ಕೆಆರ್‌ಪುರ : ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳು ಕೋವಿಡ್-19 ಚಿಕಿತ್ಸೆಗೆ ಸ್ಪಂದಿಸಬೇಕು. ಜತೆಗೆ ಶೇ. 50ರಷ್ಟು ಹಾಸಿಗೆ ಕೊಡದೆ ವಿಳಂಬ ಮಾಡಿದ್ರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವು ಎಂದು ಸಚಿವ ಬೈರತಿ ಬಸವರಾಜ್ ಎಚ್ಚರಿಕೆ ನೀಡಿದರು.
ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಮಹದೇವಪುರ ವಲಯದ ಖಾಸಗಿ ಆಸ್ಪತ್ರೆಗಳಾದ ಕೋಲಂಬಿಯಾ ಏಷ್ಯಾ, ಮಣಿಪಾಲ್, ಸಾಕ್ರಾ, ವೈದೇಹಿ, ಕ್ಲೋಡ್‌ನೈನ್,ಈಸ್ಟ್ ಪಾಯಿಂಟ್, ರೈಂಬೊ, ಜೀವಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ಅರ್ಧದಷ್ಟು ಹಾಸಿಗೆ ನೀಡಲು ಹಿಂದೇಟು ಹಾಕುತ್ತಿದ್ದವರಿಗೆ ಖಡಕ್ ಎಚ್ಚರಿಕೆ ನೀಡಿದರು. ಕೊರೊನಾ ಚಿಕಿತ್ಸೆಗೆ ಹಾಸಿಗೆಗಳನ್ನ ನೀಡಬೇಕು. ಇಲ್ಲವಾದ್ರೆ ಒಪಿಡಿ ಬಂದ್ ಮಾಡಿ ಸರ್ಕಾರದ ಸೌಲಭ್ಯಗಳನ್ನು ರದ್ದು ಮಾಡಲಾಗುವುದೆಂದು ಹೇಳಿದರು.
ಸರ್ಕಾರ ಕೊರೊನಾ ಸೋಂಕಿತರ ಚಿಕಿತ್ಸೆಗೆ ಹಲವು ಯೋಜನೆಗಳನ್ನು ರೂಪಿಸಿದೆ. ಆ ಯೋಜನೆಗೆ ಖಾಸಗಿ ಆಸ್ಪತ್ರೆಗಳು ಸೂಕ್ತವಾಗಿ ಸ್ಪಂದಿಸುವಂತೆ ತಿಳಿಸಿದರು. ಕೊರೊನಾ ಸೋಂಕಿತರಿಗೆ ಯಾವುದೇ ರೀತಿಯ ಸಮಸ್ಯೆಯಾಗದ ಹಾಗೆ ನೋಡಿಕೊಳ್ಳುವಂತೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಸೂಚಿಸಿದರು.
ಸಾಕ್ರಾ ಆಸ್ಪತ್ರೆಯು 300 ಬೆಡ್ಗಳನ್ನು ಹೊಂದಿದೆ. ಅದರಲ್ಲಿ ಈಗಾಗಲೇ ನೂರು ಹಾಸಿಗೆಗಳನ್ನು ಕೋವಿಡ್-19 ಚಿಕಿತ್ಸೆಗೆ ಬಳಸಲಾಗುತ್ತಿದೆ. ಇನ್ನೂ ಉಳಿದ 50 ಹಾಸಿಗೆಗಳನ್ನು ಹಸ್ತಾಂತರ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸರ್ಕಾರ ಹೇಳಿದಂತೆ ಒಂದು ಬೆಡ್ ಕಡಿಮೆ ಆದರೂ ನಾವು ಒಪ್ಪುವುದಿಲ್ಲ ಎಂದರು.
ಮಣಿಪಾಲ್ ಹಾಗೂ ವೈದೇಹಿ ಆಸ್ಪತ್ರೆ ಅಧಿಕಾರಿಗಳು ಸರ್ಕಾರಕ್ಕೆ ಅರ್ಧದಷ್ಟು ಹಾಸಿಗೆಗಳನ್ನು ಬಿಟ್ಟು ಕೊಡಲು ಒಪ್ಪದಿದ್ದಾಗ ಸಚಿವರು ಗರಂ ಆದರು. ಆಸ್ಪತ್ರೆಗೆ ನೀಡಲಾದ ಬೆಸ್ಕಾಂ ಸೌಲಭ್ಯ, ಬಿಡಬ್ಲ್ಯೂಎಸ್ಎಸ್ಬಿ ಸೌಲಭ್ಯಗಳನ್ನು ರದ್ದು ಪಡಿಸುವಂತೆ ಹೇಳಿದರು. ಇದರಿಂದ ಭಯಭೀತರಾದ ಆಸ್ಪತ್ರೆಯವರು ಅರ್ಧದಷ್ಟು ಹಾಸಿಗೆಯನ್ನು ನೀಡಲು ಒಪ್ಪಿಗೆ ನೀಡಿದರು.
ಖಾಸಗಿ ಆಸ್ಪತ್ರೆಗಳ ಮಾಹಿತಿಯನ್ನು ಆಸ್ಪತ್ರೆಗಳ ಮುಖ್ಯಸ್ಥರು ಸಮರ್ಪಕವಾಗಿ ನೀಡುವಂತೆ ಈ ಸಂದರ್ಭದಲ್ಲಿ ತಾಕೀತು ಮಾಡಿದರು.