ಬೆಂಗಳೂರು: 2021ರ ಜನವರಿ 14ರಿಂದ ಅನ್ವಯವಾಗುವಂತೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರಿಗೆ ಒಂದು ವರ್ಷದ ವಿಸ್ತರಣೆ ನೀಡಲು ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
ಕೆ ಶಿವನ್ ಅವರ ಇಸ್ರೋ ಅಧ್ಯಕ್ಷ ಸ್ಥಾನವು 2021ರ ಜನವರಿ 14ಕ್ಕೆ ಮುಕ್ತಾಯವಾಗಲಿದೆ. ಈ ಅವಧಿಯನ್ನು ಒಂದು ವರ್ಷ ಅಂದರೇ 2022ರ ಜನವರಿ 14ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಹರಿಯಾಣ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ; ಕಾರಣ ಕೊಟ್ಟ ರಾಜಕೀಯ ವಿಶ್ಲೇಷಕರು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆ ಯೋಜನೆಗಳಾದ ಗಗನಯಾನ, ಚಂದ್ರಯಾನ- 3 ಮತ್ತು ಎನ್- ಸ್ಪೇಸ್‌ನಂತಹ ಯೋಜನೆಗಳನ್ನು ಮುನ್ನಡೆಸಲಿದ್ದಾರೆ.
ತಮಿಳುನಾಡು ಮೂಲದ ಶಿವನ್ ಅವರು 1982ರಿಂದ ಇಸ್ರೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. 2018ರ ಜನವರಿ 10ರಂದು ಅಂದಿನ ಇಸ್ರೋ ಅಧ್ಯಕ್ಷ ಎಕೆ ಕಿರಣ್ ಕುಮಾರ್ವ ಅವರು ಹುದ್ದೆಯಿಂದ ನಿವೃತ್ತರಾದ ನಂತರ ಕೆ ಶಿವನ್ ನೇಮಕವಾದರು. ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ಇಳಿಸುವ ಚಂದ್ರಯಾನ-2 ಕೈಗೊಂಡ ಇಸ್ರೋ ಮುಖ್ಯಸ್ಥರಾಗಿದ್ದಾರೆ.
ಶಿವನ್ ಅವರು ಈಗ ಬಾಹ್ಯಾಕಾಶ ಇಲಾಖೆಯ ಇಸ್ರೋ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ 2022ರ ಜನವರಿ 14ರವರೆಗೆ ಮುಂದುವರಿಯಲಿದ್ದಾರೆ. ಶಿವನ್ ಹೊರತುಪಡಿಸಿ ಇತರ ಇಬ್ಬರು ಹಿರಿಯ ವಿಜ್ಞಾನಿಗಳಾದ ವಿಎಸ್ಎಸ್ಸಿಸಿ ನಿರ್ದೇಶಕ ಎಸ್.ಸೋಮನಾಥ್ ಮತ್ತು ಯುಆರ್ಎಸ್ಎಸಿ ನಿರ್ದೇಶಕ ಕುನ್ಹಿಕೃಷ್ಣನ್ ಉನ್ನತ ಮಟ್ಟದಲ್ಲಿ ಮುಂದುವರಿಯಲಿದ್ದಾರೆ.