ದೊಡ್ಡಬಳ್ಳಾಪುರ: ಸರ್ಕಾರದ ಅವೈಜ್ಞಾನಿಕ ತೆರಿಗೆ ನೀತಿ ವಿರೋಧಿಸಿ ಕನ್ನಡ ಪಕ್ಷದ ಕಾರ್ಯಕರ್ತರು ತಾಲೂಕಿನ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೊರೊನಾ ವೈರಸ್ನಿಂದ ಜಾರಿಯಾದ ಲಾಕ್ಡೌನ್ನಿಂದ ಕಳೆದ ಮೂರು ತಿಂಗಳಿಂದ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ನಗರದ ಪ್ರಮುಖ ಉದ್ಯಮ ನೇಕಾರಿಕೆ ಸಹ ನಡೆಯುತ್ತಿಲ್ಲ. ಕೆಲಸವಿಲ್ಲದೆ ಜನ ಕಂಗಲಾಗಿದ್ದು, ಈ ಸಮಯದಲ್ಲಿ ಜನರ ನೆರವಿಗೆ ಬರಬೇಕಿದ್ದ ಸರ್ಕಾರ ಸ್ಥಳೀಯ ಸಂಸ್ಥೆಗಳ ಮೂಲಕ ಮನೆ ಕಂದಾಯ ಮತ್ತು ನೀರಿನ ಕಂದಾಯವನ್ನು ಶೇಕಡಾ 18ರಷ್ಟು ಹೆಚ್ಚು ಮಾಡಿದೆ.
ಸರ್ಕಾರ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚು ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ ಎಂದು ಕನ್ನಡ ಪಕ್ಷದ ಕಾರ್ಯಕರ್ತರು ತಾಲೂಕಿನ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರಸ್ತುತ ಹೆಚ್ಚಿಸಿರುವ ಶೇಕಡಾ 18ರಷ್ಟು ತೆರಿಗೆಯನ್ನು ರದ್ದು ಮಾಡಬೇಕು. ಇಡೀ ವರ್ಷ ಶೇಕಡಾ 5ರಷ್ಟು ತೆರಿಗೆ ವಿನಾಯಿತಿ ಮುಂದುವರೆಸಬೇಕು. ಅಕ್ರಮ ಸಕ್ರಮ ಜಾರಿಗೊಳಿಸಿ ಒಂದಕ್ಕೆ ಎರಡು ಪಟ್ಟು ತೆರಿಗೆ ವಸೂಲಿ ಮಾಡುವುದನ್ನು ಕೈಬಿಡಬೇಕು ಎಂದರು.
ಅಧಿಕೃತವಾಗಿ ದಾಖಲಾಗಿರುವ ಎಂಎಆರ್-19 ಖಾತಾ ಸ್ವತ್ತುಗಳಿಗೆ ಖಾತೆ ಬದಲಾವಣೆ ಮತ್ತು ಮನೆ ಕಟ್ಟಿಕೊಳ್ಳಲು ಅನುಮತಿ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.