ಬೆಂಗಳೂರು: ನಗರದಲ್ಲಿ ನಡೆಯುವ ಕೆಲ ನೈಟ್ ಪಾರ್ಟಿಗಳೇ ಹಾಗೆ, ಅಲ್ಲಿ ಮಾದಕ ದ್ರವ್ಯದ ಅಮಲಿಲ್ಲದಿದ್ದರೆ ಪಾರ್ಟಿಯೇ ಅಪೂರ್ಣ. ಅಷ್ಟರಮಟ್ಟಿಗೆ ಮಾದಕ ವಸ್ತುಗಳನ್ನು ಇಲ್ಲಿ ಬಳಸಲಾಗುತ್ತದೆ. ಇದ್ದಕ್ಕಿದ್ದಂತೆ ನಶೆ ನೈಟ್ನ ನಿಶಾಚರಗಳನ್ನು ಬೆಂಗಳೂರಿನ ಜೆ.ಪಿ ನಗರ ಠಾಣಾ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಹೀಗೆ ಖೆಡ್ಡಾಕ್ಕೆ ಬಿದ್ದವರಲ್ಲಿ ಪ್ರಮುಖನಾಗಿ ಕಾಣಿಸುತ್ತಿರುವನೇ ರವಿಕುಮಾರ್ ಅಲಿಯಾಸ್ ಬಿಡಿಎ ರವಿ.
ಮೂಲತಃ ಆಂಧ್ರಪ್ರದೇಶದವನಾದ ರವಿ ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಆರಂಭದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದ ರವಿ ಜೆ.ಪಿ ನಗರದ ಸಂಸ್ಕೃತಿ ಲೇಔಟ್ನಲ್ಲಿ ಸ್ವಂತ ಮನೆ ಹೊಂದಿದ್ದಾನೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವಾಗಲೇ ಬಿಡಿಎ ಲಿಂಕ್ ಪಡೆದಿದ್ದ. ಬಳಿಕ ಬಿಡಿಎನಲ್ಲಿ ಬ್ರೋಕರ್ ಕೆಲಸ ಮಾಡುತ್ತಲೇ ರವಿ ಅಲಿಯಾಸ್ ಬಿಡಿಎ ರವಿ ಅಂತಲೇ ಫೇಮಸ್ ಆಗಿದ್ದ.
ಓದಿ: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಕಬಳಿಸುವ ಯತ್ನ ಆರೋಪ: ಐವರು ಬಿಡಿಎ ಇಂಜಿನಿಯರ್ಗಳ ಬಂಧನ
ಬಿಡಿಎ ಹಳೆ ಸೈಟ್ಗಳಿಗೆ ಮರು ಜೀವ ಕೊಡುವುದಲ್ಲಿ ರವಿ ಚಾಣಾಕ್ಷ. ಅಧಿಕಾರಿಗಳಿಗೆ ಲಂಚ ನೀಡಿ ಸೈಟ್ಗಳನ್ನು ಮಾರಾಟ ಮಾಡಿಸುತಿದ್ದ. ಒಂದು ಸೈಟ್ ಡೀಲ್ ಮಾಡಿದರೆ ಸುಮಾರು ಒಂದು ಕೋಟಿಯಷ್ಟು ಹಣ ಮಾಡ್ತಿದ್ದ ಎನ್ನಲಾಗಿದೆ. ಅದೇ ಹಣದಲ್ಲಿ ಹೆಚ್ಎಸ್ಆರ್ ಲೇಔಟ್ ಸೈಟ್ಗಳನ್ನು ಖರೀದಿಸಿ ಮಾರಾಟ ಸಹ ಮಾಡಿದ್ದ. ಒಬ್ಬರ ಹೆಸರಿನಲ್ಲಿರುವ ಸೈಟ್ನ್ನ ಇನ್ನೊಬ್ಬರಿಗೆ ಮಾಡಿಸಿ ಕೊಡುವ ಕೆಲಸವನ್ನೂ ಈ ರವಿ ಸಲೀಸಾಗಿ ಮಾಡುತ್ತಿದ್ದ. ಹೀಗೆ ಕೋಟಿ ಕೋಟಿ ಹಣ ಗಳಿಸಿದ್ದವನಿಗೆ ಡ್ರಗ್ಸ್ ಪಾರ್ಟಿ ಲಿಂಕ್ ಸಿಗಲು ಕಾರಣ ಕ್ಯಾಸಿನೊ ಗೀಳು.
ಈ ರವಿಗಿದ್ದದ್ದು ಕ್ಯಾಸಿನೊ ಹುಚ್ಚು. ಇದೇ ಹುಚ್ಚಿಗೆ ಶ್ರೀಲಂಕಾ, ಗೋವಾಗಳ ಕ್ಯಾಸಿನೋಗಳಲ್ಲಿ ಪಾಲ್ಗೊಂಡು ಕೋಟಿ ಕೋಟಿ ಕಳೆದಿದ್ದ. ಶ್ರೀಲಂಕಾ ಕ್ಯಾಸಿನೊದಲ್ಲಿ ಮುಜಾಮಿಲ್ ಪರಿಚಯ ಮಾಡಿಕೊಂಡಿದ್ದ. ನಂತರ ಮುಜಾಮಿಲ್, ರವಿ, ಶಾಬುದ್ದಿನ್ ಸೇರಿ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಬ್ಯುಸಿನೆಸ್ ಪ್ಲ್ಯಾನ್ ಮಾಡುತ್ತಿದ್ದರು. ಐವರಿ ಕೋಸ್ಟಾ ಪ್ರಜೆ ಢೋಸಾ ಖಲಿಫಾ ಮೂಲಕ ಡ್ರಗ್ಸ್ ತರಿಸುತಿದ್ದ ಮೂವರೂ ಹೋಟೆಲ್ ರೂಮ್ ಬುಕ್ ಮಾಡಿ ಅಲ್ಲಿಯೇ ಡ್ರಗ್ಸ್ ಪಾರ್ಟಿ ಮಾಡಿಸುತ್ತಿದ್ದರು. ಈಗಾಗಲೇ ಆರೋಪಿಗಳು 14.84 ಗ್ರಾಂ ಕೊಕೇನ್,15 ಗ್ರಾಂ ಎಕ್ಸ್ಟೆಸಿ ಟ್ಯಾಬ್ಲೆಟ್ 96,650ರೂ. ಹಣದ ಸಮೇತ ಜೆ.ಪಿ. ನಗರ ಪೊಲೀಸರ ಅತಿಥಿಯಾಗಿದ್ದಾರೆ. ಸದ್ಯ ಆರೋಪಿಗಳ ವಿಚಾರಣೆ ಮುಂದುವರೆದಿದೆ.