ನಿಸಾರ್ ಅಹಮದ್ (84) ನಿಧನರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರಿಂದ ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿದೆ.
ಬಾಲ್ಯ ಜೀವನ:
ಕೊಕ್ಕರೆಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್ ಇವರ ಪೂರ್ಣ ಹೆಸರು. ಬೆಂಗಳೂರಿನ ದೇವನಹಳ್ಳಿಯಲ್ಲಿ ಫೆಬ್ರವರಿ 5,1936 ಜನನ. ತಂದೆ ಷೇಕ್ ಹೈದರ್, ತಾಯಿ ಹಮೀದಾ ಬೇಗಂ. ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ಕೆ.ಎಸ್.ನಿಸಾರ್ ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಿ. ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್ ಪದವಿ. ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ರಾಜರತ್ನಂ, ವಿ.ಸೀ. ಇವರ ಗುರುಗಳು. ಕನ್ನಡದಲ್ಲಿ ಆಸಕ್ತಿ ಬೆಳೆಯಲು ಇವರೆಲ್ಲರೂ ಕಾರಣ.
![Kannada poet KS Nissar Ahmed passes away](https://etvbharatimages.akamaized.net/etvbharat/prod-images/7042632_twdfdfdfdfd.jpg)
1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭೂವಿಜ್ಞಾನಿಯಾಗಿ ಆಯ್ಕೆಯಾಗಿ ಉದ್ಯೋಗ ಆರಂಭಿಸಿದ್ದು ಅಂದಿನ ಗುಲಬರ್ಗಾದಲ್ಲಿ. ಕೆಲಸದಲ್ಲಿ ತೃಪ್ತಿ ದೊರೆಯದೆ ಎಂ.ಎಸ್ಸಿ. ಮುಗಿಸಿ ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ ಮಾಡಿದರು. ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು ಮತ್ತಿತರ ಕಡೆ ಕೆಲಸ ಮಾಡಿದರು. 1994ರ ವರೆಗೆ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ಪುನಃ ಶಿವಮೊಗ್ಗ ಕಾಲೇಜಿನಲ್ಲಿದ್ದಾಗ ನಿವೃತ್ತರಾದರು.
![Kannada poet KS Nissar Ahmed passes away](https://etvbharatimages.akamaized.net/etvbharat/prod-images/7042632_yyyyyywer.jpg)
ಸರ್ಕಾರಿ ಸೇವೆಯಲ್ಲಿದ್ದಾಗಲೇ ರಾಜ್ಯಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಪ್ರಕಟಿಸಿದ ‘ಚಂದನ’ ತ್ರೈಮಾಸಿಕ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆ ಪ್ರಕಟಣೆ. ನಿತ್ಯೋತ್ಸವ, ಸುಶ್ರಾವ್ಯ, ನವೋಲ್ಲಾಸ, ಸುಮಧುರ. ಅಪೂರ್ವ, ಹೊಂಬೆಳಕು ಕ್ಯಾಸೆಟ್ಟುಗಳ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದ್ದರು
![Kannada poet KS Nissar Ahmed passes away](https://etvbharatimages.akamaized.net/etvbharat/prod-images/7042632_terererdfd.jpg)
10ನೇ ವಯಸ್ಸಿನಲ್ಲೇ ಸಾಹಿತ್ಯಾಸಕ್ತಿ:
ಕೆ.ಎಸ್.ನ ಅವರ ಸಾಹಿತ್ಯಾಸಕ್ತಿ 10ನೇ ವಯಸ್ಸಿನಲ್ಲೇ ಆರಂಭವಾಗಿತ್ತು. 'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು 5 ದಶಕಗಳಿಂದ ಅವರು 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಪ್ರಸಿದ್ಧ ಕವನ ಸಂಕಲನಗಳಾಗಿವೆ.
![ಕನ್ನಡ ಸಾಹಿತ್ಯ ಲೋಕದ](https://etvbharatimages.akamaized.net/etvbharat/prod-images/7042632_twrrrre.jpg)
1978ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ 13 ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ.
ಕುರಿಗಳು ಸಾರ್ ಕುರಿಗಳು, ರಾಜಕೀಯ ವಿಡಂಬನೆ ಕವನವಾಗಿದೆ. ಭಾರತವು ನಮ್ಮ ದೇಶ (ಸರ್ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ) ಮಾಡಿದ್ದಾರೆ. ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
![Kannada poet KS Nissar Ahmed passes away](https://etvbharatimages.akamaized.net/etvbharat/prod-images/7042632_tttewsf.jpg)
ಕವನ ಸಂಕಲನಗಳು:
ಮನಸು ಗಾಂಧಿ ಬಜಾರು (1960)
ನೆನೆದವರ ಮನದಲ್ಲಿ (1964)
ಸುಮಹೂರ್ತ (1963)
ಸಂಜೆ ಐದರ ಮಳೆ (1970)
ನಾನೆಂಬ ಪರಕೀಯ (1972)
ಆಯ್ದ ಕವಿತೆಗಳು (1974)
ನಿತ್ಯೋತ್ಸವ (1976)
ಸ್ವಯಂ ಸೇವೆಯ ಗಿಳಿಗಳು (1977)
ಅನಾಮಿಕ ಆಂಗ್ಲರು(1982),
ಬರಿರಂತರ (1990)
ಸಮಗ್ರ ಕವಿತೆಗಳು (1991)
ನವೋಲ್ಲಾಸ (1994)
ಆಕಾಶಕ್ಕೆ ಸರಹದ್ದುಗಳಿಲ್ಲ (1998)
ಅರವತ್ತೈದರ ಐಸಿರಿ(2001)
ಸಮಗ್ರ ಭಾವಗೀತೆಗಳು(2001)
ಪ್ರಾತಿನಿಧಿಕ ಕವನಗಳು(2002)
![Kannada poet KS Nissar Ahmed passes away](https://etvbharatimages.akamaized.net/etvbharat/prod-images/7042632_ttcfdfdfdfdsdf.jpg)
ಗದ್ಯ ಸಾಹಿತ್ಯ:
'ಅಚ್ಚುಮೆಚ್ಚು'
'ಇದು ಬರಿ ಬೆಡಗಲ್ಲೊ ಅಣ್ಣ'
ಷೇಕ್ಸ್ ಪಿಯರ್ನ ಒಥೆಲ್ಲೊದ ಕನ್ನಡಾನುವಾದ
'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ಕೃತಿಯ ಕನ್ನಡಾನುವಾದ. ಅಮ್ಮ ಆಚಾರ ಮತ್ತು ನಾನು
ಮುಂಬಯಿಯಲ್ಲಿ ಆಹ್ವಾನಿತ ಭಾಷಣಕಾರರಾಗಿಸಂಪಾದಿಸಿ
ಮುಂಬಯಿಯಲ್ಲಿ ಪ್ರತಿ ವರ್ಷವೂ, 'ಮುಂಬಯಿ ವಿಶ್ವವಿದ್ಯಾಲಯ,' ಹಾಗೂ 'ಮೈಸೂರ್ ಆಸೋಸಿಯೇಷನ್' ಜಂಟಿಯಾಗಿ ಈ ಉಪನ್ಯಾಸ ಮಾಲಿಕೆಯನ್ನು ಆಯೋಜಿಸುತ್ತಾ ಬಂದಿವೆ. 2011 ರ ಸಾಲಿನ, 'ಮೈಸೂರು ಅಸೋಸಿಯೇಷನ್ ದತ್ತಿ ಉಪನ್ಯಾಸ ಕಾರ್ಯಕ್ರಮ 'ದಲ್ಲಿ ಡಾ.ಕೆ.ಎಸ್.ನಿಸಾರ್ ಅಹಮದ್ರವರು, ಆಹ್ವಾನಿತ ಭಾಷಣಕಾರರಾಗಿ ಆಗಮಿಸಿ, ತಮ್ಮ ಪ್ರತಿಭಾನ್ವಿತ ಮಾತುಗಳಿಂದ ಮುಂಬಯಿ ಕನ್ನಡಿಗರ ಮನಸ್ಸನ್ನು ಸೂರೆಗೊಂಡಿದ್ದರು.
![Kannada poet KS Nissar Ahmed passes away](https://etvbharatimages.akamaized.net/etvbharat/prod-images/7042632_ttttt.jpg)
ಪ್ರಶಸ್ತಿ ಪುರಸ್ಕಾರ:
2006 ರ ಮಾಸ್ತಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಗೊರೂರು ಪ್ರಶಸ್ತಿ
ಅನಕೃ ಪ್ರಶಸ್ತಿ
ಕೆಂಪೇಗೌಡ ಪ್ರಶಸ್ತಿ
ಪಂಪ ಪ್ರಶಸ್ತಿ
1981 ರ ರಾಜ್ಯೋತ್ಸವ ಪ್ರಶಸ್ತಿ
2003 ರ ನಾಡೋಜ ಪ್ರಶಸ್ತಿ
2006 ರ ಅರಸು ಪ್ರಶಸ್ತಿ
2008ರಲ್ಲಿ ಪದ್ಮಶ್ರಿ
![Kannada poet KS Nissar Ahmed passes away](https://etvbharatimages.akamaized.net/etvbharat/prod-images/kn-bng-06-nisar-ahmed-no-more-script-7208077_03052020143945_0305f_1588496985_397.jpg)
2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿ ಆಯ್ಕೆಯಾಗಿದ್ದರು. 15 ದಿನಗಳ ಹಿಂದೆ ಅಮೆರಿಕದಲ್ಲಿ ನೆಲೆಸಿದ್ದ ಪುತ್ರನನ್ನು ಕಳೆದುಕೊಂಡ ನೋವಲ್ಲಿ ಅವರು ಇನ್ನಷ್ಟು ಖಿನ್ನತೆಗೆ ಸರಿದಿದ್ದರು. ಆ ಆಘಾತದಿಂದ ಚೇತರಿಸಿಕೊಂಡಿರಲಿಲ್ಲ. ಇದೀಗ ಅವರ ನಿಧನಕ್ಕೆ ಈ ನೋವು ಕೂಡ ಕಾರಣ ಎನ್ನಲಾಗುತ್ತಿದೆ.