ಬೆಂಗಳೂರು: ಕರ್ನಾಟಕದಲ್ಲಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದೇ ಎಳೆಯಯನ್ನ ಇಟ್ಟುಕೊಂಡು ಬಂದಿರುವ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಇಂದು ರಿಲೀಸ್ ಆಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಚಿತ್ರದಲ್ಲಿ ಅಪ್ಪಟ ಕನ್ನಡ ಮೇಷ್ಟ್ರು ಆಗಿ ಅಭಿನಯಿಸಿರುವ ನವರಸ ನಾಯಕ ಜಗ್ಗೇಶ್, ಕಾಮಿಡಿಯಿಂದಲೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಶಿಕ್ಷಣ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಇಂಗ್ಲಿಷ್ ಸ್ಕೂಲ್ಗಳ ಮಾಫಿಯಾ ಬಗ್ಗೆ ನಿರ್ದೇಶಕ ಕವಿರಾಜ್ ಸೂಕ್ಷ್ಮವಾಗಿ ತೆರೆ ಮೇಲೆ ಹೇಳಿದ್ದಾರೆ. ಸಿನಿಮಾದಲ್ಲಿ ಕಾಳಿದಾಸ ಕನ್ನಡ ಮೇಷ್ಟ್ರು ಪ್ರೀತಿಸಿ ಮದುವೆಯಾಗಿರೋ ಮೇಘನಾ ಗಾವ್ಕಂರ್ಗೆ ತನ್ನ ಮಗನನ್ನ ಇಂಟರ್ನ್ಯಾಷನಲ್ ಸ್ಕೂಲ್ನಲ್ಲೇ ಓದಿಸಬೇಕು ಎಂಬ ಹಠ. ಹೀಗಾಗಿ ಸಾಮಾನ್ಯ ಮೇಷ್ಟ್ರು, ಹೆಂಡತಿ ಒತ್ತಾಯಕ್ಕೆ ಕಟ್ಟುಬಿದ್ದು ಮಗನ ಸ್ಕೂಲ್ಗೆ ಕಟ್ಟಬೇಕಾದ ಲಕ್ಷ ಲಕ್ಷ ರೂಪಾಯಿ ಹಣವನ್ನ ಹೇಗೆ ಸಂಪಾದನೆ ಮಾಡ್ತಾನೆ ಅನ್ನೋದು ಒಂದು ಕೇಂದ್ರ. ಇನ್ನೊಂದು ಕೇಂದ್ರದಲ್ಲಿ ಬಾಲ್ಯದ ದಿನಗಳನ್ನ ಕಳೆಯದ ಮಗ ಅಮ್ಮನ ಓದು ಓದು ಎಂಬ ಒತ್ತಡಕ್ಕೆ ಸಿಲುಕಿ ಏನಾಗುತ್ತಾನೆ ಅನ್ನೋದು ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದ ಕಥೆ.
ಸಿನಿಮಾದಲ್ಲಿ ಕಾಳಿದಾಸ ಮೇಷ್ಟ್ರು ಆಗಿರುವ ಜಗ್ಗೇಶ್, ತಮ್ಮ ಕಾಮಿಡಿ ಕಚಗುಳಿ ಜೊತೆ ಚಿತ್ರದ ಕ್ಲೈಮಾಕ್ಸ್ನಲ್ಲಿ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತಾರೆ. ಮೇಘನಾ ಗಾವ್ಕಂರ್ ಜಗ್ಗೇಶ್ ಹಠವಾದಿ ಹೆಂಡತಿಯಾಗಿ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿಯಾಗಿ ನಾಗಾಭರಣ, ಇಂಟರ್ನ್ಯಾಶನಲ್ ಸ್ಕೂಲ್ ಹೆಡ್ಮೇಡಂ ಆಗಿ ಹಿರಿಯ ನಟಿ ಅಂಬಿಕಾ, ತಬಲ ನಾಣಿ ಯತಿರಾಜ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.