ಬೆಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 60-40ರ ಪ್ರಮಾಣದಲ್ಲಿ ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದು, ಇದರಲ್ಲಿ ಯಾವುದೇ ಗಿಮಿಕ್ ಇಲ್ಲ. ನಿಯಮ ಪಾಲನೆ ಮಾಡದೇ ಇದ್ದರೆ ಅಂತಹವರ ವಾಣಿಜ್ಯ ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ ಎಂದು ಮೇಯರ್ ಗೌತಮ್ ಕುಮಾರ್ ಜೈನ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾಮಫಲಕದಲ್ಲಿ ಕನ್ನಡಕ್ಕೆ 60-40ರ ಅನುಪಾತದಲ್ಲಿ ಇರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೇಳಿತ್ತು. ಆದರೆ, ಮಹಾನಗರ ಪಾಲಿಕೆಯಿಂದ ಈಗ ಕಟ್ಟುನಿಟ್ಟಾಗಿ ಇದನ್ನು ಜಾರಿಗೆ ತರುತ್ತಿದ್ದೇವೆ. ನವೆಂಬರ್1 ರಿಂದಲೇ ಇದು ಜಾರಿಗೆ ಬರುತ್ತಿದೆ. ಇದನ್ನು ಪಾಲನೆ ಮಾಡದೇ ಇದ್ದರೆ ವಾಣಿಜ್ಯ ಪರವಾನಗಿ ರದ್ದುಪಡಿಸಲಾಗುತ್ತದೆ. ಇದರಲ್ಲಿ ಯಾವುದೇ ಗಿಮಿಕ್ ಇಲ್ಲ, ಎಲ್ಇಡಿ ನಾಮಫಲಕ ಅಳವಡಿಸಿದವರಿಗೆ ಸ್ವಲ್ಪ ಸಮಯಾವಕಾಶ ನೀಡಲಾಗುತ್ತದೆ ಎಂದರು.
ಕಸ ವಿಲೇವಾರಿ ಸಮಸ್ಯೆ ಸಂಬಂಧ ಸಿಎಂ ಇಂದು ಪಾಲಿಕೆ ಅಧಿಕಾರಿಗಳ ಸಭೆ ನಡೆಸಿದರು. ಒಂದು ಸಮಸ್ಯೆ ಪರಿಹಾರ ಸಂಬಂಧ ಏನೆಲ್ಲಾ ಮಾಡಬಹುದು ಎನ್ನುವ ಕುರಿತು ವಾರದೊಳಗೆ ಸಂಪೂರ್ಣ ವರದಿ ನೀಡಲು ಸೂಚನೆ ನೀಡಿದ್ದಾರೆ. ಕೂಡಲೇ ಸಮಿತಿ ರಚನೆ ಮಾಡಿ ಕಸ ನಿರ್ವಹಣೆ ಮಾಡುವ ಬಗ್ಗೆ ವರದಿ ನೀಡಲಿದ್ದೇವೆ. ಪಾಲಿಕೆಯ ಆದಾಯ ವೃದ್ದಿಗೂ ಏನೆಲ್ಲಾ ಮಾಡಬಹುದು ಎನ್ನುವ ಕುರಿತು ವರದಿ ನೀಡಲು ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಬಗ್ಗೆಯೂ ಚರ್ಚೆ ನಡೆದಿದೆ ಮಳೆ ಇರುವ ಕಾರಣ ಸಮಸ್ಯೆಯಾಗಿದೆ. ಮಳೆ ನಿಂತ ನಂತರ ಹವಾಮಾನ ಇಲಾಖೆ ಮಾಹಿತಿ ಪಡೆದು ಗುಂಡಿ ಮುಚ್ಚುವ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ. ಎರಡು ಮೂರು ದಿನದಲ್ಲಿ ಈ ಕೆಲಸ ಮಾಡಲಾಗುತ್ತದೆ ಎಂದರು.