ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಬಹುದಿನದ ಬೇಡಿಕೆಯಾಗಿರುವ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ. ಆದರೆ ಯೋಜನೆ ಅನುಷ್ಠಾನದ ಕ್ರೆಡಿಟ್ ಪಡೆದುಕೊಳ್ಳಲು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ಏರ್ಪಟ್ಟಿದೆ.
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಯೋಜನೆಯನ್ನು ಉದ್ಘಾಟನೆ ಮಾಡಲು ತರಾತುರಿಯಲ್ಲಿ ಸಿದ್ಧವಾಗಿರುವುದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನ ಕಣ್ಣು ಕೆಂಪಗಾಗುವಂತೆ ಮಾಡಿದೆ.
ಕೇಂದ್ರದಿಂದ ಕ್ಲಿಯರೆನ್ಸ್: ಆ ಭಾಗದ ಜನರ ದಶಕಗಳ ಹೋರಾಟದ ಫಲವಾಗಿ ಕೊನೆಗೂ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಕಳಸಾ ಬಂಡೂರಿ ನಾಲೆ ಯೋಜನೆಗೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ವೇಳೆ ಒಪ್ಪಿಗೆ ಸೂಚಿಸಲಾಗಿತ್ತು. ಅಲ್ಲದೇ 2002 ರಲ್ಲಿ ಈ ಯೋಜನೆಗೆ ಕೇಂದ್ರದಿಂದ ಕ್ಲಿಯರೆನ್ಸ್ ಅನ್ನು ಕೂಡ ಕರ್ನಾಟಕ ಸರ್ಕಾರ ಪಡೆದುಕೊಂಡಿತ್ತು.
ಗೋವಾ ಕ್ಯಾತೆ: ಬೆಳಗಾವಿಯ ಕಣಕುಂಬಿಯಲ್ಲಿ ಯೋಜನೆ ಆರಂಭಕ್ಕೆ 2006 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಆ ಬಳಿಕ ನಡೆದ ಬೆಳವಣಿಗೆಗಳಲ್ಲಿ ಗೋವಾ ಸರ್ಕಾರದಿಂದ ಯೋಜನೆಗೆ ಬಗ್ಗೆ ಆಕ್ಷೇಪಣೆ ಸಲ್ಲಿಕೆ ಮಾಡಲಾಗಿತ್ತು. ಇದರ ಪರಿಣಾಮ ಅಂದಿನ ಕೇಂದ್ರ ಸರ್ಕಾರ ಯೋಜನೆಯ ಅನುಮೋದನೆಗೆ ತಡೆಹಿಡಿದಿತ್ತು. ಆ ಭಾಗದ ರೈತರು ನಿರಂತರವಾಗಿ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ. ಸದ್ಯ ಕೇಂದ್ರ ಜಲ ಸಚಿವಾಲಯ ಯೋಜನೆಗೆ ಅನುಮೋದನೆ ನೀಡಿದೆ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಜನರ ಬಹು ವರ್ಷಗಳ ಕನಸು ಇದೀಗ ನನಸಾಗುತ್ತಿದೆ.
ಆದರೆ, ಇಲ್ಲೂ ಸಹ ರಾಜಕೀಯದ ವಾಸನೆ ಹರಿದಾಡುತ್ತಿದೆ. ಕಳಸಾ ಬಂಡೂರಿ ಯೋಜನೆ ಅನುಷ್ಠಾನ ನಮ್ಮ ಸರ್ಕಾರದಿಂದ ಆಗಿದೆ ಎಂಬ ಪ್ರಚಾರ ನಡೆಸಿ ಉತ್ತರ ಕರ್ನಾಟಕ ಭಾಗದಲ್ಲಿ ವೋಟ್ ಪಡೆಯುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಇದರ ಸುಳಿವು ತಿಳಿದುಕೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಬಿಜೆಪಿಗೆ ಠಕ್ಕರ್ ಕೊಡಲು ಮುಂದಾಗಿವೆ.
ಕಾನೂನಿನಡಿ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ನಮಗೆ ಎದುರಾಗಿದ್ದ ತೊಡಕುಗಳು ಬಗೆಹರಿದಿವೆ. ಗೋವಾ ಸಿಎಂ ಹೇಳಿಕೆಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಇದರಿಂದ ಬಹಳ ದಿನಗಳ ಕನಸು ನನಸಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪರಿಸರ ಇಲಾಖೆ ಅನುಮತಿ: ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಅನುಮೋದನೆ ನೀಡಿದೆ. ಕರ್ನಾಟಕ ಸರ್ಕಾರದ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ಸಿಕ್ಕಿರುವುದರಿಂದ ಎಲ್ಲ ಕಾನೂನಿನ ಸಂಕಷ್ಟಗಳು ನಿವಾರಣೆಯಾಗಿದೆ. ನಮಗೆ ಯೋಜನೆ ಅನುಷ್ಠಾನ ಮಾಡಲು ಯಾವುದೇ ಸಮಸ್ಯೆಗಳಿಲ್ಲ ಎಂಬ ವಿಶ್ವಾಸದಲ್ಲಿ ಬಿಜೆಪಿ ಸರ್ಕಾರ ಇದೆ. ಆದರೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರ್ಕಾರದ ಮಾತನ್ನು ಒಪ್ಪುತ್ತಿಲ್ಲ.
ಡಬಲ್ ಇಂಜಿನ್ದಿಂದ ವಂಚನೆ : ಎರಡು ವರ್ಷಗಳಿಂದ ಯೋಜನೆ ಅನುಷ್ಠಾನಕ್ಕೆ ನಿರಂತರ ಹೋರಾಟ ನಡೆಸಿದ್ದೆವು. ನಮ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಇದುವರೆಗೂ ಏಕೆ ಸಾಧ್ಯವಾಗಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಚುನಾವಣಾ ವರ್ಷ ಸಮೀಪಿಸುತ್ತಿರುವುದರಿಂದ ಜನರನ್ನು ದಿಕ್ಕು ತಪ್ಪಿಸಲು ಸರ್ಕಾರ ಸುಳ್ಳು ಹೇಳುತ್ತಿದೆ. ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಜನರಿಗೆ ಮಹಾ ವಂಚನೆ ಎಂದು ಆರೋಪಿಸಿದ್ದಾರೆ.
ಪರಿಷ್ಕೃತ ಡಿಪಿಆರ್ ಗೆ ಮಾತ್ರ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ, ಯಾವ ದಿನಾಂಕ ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಈ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಒಟ್ಟಾರೆ ಮತ ಬ್ಯಾಂಕ್ ಪಡೆಯಲು ಪ್ರಯತ್ನಿಸುತ್ತಿರುವ ಮೂರು ಪಕ್ಷಗಳು, ಕಳಸಾ ಬಂಡೂರಿ ನಾಲೆ ಯೋಜನೆ ಅನುಷ್ಠಾನದ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿರುವುದಂತೂ ಸತ್ಯ.
ಇದನ್ನೂಓದಿ:ಕಳಸಾ ಬಂಡೂರಿ ಯೋಜನೆಗೆ ಸಿಕ್ತು ಅನುಮತಿ: ಹೀಗಿದೆ ಹೋರಾಟದ ಹಾದಿ..