ಬೆಂಗಳೂರು: ಹಾಲಿ ಅಧ್ಯಕ್ಷರ ಅವಧಿ ಸಪ್ಟೆಂಬರ್ 17ರ ತನಕ ಇದ್ದು ಅವಧಿಗೆ ಮುಂಚೆ ಚುನಾವಣೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಅಧ್ಯಕ್ಷರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಚುನಾವಣೆಯನ್ನು ಮುಂದೂಡಿ ರಾಜ್ಯ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ಇನ್ನು ಅಧ್ಯಕ್ಷಗಾದಿಗಾಗಿ ತೀವ್ರ ಪೈಪೋಟಿ ನಡೆಸುತ್ತಿರುವ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಈಗಾಗಲೇ ಕಾಂಗ್ರೆಸ್ ನ ಮೂರು ನಿರ್ದೇಶಕರುಗಳನ್ನು ತಮ್ಮತ್ತ ಸೆಳೆದಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಕೆಎಂಎಫ್ ಅಧ್ಯಕ್ಷರ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
ಇದಕ್ಕೆ ಪೂರಕ ಎಂಬಂತೆ ಇಂದು ಕೆಎಂಎಫ್ನ ಆವರಣದ ಒಳಗೆ ಮಾಧ್ಯಮದವರನ್ನು ನಿರ್ಬಂಧಿಸಿ ಚುನಾವಣಾ ಅಧಿಕಾರಿಗಳು ಆದೇಶ ನೀಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಕೆಎಂಎಫ್ ಗೆ ಆಗಮಿಸಿದ ಎಚ್. ಡಿ. ರೇವಣ್ಣ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡದೇ ಒಳಹೋಗಿದ್ದಾರೆ. ಬಳಿಕ ಅಧ್ಯಕ್ಷ ನಾಗರಾಜ, ಬಿಜೆಪಿ ಶಾಸಕರಾದ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಕೆ ಎಂಎಫ್ ಗೆ ಆಗಮಿಸಿದರು.
ಒಟ್ಟಾರೆ ಈಗ ಕೆಎಂಎಫ್ ಚುನಾವಣೆ ಅಖಾಡಕ್ಕೆ ಅಧಿಕೃತವಾಗಿ ಬಿಜೆಪಿ ಎಂಟ್ರಿ ಕೊಟ್ಟಿದ್ದು ಕೆಎಂಎಫ್ ಅಧ್ಯಕ್ಷರ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.