ಬೆಂಗಳೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಅಂಶಗಳ ಬಗ್ಗೆ ಮಾರ್ಚ್ 31 ರಂದು ಸರ್ವಪಕ್ಷಗಳ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ವಿಧಾನಸಭೆಯಲ್ಲಿ ಹೇಳಿದರು.
2022-23 ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಅನುದಾನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಹೇಗೆ ನಡೆಯಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ನಿಟ್ಟಿನಲ್ಲಿ ಏನೇನು ಮಾಡಬೇಕು ಎಂದು ನಾಲ್ಕು ಬಾರಿ ಕಾನೂನು ಸಚಿವರು ಮತ್ತು ಸಚಿವ ಸಂಪುಟದಲ್ಲೂ ಚರ್ಚೆ ನಡೆಸಲಾಗಿತ್ತು. ಸರ್ವ ಪಕ್ಷ ಸಭೆ ಕೂಡ ಮಾಡಲಾಗಿದೆ.
ಅನ್ಯಾಯವಾಗಲು ಬಿಡುವುದಿಲ್ಲ: ಪ್ರತಿಪಕ್ಷದ ನಾಯಕರು ಈ ತಿಂಗಳ 31 ರಂದು ಸರ್ವಪಕ್ಷ ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ. ಅದರಂತೆ 31 ರಂದು ಎಲ್ಲರೂ ಕುಳಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚರ್ಚೆ ಮಾಡಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳೋಣ. ನಂತರ ಚುನಾವಣೆಗೆ ಹೋಗೋಣ. ಯಾವುದೇ ಕಾರಣಕ್ಕೂ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ವೇಳೆ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷ ಅಧಿಕಾರ ಇರಲಿ, ಬಿಡಲಿ.. ನಾವು ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಿ ಚುನಾವಣೆಗೆ ಹೋಗುವುದಿಲ್ಲ. ಈ ಸಮುದಾಯಕ್ಕೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂಬುದು ಸುಪ್ರೀಂಕೋರ್ಟ್‍ನಲ್ಲಿದೆ. ನಾವು ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳೋಣ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಈಶ್ವರಪ್ಪ ಮನವಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂಬುದರ ಬಗ್ಗೆ ಗೊಂದಲ ಉಂಟಾಗಿದೆ. ಒಟ್ಟು ಶೇ.51ರಷ್ಟು ಮೀಸಲಾತಿಯನ್ನು ನೀಡಬೇಕಾಗಿದೆ. ಆದರೆ, ಇದರ ಬಗ್ಗೆ ಕೆಲ ಗೊಂದಲಗಳು ಇರುವುದರಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹಿಂದುಳಿದ ವರ್ಗದವರಿಗೆ ನಾವು ಸಾಮಾಜಿಕ ಮೀಸಲಾತಿ ಕೊಡದಿದ್ದರೆ ಸಂವಿಧಾನ ನೀಡಿರುವ ಮೊಟಕುಗೊಳಿಸಿದಂತಾಗುತ್ತದೆ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನಿಂದ ಹಿಂದುಳಿದ ವರ್ಗಕ್ಕೆ ಮೀಸಲಾತಿ ಸಿಗದಿದ್ದರೆ ಅನ್ಯಾಯವಾಗುತ್ತದೆ. ಹಾಗಾಗಿ, ಸರ್ಕಾರ ಈ ಬಗ್ಗೆ ಏನು ಮಾಡಿದೆ. ಅದನ್ನು ಹೇಳಬೇಕು. ಈ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಸಮಿತಿ ಮಾಡಿದ್ದೀರಿ, ಆ ಸಮಿತಿ ಇನ್ನೂ ವರದಿ ನೀಡಿಲ್ಲ. ಜಿಲ್ಲಾ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡದೆ ಚುನಾವಣೆ ನಡೆಸುವುದು ಸರಿಯಲ್ಲ. ಈ ಸದನದಲ್ಲಿ ಸರ್ಕಾರ ಯಾವುದಾದರೊಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.
ಆಗ ಸಚಿವ ಈಶ್ವರಪ್ಪ ಮಾತನಾಡಿ, ನೀವು ಕೂಡ ಅನೇಕ ವರ್ಷಗಳಿಂದ ಹಿಂದುಳಿದ ವರ್ಗಗಳ ಪರ ಹೋರಾಟ ನಡೆಸುತ್ತಾ ಬಂದಿದ್ದೀರಿ. ಅದಕ್ಕೆ ನಾನು ಅಭಿನಂದಿಸುತ್ತೇನೆ. ನಮ್ಮ ಸರ್ಕಾರ ಕೂಡ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನರೇಗಾದಲ್ಲಿ ಗುರಿ ಮೀರಿ ಸಾಧನೆ : ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಗುರಿಯನ್ನು ಮೀರಿ ನಾವು ಕೆಲಸ ಮಾಡಿದ್ದೇವೆ ಎಂದ ಸಚಿವ ಕೆ. ಎಸ್ ಈಶ್ವರಪ್ಪ, ಕಳೆದ ವರ್ಷ ನನಗೆ ಕೇಂದ್ರ ಸರ್ಕಾರ 13 ಕೋಟಿ ಮಾನವ ದಿನಗಳನ್ನು ನೀಡಿತ್ತು. ನಾವು ಕೇಂದ್ರ ಸರ್ಕಾರ ನೀಡಿದ್ದ ಗುರಿಗಿಂತಲೂ ಹೆಚ್ಚುವರಿಯಾಗಿ ಅಂದರೆ 13.10 ಕೋಟಿ ಮಾನವ ದಿನಗಳನ್ನು ತಲುಪಿದ್ದೇವೆ. ಕೇಂದ್ರದಿಂದ ನಮಗೆ ಎಲ್ಲ ರೀತಿಯಲ್ಲೂ ಸಹಕಾರ ಸಿಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಜಿಟಲ್ ಗ್ರಂಥಾಲಯ : ರಾಜ್ಯದ ಒಟ್ಟು 5,627 ಗ್ರಾಮ ಪಂಚಾಯತ್ಗಳ ಪೈಕಿ 2,214 ಗ್ರಾಮ ಪಂಚಾಯತ್ಗಳಿಗೆ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಹೀಗೆ ಇಲಾಖೆಯು ಜನಪರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಓದಿ: 'ಮನೆ ಮನೆಗೆ ಗಂಗೆ 'ಎಂಬ ಕಾರ್ಯಕ್ರಮದಡಿ 97.91 ಲಕ್ಷ ನಲ್ಲಿ ಸಂಪರ್ಕ : ಸಚಿವ ಕೆ.ಎಸ್. ಈಶ್ವರಪ್ಪ