ಬೆಂಗಳೂರು : ಮಹಾರಾಷ್ಟ್ರದಲ್ಲಿ ಕರ್ನಾಟಕ ವಾಹನಗಳ ಮೇಲೆ ಕಲ್ಲು ತೂರಾಟ ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಎಂಇಎಸ್ ಸಂಘಟನೆಯನ್ನ ರಾಜ್ಯದಲ್ಲಿ ನಿಷೇಧಿಸಬೇಕೆಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿದ್ದ ಬೆಳಗಾವಿ ಚಲೋ ಅಭಿಯಾನ ಮೈಸೂರು ಬ್ಯಾಂಕ್ನಿಂದ ಆರಂಭವಾಯಿತು.
ಇದಕ್ಕೂ ಮುನ್ನ ನಗರದ ರೈಲ್ವೆ ನಿಲ್ದಾಣದ ಬಳಿಯಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಮೈಸೂರು ಬ್ಯಾಂಕ್ ವೃತ್ತದಲ್ಲಿ ಎಂಇಎಸ್ ಹಾಗೂ ಶಿವಸೇನಾ ಪಕ್ಷದ ಕಾರ್ಯಕರ್ತರ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆಗೆ ಸಾಥ್ ನೀಡಿದ ಕನ್ನಡಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಸಂಗೊಳ್ಳಿ ರಾಯಣ್ಣ ದೇಶಕ್ಕೆ ತಮ್ಮ ಪ್ರಾಣ ಅರ್ಪಣೆ ಮಾಡಿದ್ದಾರೆ. ರಾಯಣ್ಣ ಪ್ರತಿಮೆ ವಿರೂಪಗೊಳಿಸಿ ಎಂಇಎಸ್, ಶಿವಸೇನೆ ಕಾರ್ಯಕರ್ತರು ಗೂಂಡಾಗಿರಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಪುಂಡಾಟಿಕೆ ಮೆರೆದ ಎಂಇಎಸ್ ನಿಷೇಧದ ಬಗ್ಗೆ ಯಾರೂ ಚಕಾರ ಎತ್ತಬಾರದು. ಇದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆಯಾಗಿದೆ.
ನಾಳೆ ಸಂಜೆಯೊಳಗೆ ಎಂಇಎಸ್ ನಿಷೇಧಿಸಬೇಕು. ನೀಡಿದ ಗಡುವಿನೊಳಗೆ ಸಂಘಟನೆ ನಿಷೇಧಿಸದಿದ್ದರೆ ಮುಂದಿನ ಹಂತದ ಹೋರಾಟದ ಬಗ್ಗೆ ಬುಧವಾರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೇವೆ.
ಸಭೆಯಲ್ಲಿ ಕನ್ನಡ ಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ. ಅಂದು ಹೋರಾಟದ ಕುರಿತು ರೂಪುರೇಷೆ ತೀರ್ಮಾನಿಸಲಾಗುವುದು ಎಂದರು.
ಬೆಳಗಾವಿಯಲ್ಲಿ ಪುಂಡಾಟಕ್ಕೆ ಯಾರ ಕುಮ್ಮಕ್ಕು ಇದೆ, ರಾಜಕಾರಣಿಗಳು ಎಲ್ಲಿ ಹೋಗಿದ್ದಾರೆ ? ಬೆಳಗಾವಿ ಶಾಸಕರು ಎಲ್ಲಿದ್ದಾರೆ ? ಎಂದು ಪ್ರಶ್ನಿಸಿದ ವಾಟಾಳ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.
ಶಿವಸೇನೆ ಕರ್ನಾಟಕದ ಒಳಗೆ ಕಾಲಿಡಬಾರದು. ಶಿವಸೇನೆ ಪುಂಡಾಟಿಕೆ ನಿಲ್ಲಬೇಕು. ಬಸ್ಸುಗಳಿಗೆ ಎಂಇಎಸ್ ಕಾರ್ಯಕರ್ತರು ಹಾನಿ ಮಾಡಿದ್ದಾರೆ. ಎಲ್ಲಾ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಬೆಳಗಾವಿಗೆ ಹೋಗುವಂತೆ ವಾಟಾಳ್ ಕರೆ ನೀಡಿದರು.
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ನಮ್ಮ ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ ನೀಡಿದ್ದಾರೆ. ಭಿನ್ನಾಭಿಪ್ರಾಯ ಮರೆತು ಕನ್ನಡಕ್ಕಾಗಿ ಎಲ್ಲರೂ ಒಂದಾಗಿದ್ದೇವೆ. ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ತಡೆಯಲು ರಾಜ್ಯ ಸರ್ಕಾರ ಎಂಇಎಸ್ ಸಂಘಟನೆ ನಿಷೇಧಿಸಬೇಕು.
ಒಂದು ವೇಳೆ ಬ್ಯಾನ್ ಮಾಡದಿದ್ದರೆ ಬುಧವಾರ ನಡೆಯಲಿರುವ ವಾಟಾಳ್ ನಾಗರಾಜ್ ನೇತೃತ್ವದ ಸಭೆಯಲ್ಲಿ ಎಲ್ಲಾ ಸಂಘಟನೆಗಳ ನಾಯಕರು ಭಾಗಿಯಾಗಿ ಕನ್ನಡಿಗರ ಒಗ್ಗಟ್ಟು ಪ್ರದರ್ಶಿಸುತ್ತೇವೆ ಎಂದರು.
ಓದಿ: ಮದುವೆಯಾಗುವುದಾಗಿ ನಂಬಿಸಿ ಮೋಸ: ಕೊಪ್ಪಳ ಎಸ್ಪಿ ಕಚೇರಿಯ PSI ವಿರುದ್ಧ ಆರೋಪ